ಬೆಂಗಳೂರು: ಕೋವಿಡ್ ಮಹಾಮಾರಿಗೆ ದೇಶದಲ್ಲಿಯೇ ಮೊದಲ ಬಲಿಯಾಗಿದ್ದು, ಕರ್ನಾಟಕದ ಕಲಬುರಗಿಯಲ್ಲಿ. ಆ ಕರಾಳ ದಿನಕ್ಕೆ ಇಂದಿಗೆ (ಮಾರ್ಚ್ 10) ಒಂದು ವರ್ಷ!
ಈವರೆಗೂ ಕೋವಿಡ್ ವೈರಸ್ ದೇಶದಲ್ಲಿ ಬರೋಬ್ಬರಿ 1,57,968, ರಾಜ್ಯದಲ್ಲಿ 12,373 ಮಂದಿಯನ್ನು ಬಲಿ ಪಡೆದಿದೆ. ಈ ಮೂಲಕ ಕಳೆದ ಒಂದು ವರ್ಷದಲ್ಲಿ ನಿತ್ಯ ಸರಾಸರಿ ದೇಶದಲ್ಲಿ 430 ಮಂದಿ, ರಾಜ್ಯದಲ್ಲಿ 33 ಮಂದಿ ಸೋಂಕಿನಿಂದ ಜೀವ ಕಳೆದುಕೊಂಡಂತಾಗಿದೆ.
2020 ಜನವರಿ 27 ರಂದು ದೇಶದಲ್ಲಿ (ಕೇರಳ) ಮೊದಲ ಕೋವಿಡ್ ಪ್ರಕರಣ ವರದಿಯಾಗಿತ್ತು. ಆದರೆ, ಸೋಂಕಿತರ ಸಾವಾಗಿರಲಿಲ್ಲ. ಸೌದಿ ಅರೇ ಬಿಯಾ ಪ್ರಯಾಣ ಹಿನ್ನೆಲೆ ಹೊಂದಿದ್ದ ಕಲಬುರಗಿಯ 76 ವರ್ಷದ ವೃದ್ಧ ಮಾರ್ಚ್10 ರಂದು ಮೃತಪಟ್ಟಿದ್ದು, ಮಾ.12ರಂದು ಸೋಂಕು ತಗುಲಿರುವುದು ದೃಢಪಟ್ಟಿತ್ತು. ಇದೇ ದೇಶದ ಮೊದಲ ಕೋವಿಡ್ ಸಾವಾಗಿತ್ತು. ಬಳಿಕ ಮಾರ್ಚ್ ಅಂತ್ಯಕ್ಕೆ ರಾಜ್ಯದಲ್ಲಿ ಮೂವರು, ದೇಶದಲ್ಲಿ 35 ಮಂದಿ ಸೋಂಕಿ ಬಲಿಯಾಗಿದ್ದರು.
ಸೋಂಕಿತರ ಸಾವಿನಲ್ಲಿ ಕರ್ನಾಟಕ 3ನೇ ಸ್ಥಾನದಲ್ಲಿದ್ದು, ಮಹಾರಾಷ್ಟ್ರ (52,500), ತಮಿಳುನಾಡು (12521) ಮೊದಲ 2 ಸ್ಥಾನದಲ್ಲಿವೆ. ಸದ್ಯ ರಾಜ್ಯದ 9.56 ಲಕ್ಷ ಸೋಂಕಿತರಲ್ಲಿ ಶೇ1.3ರಷ್ಟು ಮೃತಪಟ್ಟಿದ್ದಾರೆ. ಶೇ 98 ಮಂದಿ ಗುಣಮುಖರಾಗಿದ್ದಾರೆ. ಉಳಿದ ಶೇ 0.7 ರಷ್ಟು ಮಂದಿ ಚಿಕಿತ್ಸೆ ಆರೈಕೆಯಲ್ಲಿದ್ದಾರೆ. ಸಾವಿನಲ್ಲಿಬೆಂಗಳೂರು(4503), ಮೈಸೂರು (1035), ದಕ್ಷಿಣ ಕನ್ನಡ(738), ಧಾರವಾಡ (619),ಬಳ್ಳಾರಿ(597) ಮೊದಲ ಐದು ಸ್ಥಾನದಲ್ಲಿವೆ. ಮೂರಂಕಿಯಿಂದ ಬೆರಳೆಣಿಕೆಯ ಹಾದಿ: ಒಂದು ವರ್ಷದಲ್ಲಿ ಒಂದೇ ದಿನ ಅತಿ ಹೆಚ್ಚು ಸಾವು ದೇಶದಲ್ಲಿ 1300, ರಾಜ್ಯದಲ್ಲಿ 150 ಗಡಿಗೆಸಮೀಪಿಸಿತ್ತು. ಇನ್ನು ರಾಜ್ಯದಲ್ಲಿ ಜುಲೈ 13 ರಿಂದ ಸೆಪ್ಟೆಂಬರ್ 13ವರೆಗೂ ಮೂರು ತಿಂಗಳು ನಿತ್ಯ ಸರಾಸರಿ 100 ಸೋಂಕಿತರ ಸಾವಾಗಿತ್ತು.75ಕ್ಕೂ ಹೆಚ್ಚು ಬಾರಿ ಸೋಂಕಿತರ ಸಾವಿನ ಸಂಖ್ಯೆ 100 ಗಡಿದಾಟಿದೆ. ಸದ್ಯ ಸಾವು ಬೆರಳೆಣಿಕೆಗೆ ಇಳಿದಿದ್ದು, ರಾಜ್ಯದಲ್ಲಿ ಕಳೆದ ಎರಡು ತಿಂಗಳಲ್ಲಿ (2021 ಜನವರಿ-ಫೆಬ್ರವರಿ) ನಿತ್ಯ ಸರಾಸರಿನಾಲ್ಕು ಸೋಂಕಿತರ ಸಾವಾಗಿದೆ. ಇನ್ನು ದೇಶದಲ್ಲಿ ನಿತ್ಯ ಸೋಂಕಿತರ ಸಾವು 100 ಆಸುಪಾಸಿನಲ್ಲಿದೆ.
ತಿಂಗಳು ಸಾವು
2020 ಮಾರ್ಚ್ 3
ಏಪ್ರಿಲ್ 18
ಮೇ 30
ಜೂನ್ 195
ಜುಲೈ 2,068
ಆಗಸ್ಟ್ 3,388
ಸೆಪ್ಟೆಂಬರ್ 3,162
ಅಕ್ಟೋಬರ್ 2304
ನವೆಂಬರ್ 610
ಡಿಸೆಂಬರ್ 312
ಜನವರಿ(2021) 127
ಫೆಬ್ರವರಿ 119 ಸೋಂಕಿತರ ಸಾವಾಗಿದೆ.
ವಯಸ್ಸು ಸಾವು
0-9 28
10-19 46
20-49 2,165
50-59 2,677
60-90 7,277
90-99 160
–ಜಯಪ್ರಕಾಶ್ ಬಿರಾದಾರ್