ಹೊಸದಿಲ್ಲಿ: ಕೇರಳವು ಕೊರೊನಾ ಸೋಂಕಿನ “ಹಾಟ್‌ಬೆಡ್’ ಆಗಿ ಬದಲಾಗಿರುವಂತೆಯೇ ನೆರೆಯ ಕರ್ನಾಟಕ ಮತ್ತು ತಮಿಳುನಾಡಿನಲ್ಲೂ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬರುತ್ತಿದೆ. ಪ್ರವಾಸಿಗರ ಸಂಖ್ಯೆ ಹೆಚ್ಚಿರುವಂಥ ಹಿಮಾಚಲ ಪ್ರದೇಶದಲ್ಲೂ ದಿನೇ ದಿನೆ ಕೊರೊನಾ ಕಾಟ ತೀವ್ರಗೊಳ್ಳುತ್ತಿದೆ. ಈ ಎಲ್ಲ ಬೆಳವಣಿಗೆಗಳು ದೇಶಕ್ಕೆ ಸೋಂಕಿನ 3ನೇ ಅಲೆ ಕಾಲಿಟ್ಟಿತೇ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ.
ಕೇರಳದಲ್ಲಿ ಇನ್ನೂ 2ನೇ ಅಲೆಯೇ ಮುಗಿದಿಲ್ಲ ಎಂದು ದತ್ತಾಂಶಗಳು ಹೇಳುತ್ತಿವೆಯಾದರೂ ಜೂನ್ ತಿಂಗಳ ಕೊನೆಯ ವಾರದಲ್ಲಿ ಅಲ್ಲಿಯ ಟೆಸ್ಟ್ ಪಾಸಿಟಿವಿಟಿ ದರ ಶೇ.9.44ಕ್ಕೆ ಕುಸಿದಿತ್ತು. ದೈನಂದಿನ ಸೋಂಕಿತರ ಸಂಖ್ಯೆಯೂ 8 ಸಾವಿರಕ್ಕೆ ಇಳಿದಿತ್ತು. ಆದರೆ ಈಗ ಪ್ರತೀ ದಿನವೂ 20 ಸಾವಿರಕ್ಕಿಂತ ಹೆಚ್ಚು ಪ್ರಕರಣಗಳು ವರದಿಯಾಗುತ್ತಿವೆ.
ಇನ್ನು, ಕೇರಳದ ಜತೆ ಗಡಿ ಹಂಚಿಕೊಂಡಿರುವ ಕರ್ನಾಟಕ ಹಾಗೂ ತಮಿಳುನಾಡಿನಲ್ಲೂ ನಿಧಾನವಾಗಿ ಸೋಂಕು ವ್ಯಾಪಿಸಲಾರಂಭಿಸಿದೆ. ತಮಿಳುನಾಡು ಸರಕಾರವು ಕೆಲವು ನಿರ್ಬಂಧಗಳನ್ನು ಇನ್ನಷ್ಟು ದಿನಗಳಿಗೆ ವಿಸ್ತರಿಸಿದೆ. ಜತೆಗೆ ಹೋಂ ಕ್ವಾರಂಟೈನ್‌ಗೆ ಅನುಮತಿ ನೀಡದಂತೆ ಅಧಿಕಾರಿಗಳಿಗೆ ರಾಜ್ಯ ಸರಕಾರ ಸೂಚಿಸಿದೆ. ಅನುಮತಿ ನೀಡಿದರೆ ಸೋಂಕಿತರ ಪತ್ತೆ ಕಷ್ಟವಾಗಬಹುದು ಎಂಬ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಸಕ್ರಿಯ ಸೋಂಕಿತರ ಸಂಖ್ಯೆ ಏರಿಕೆ: ಶುಕ್ರವಾರದಿಂದ ಶನಿವಾರಕ್ಕೆ 24 ಗಂಟೆಗಳಲ್ಲಿ ದೇಶಾದ್ಯಂತ 41,649 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಅವಧಿಯಲ್ಲಿ 593 ಮಂದಿ ಸಾವಿಗೀಡಾಗಿದ್ದಾರೆ. ಸತತ 4ನೇ ದಿನವೂ ಸಕ್ರಿಯ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳವಾಗಿದ್ದು, 4,08,920ಗೆ ತಲುಪಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಕೇರಳದಲ್ಲಿ ಶನಿವಾರ 20,624 ಮಂದಿಗೆ ಸೋಂಕು ದೃಢಪಟ್ಟು, 80 ಮಂದಿ ಸಾವಿಗೀಡಾಗಿದ್ದಾರೆ.
ಶೇ.66 ಮಂದಿಗೆ ಪ್ರತಿಕಾಯ: ತಮಿಳುನಾಡಿನಾದ್ಯಂತ ನಡೆಸಲಾದ 3 ಹಂತದ ಸೆರೋ ಸರ್ವೇ ಪ್ರಕಾರ, ಒಟ್ಟಾರೆ ಶೇ.66ರಷ್ಟು ಮಂದಿಯ ದೇಹದಲ್ಲಿ ಕೊರೊನಾ ವಿರುದ್ಧದ ಪ್ರತಿಕಾಯ ಸೃಷ್ಟಿಯಾಗಿರುವುದು ಕಂಡುಬಂದಿದೆ. ಜುಲೈನಲ್ಲಿ ನಡೆಸಿದ 3ನೇ ಸರ್ವೇಯಲ್ಲಿ ಶೇ.62.2ರಷ್ಟು ಮಂದಿಯಲ್ಲಿ ಪ್ರತಿಕಾಯ ಸೃಷ್ಟಿಯಾಗಿರುವುದು ಗೊತ್ತಾಗಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ತಿಳಿಸಿದೆ.
ರಾಜ್ಯಗಳಿಗೆ ಶೇ.15 ಪರಿಹಾರ ಬಿಡುಗಡೆ :
ಕೋವಿಡ್-19 ತುರ್ತು ಪರಿಹಾರ ಪ್ಯಾಕೇಜ್‌ನಡಿಯಲ್ಲಿ ಆರೋಗ್ಯ ಮೂಲಸೌಕರ್ಯಗಳನ್ನು ಸುಧಾರಿಸಲು ರಾಜ್ಯಗಳಿಗೆ ಶೇ.15ರಷ್ಟು ಮೊತ್ತವನ್ನು ಪಾವತಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್‌ಸುಖ್ ಮಾಂಡವೀಯಾ ಶನಿವಾರ ತಿಳಿಸಿದ್ದಾರೆ. ಈ ಪ್ಯಾಕೇಜ್‌ನ ಅನ್ವಯ ಒಟ್ಟಾರೆ 12,185 ಕೋಟಿ ರೂ.ಗಳ ಅನುದಾನವನ್ನು ಘೋಷಿಸಲಾಗಿತ್ತು. ಆ ಪೈಕಿ 1,827.8 ಕೋಟಿ ರೂ.ಗಳನ್ನು ರಾಜ್ಯಗಳಿಗೆ ಬಿಡುಗಡೆ ಮಾಡಲಾಗಿದೆ ಎಂದಿದ್ದಾರೆ.
ಚೀನದಲ್ಲಿ ಆತಂಕ :
ಕೊರೊನಾದ ಡೆಲ್ಟಾ ರೂಪಾಂತರಿಯು ಚೀನದಲ್ಲಿ ವ್ಯಾಪಕವಾಗಿ ಹಬ್ಬಲಾರಂಭಿಸಿದ್ದು, ಶನಿವಾರ 55 ಹೊಸ ಪ್ರಕರಣಗಳು ದೃಢಪಟ್ಟಿವೆ. ಇನ್ನೊಂದೆಡೆ ಜಪಾನ್‌ನಲ್ಲೂ ಕೊರೊನಾ ಕಾಡ್ಗಿಚ್ಚಿನಂತೆ ವ್ಯಾಪಿಸುತ್ತಿದ್ದು, ಟೋಕಿಯೊ ಸೇರಿದಂತೆ 6 ಪ್ರದೇಶಗಳಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ಅನಗತ್ಯವಾಗಿ ಯಾರೂ ಮನೆಗಳಿಂದ ಹೊರಬರದಂತೆ, ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸುವಂತೆ ಜನರಿಗೆ ಸೂಚಿಸಲಾಗಿದೆ.