Advertisement

3ನೇ ಅಲೆ ಎದುರಿಸಲು ಜಿಲ್ಲಾಡಳಿತ ಸಿದ್ಧತೆ: ಡಿಸಿ

11:06 AM Jun 12, 2021 | Team Udayavani |

ಯಾದಗಿರಿ: ಕೋವಿಡ್ ಮೂರನೇ ಅಲೆ ನಿರೀಕ್ಷೆಯ ತಜ್ಞರ ವರದಿ ಹಿನ್ನೆಲೆ ಜಿಲ್ಲಾಡಳಿತ ಸೂಕ್ತ ಚಿಕಿತ್ಸೆ ಕಲ್ಪಿಸುವ ನಿಟ್ಟಿನಲ್ಲಿ ಅಗತ್ಯ ಸಿದ್ಧತೆಯಲ್ಲಿ ತೊಡಗಿದೆ ಎಂದು ಜಿಲ್ಲಾಧಿಕಾರಿ ಡಾ| ರಾಗಪ್ರಿಯಾ ಹೇಳಿದರು.

Advertisement

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪತ್ರಿಕಾಗೊಷ್ಠಿಯಲ್ಲಿ ಮಾತನಾಡಿದ ಅವರು, ಕೊರೊನಾ ಎರಡನೇ ಅಲೆ ಜಿಲ್ಲೆಯಲ್ಲಿ ನಿಯಂತ್ರಣಕ್ಕೆ ಬಂದಿದ್ದು ಸದ್ಯ ಪಾಸಿಟಿವಿಟಿ ಶೇ.1.88ರಷ್ಟಿದ್ದು, ಮರಣ ಪ್ರಮಾಣ 0.87ಕ್ಕೆ ಇಳಿಕೆಯಾಗಿದೆ. ಇಂದಿಗೂ ನಿತ್ಯ 1500 ಜನರನ್ನು ಪರೀಕ್ಷಿಸಲಾಗುತ್ತಿದ್ದು, ಕೆಲ ದಿನಗಳಲ್ಲಿ ಸೋಂಕು ಶೂನ್ಯಕ್ಕೆ ಇಳಿಯುವ ವಿಶ್ವಾಸವಿದೆ ಎಂದರು.

ಕಠಿಣ ಲಾಕ್‌ಡೌನ್‌ ನಿಯಮ ಪಾಲಿಸಿರುವುದರಿಂದ ಸೋಂಕು ನಿಯಂತ್ರಣಕ್ಕೆ ಬರಲು ಸಾಧ್ಯವಾಗಿದ್ದು, ವಿವಿಧ ಇಲಾಖೆ ಸಿಬ್ಬಂದಿ ಜತೆಗೆ ಸಾರ್ವಜನಿಕರ ಸಹಕಾರವೂ ಸಿಕ್ಕಿದ್ದರಿಂದ ಜಿಲ್ಲೆಯಲ್ಲಿ ಸೋಂಕು ನಿಯಂತ್ರಣಕ್ಕೆ ಬಂದಿದ್ದು, ನಿಯಮಗಳನ್ನು ಮುಂದೆಯೂ ಕಟ್ಟುನಿಟ್ಟಾಗಿ ಪಾಲಿಸುವಂತೆ ಮನವಿ ಮಾಡಿದರು.

ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಎರಡನೇ ಅಲೆಯಲ್ಲಿ 1869 ಮಕ್ಕಳಿಗೆ ಕೊರೊನಾ ಸೋಂಕು ಪತ್ತೆಯಾಗಿತ್ತು ಎಂದು ಮಾಹಿತಿ ನೀಡಿದರು. ಜಿಲ್ಲೆಗೆ 2,48,720 ಲಸಿಕೆ ಸ್ವೀಕೃತವಾಗಿದ್ದು 2,29,900 ಲಸಿಕೆ ನೀಡಲಾಗಿದೆ. ಲಸಿಕೆಯ ಕೊರತೆಯಿಲ್ಲ. ಸದ್ಯಕ್ಕೆ 18820 ಡೋಸ್‌ ಲಸಿಕೆ ಲಭ್ಯವಿದೆ. 14 ಕೋವಿಡ್‌ ಕೇರ್‌ ಸೆಂಟರ್‌ ಸ್ಥಾಪಿಸಲಾಗಿದ್ದು ಸದ್ಯ 17 ಜನರು ಇದ್ದಾರೆ.

ಜಿಲ್ಲೆಯ ಆರೋಗ್ಯ ಕಾರ್ಯಕರ್ತರಿಗೆ 5881 ಮೊದಲ ಡೋಸ್‌, 3756 ಎರಡನೇ ಡೋಸ್‌, ಮುಂಚೂಣಿ ಕಾರ್ಯಕರ್ತರಿಗೆ ಕ್ರಮವಾಗಿ 9416, 2520. ಅದರಂತೆ 45ರಿಂದ 60 ವಯಸ್ಸಿನವರಿಗೆ 78866, 17623 ಹಾಗೂ 18ರಿಂದ 45 ವಯಸ್ಸಿನವರಿಗೆ 31085 ಅಲ್ಲದೇ 60ಕ್ಕೂ ಹೆಚ್ಚು ವಯಸ್ಸಿನವರಿಗೆ 54521, 14741 ಸೇರಿ ಒಟ್ಟು 2,18,410 ಲಸಿಕೆ ನೀಡಲಾಗಿದೆ ಎಂದು ವಿವರಿಸಿದರು. ಈ ವೇಳೆ ಅಪರ ಜಿಲ್ಲಾಧಿಕಾರಿ ಶಂಕರಗೌಡ ಸೋಮನಾಳ, ಡಿಎಚ್‌ಒ ಡಾ| ಇಂದುಮತಿ ಕಾಮಶೆಟ್ಟಿ ಸೇರಿದಂತೆ ಅಧಿಕಾರಿಗಳು ಇದ್ದರು.

Advertisement

3ನೇ ಅಲೆಯ ಮುನ್ನೆಚ್ಚರಿಕೆಯಾಗಿ ಜಿಲ್ಲೆಯಲ್ಲಿ 240 ಹೆಚ್ಚುವರಿ ಆಕ್ಸಿಜನ್‌ ಬೆಡ್‌ ಗಳ ವ್ಯವಸ್ಥೆ ಮಾಡಲಾಗಿದ್ದು, ಜಿಲ್ಲಾಸ್ಪತ್ರೆಯಲ್ಲಿ 70, ಶಹಾಪುರ, ಸುರಪುರ ತಾಲೂಕು ಆಸ್ಪತ್ರೆಗಳಲ್ಲಿ ತಲಾ 20ಉಳಿದಂತೆ ಸಮುದಾಯ ಆರೋಗ್ಯ ಕೇಂದ್ರಗಳಾದ ಗುರುಮಠಕಲ್‌ ಮತ್ತು ಹುಣಸಗಿಯಲ್ಲಿ ತಲಾ 20 ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಕೆಂಭಾವಿ ಮತ್ತು ಕೋಡೆಕಲ್‌ನಲ್ಲಿಯೂ ತಲಾ 30 ಹಾಸಿಗಳ ವ್ಯವಸ್ಥೆ ಮಾಡಿ ಚಿಕಿತ್ಸೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಅನುದಾನದಲ್ಲಿಯೂ ಆಮ್ಲಜನಕ ಸೇರಿದಂತೆ ಹಲವು ವೈದ್ಯಕೀಯ ಉಪಕರಣಗಳ ಖರೀದಿಗೆ ಟೆಂಡರ್‌ ಕರೆಯಲಾಗಿದೆ. -ಡಾ| ರಾಗಪ್ರಿಯಾ, ಜಿಲ್ಲಾಧಿಕಾರಿ, ಯಾದಗಿರಿ

Advertisement

Udayavani is now on Telegram. Click here to join our channel and stay updated with the latest news.

Next