Advertisement

ವೈದ್ಯರ ಕೊರತೆ ನಿವಾರಿಸಿ, 2ನೇ ಅಲೆ ಸಮರ್ಥವಾಗಿ ಎದುರಿಸಿ

12:35 AM Apr 30, 2021 | Team Udayavani |

ಕೋವಿಡ್  ಸೋಂಕಿನ 2ನೇ ಅಲೆ ದೇಶಾದ್ಯಂತ ವ್ಯಾಪಕವಾಗಿ ಹರಡುತ್ತಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ದಿನವಹಿ ಪ್ರಕರಣ ನಾಲ್ಕು ಲಕ್ಷ ಮುಟ್ಟುವ ಎಲ್ಲ ಸಾಧ್ಯತೆಗಳಿವೆ. ಈಗಲೇ ಸುಮಾರು ಮೂರು ಮುಕ್ಕಾಲು ಲಕ್ಷದಷ್ಟು ಪ್ರಕರಣಗಳು ದೃಢವಾಗುತ್ತಿದ್ದು, ಸಾವಿನ ಸಂಖ್ಯೆಯೂ ದಾಖಲೆ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಈಗಂತೂ ವೆಂಟಿಲೇಟರ್‌, ಹಾಸಿಗೆ, ಆ್ಯಕ್ಸಿಜನ್‌ ಕೊರತೆಯಿಂದಾಗಿ ಜನರ ಸಾವಿನ ಸಂಖ್ಯೆಯಲ್ಲಿ ಹೆಚ್ಚಾಗುತ್ತಿದೆ. ಆದರೆ ಮೇ ಮತ್ತು ಜೂನ್‌ನಲ್ಲಿ ಪ್ರಕರಣಗಳ ಸಂಖ್ಯೆ ಇನ್ನಷ್ಟು ಏರುವ ಸಾಧ್ಯತೆ ಇದ್ದು, ಆಗ ವೈದ್ಯರ ಕೊರತೆ ಬರಬಹುದು ಎಂದು ಸ್ವತಃ ನಾರಾಯಣ ಹೃದಯಾಲಯದ ಡಾ| ದೇವಿಶೆಟ್ಟಿ ಅವರೇ ಕಳವಳ ವ್ಯಕ್ತಪಡಿಸಿದ್ದಾರೆ.

Advertisement

ಜತೆಗೆ ಈಗಿನಿಂದಲೇ ಸರಕಾರ‌ ವೈದ್ಯರ ಕೊರತೆಯತ್ತ ಗಮನ ಹರಿಸಬೇಕು ಎಂದೂ ಸಲಹೆ ನೀಡಿದ್ದಾರೆ.  ಒಂದು ರೀತಿಯಲ್ಲಿ ಇದು ಆತಂಕಕ್ಕೆ ಕಾರಣವಾಗುವ ವಿಚಾರವೇ. ಈಗಾಗಲೇ ಹೇಳುತ್ತಿರುವಂತೆ, ಬೆಂಗಳೂರು ಸೇರಿದಂತೆ ನಗರ ಪ್ರದೇಶಗಳಲ್ಲಿದ್ದ ಜನ, ವಾಪಸ್‌ ಹಳ್ಳಿಗಳಿಗೆ ಹೋಗಿದ್ದಾರೆ. ಒಂದು ವೇಳೆ ಇವರು ಕೋವಿಡ್  ಹೊತ್ತು ಗ್ರಾಮಗಳಿಗೆ ತೆರಳಿದರೆ ಪರಿಸ್ಥಿತಿ ಇನ್ನಷ್ಟು ಹದಗೆಡುವ ಸಾಧ್ಯತೆ ಇದೆ. ಹೀಗಾಗಿ ಸರಕಾರ‌ ಇದನ್ನು ಆದ್ಯತಾ ವಲಯವಾಗಿ ಪರಿಗಣಿಸಿ ಹಳ್ಳಿಗಳ ಮಟ್ಟದಲ್ಲಿರುವ ಆರೋಗ್ಯ ಕೇಂದ್ರಗಳು ಮತ್ತು ಆರೋಗ್ಯ ಘಟಕಗಳಲ್ಲಿ ಉತ್ತಮ ವ್ಯವಸ್ಥೆ ಮಾಡಬೇಕಾಗಿದೆ.

ಕೊರೊನಾ ನಿಯಂತ್ರಣಕ್ಕಾಗಿ ಈಗಂತೂ ರಾಜ್ಯಾದ್ಯಂತ ಕಠಿನ ನಿಯಮಗಳ ಹೆಸರಲ್ಲಿ ಲಾಕ್‌ಡೌನ್‌ ಘೋಷಣೆ ಮಾಡಲಾಗಿದೆ. ಇದರಿಂದ ಏನಾದರೂ ಕೋವಿಡ್  ಸೋಂಕು ಹತೋಟಿಗೆ ಬಂದರೆ ರಾಜ್ಯದ ಸ್ಥಿತಿ ಒಂದಷ್ಟಾದರೂ ಸುಧಾರಿಸುತ್ತದೆ. ಆದರೆ ಹತೋಟಿಗೆ ಬರಲಿಲ್ಲವೆಂದಾದರೆ ಕಷ್ಟದ ಸನ್ನಿವೇಶ ಎದುರಾಗುವುದಂತೂ ಖಂಡಿತ.

ಇದರ ಮಧ್ಯೆಯೇ ರಾಜ್ಯ ಸರಕಾರ‌ ಕ್ಲಿನಿಕ್‌ಗಳಲ್ಲಿ ಸೇವೆ ಸಲ್ಲಿಸುತ್ತಿರುವ 20 ಸಾವಿರ ವೈದ್ಯರನ್ನು ಕೋವಿಡ್ ಕೆಲಸಕ್ಕಾಗಿ ಬಳಸಿಕೊಳ್ಳಲು ಚಿಂತನೆ ನಡೆಸುತ್ತಿದೆ. ಇದು ಉತ್ತಮ ನಿರ್ಧಾರವೇ. ಏಕೆಂದರೆ, ಇವರಲ್ಲಿ ಅರ್ಧದಷ್ಟು ವೈದ್ಯರು ಸೇವೆಗೆ ಲಭ್ಯರಾದರೂ, ಅದೆಷ್ಟೋ ಪ್ರಮಾಣದ ಕೊರತೆ ನೀಗಿಸಿಕೊಳ್ಳಬಹುದು. ಈ ಬಗ್ಗೆ ರಾಜ್ಯ ಸರಕಾರ‌ ಅತ್ಯಂತ ಶೀಘ್ರವಾಗಿ ನಿರ್ಧಾರ ತೆಗೆದುಕೊಳ್ಳಬೇಕು ಅಷ್ಟೇ. ಸದ್ಯ ಕ್ಲಿನಿಕ್‌ಗಳಲ್ಲಿನ ವೈದ್ಯರು ಕೊರೊನಾ ವಿಚಾರದಲ್ಲಿ ಉತ್ತಮವಾದ ಕೆಲಸವನ್ನೇ ಮಾಡುತ್ತಿದ್ದಾರೆ. ಹೋಂ ಕ್ವಾರಂಟೈನ್‌ನಲ್ಲಿ ಇರುವವರಿಗೆ ಇವರು ಮನೆಯಿಂದಲೇ ಚಿಕಿತ್ಸೆಯನ್ನೂ ನೀಡುತ್ತಿದ್ದಾರೆ.

ಇನ್ನು ರಾಜೀವ್‌ ಗಾಂಧಿ ವಿವಿ ಕೂಡ ವಿಶೇಷ ಕಾರ್ಯ ಯೋಜನೆ ರೂಪಿಸಿದ್ದು, ಎಂಬಿಬಿಎಸ್‌, ಬಿಡಿಎಸ್‌ನ ಸ್ನಾತಕ ವಿದ್ಯಾರ್ಥಿಗಳನ್ನು ಹೋಂ ಕ್ವಾರಂಟೈನ್‌ನಲ್ಲಿ ಇರುವವರಿಗಾಗಿ ಬಳಕೆ ಮಾಡಿಕೊಳ್ಳಲು ಮುಂದಾಗಿದೆ. ಸದ್ಯ ಸ್ನಾತಕೋತ್ತರದಲ್ಲಿ 12 ಸಾವಿರ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಇಂಥವರು ಹೋಂ ಐಸೋಲೇಶನ್‌ನಲ್ಲಿ ಇರುವವರಿಗೆ ಅಥವಾ ಕ್ವಾರಂಟೈನ್‌ನಲ್ಲಿ ಇರುವವರಿಗೆ ಫೋನ್‌ ಮೂಲಕವೇ ಸಂಪರ್ಕಿಸಿ ಆಪ್ತ ಸಮಾಲೋಚನೆ ನಡೆಸಲಿದ್ದಾರೆ.

Advertisement

ಎಂಥ ನಿರ್ಧಾರವೇ ಆಗಲಿ ಸರಕಾರ‌ ಬೇಗನೇ ತೆಗೆದುಕೊಳ್ಳಬೇಕು. ಈಗಾಗಲೇ ಪರಿಸ್ಥಿತಿ ಕೈಮೀರಿದಂತೆಯೇ ಜನರಿಗೆ ಭಾಸವಾಗುತ್ತಿದೆ. ಎಲ್ಲೋ ಲೋಪವಾಗುತ್ತಿದೆ ಎಂಬ ವಿಚಾರ ಜನರ ಮನಸ್ಸಿಗೆ ಬರಬಾರದು.

Advertisement

Udayavani is now on Telegram. Click here to join our channel and stay updated with the latest news.

Next