ನವದೆಹಲಿ/ಪುಣೆ:ಪುಣೆ ನಗರಾಡಳಿತ ಸ್ವಾಮಿತ್ವದ ನಾಯ್ಡು ಆಸ್ಪತ್ರೆಯಲ್ಲಿ ಮಾರಣಾಂತಿಕ ಕೋವಿಡ್ 19 ಸೋಂಕು ಪೀಡಿತ ರೋಗಿಗಳನ್ನು ಆರೈಕೆ ಮಾಡುತ್ತಿರುವ ನರ್ಸ್ ಗೆ ಖುದ್ದು ಪ್ರಧಾನಿ ನರೇಂದ್ರ ಮೋದಿ ಕರೆ ಮಾಡಿ ಅಭಿನಂದನೆ ತಿಳಿಸಿದ್ದಾರೆ. ಆಸ್ಪತ್ರೆಯ ಸಿಬ್ಬಂದಿಗಳ ಕಾರ್ಯ ವೈಖರಿಗೆ ಪ್ರಧಾನಿ ಹರ್ಷ ವ್ಯಕ್ತಪಡಿಸಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿರುವುದಾಗಿ ವರದಿ
ವಿವರಿಸಿದೆ.
ಶುಕ್ರವಾರ ಸಂಜೆ ಪ್ರಧಾನಿ ನರೇಂದ್ರ ಮೋದಿ ಅವರು ನರ್ಸ್ ಛಾಯಾ ಜಗ್ ತಪ್ ಗೆ ಕರೆ ಮಾಡಿ ಆಕೆಯ ಸೇವೆಗೆ ಅಭಿನಂದನೆ ಸಲ್ಲಿಸಿರುವುದಾಗಿ ಪುಣೆ ಮುನ್ಸಿಪಲ್ ಕಾರ್ಪೋರೇಶನ್ ಆರೋಗ್ಯಾಧಿಕಾರಿ ತಿಳಿಸಿದ್ದಾರೆ.
ಪ್ರಧಾನಿ ಕರೆ ಮಾಡಿದಾಗ ನರ್ಸ್ ಛಾಯಾ ಮರಾಠಿಯಲ್ಲಿ ಸಂಭಾಷಣೆ ಆರಂಭಿಸಿದ್ದರು. ಈ ವೇಳೆ ಪ್ರಧಾನಿ ಮೋದಿ ಅವರು ಆಕೆಯ ಕೆಲಸದ ಬಗ್ಗೆ ಹಾಗೂ ಆಕೆಯ ಕುಟುಂಬದವರ ಆತಂಕ ಹೇಗಿದೆ, ಕೋವಿಡ್ 19 ರೋಗಿಗಳ ಸೇವೆ ಮಾಡುತ್ತಿರುವ ಬಗ್ಗೆ ಅನಿಸಿಕೆ ವಿಚಾರಿಸಿರುವುದಾಗಿ ವರದಿ ವಿವರಿಸಿದೆ.
ಹೌದು ನನಗೆ ನನ್ನ ಕುಟುಂಬದ ಬಗ್ಗೆ ಕಾಳಜಿ ಇದೆ. ಆದರೆ ಒಂದು ಸಲ ಕೆಲಸ ಆರಂಭಿಸಿದ ಮೇಳೆ ನಾವು ಇಂತಹ ಪರಿಸ್ಥಿತಿಯಲ್ಲಿ ರೋಗಿಗಳ ಸೇವೆ ಮಾಡಲೇಬೇಕು. ನಾನು ಇದನ್ನು ಸಮತೋಲನದಲ್ಲಿ ನಿರ್ವಹಿಸುತ್ತಿದ್ದೇನೆ ಎಂದು ನರ್ಸ್ ಉತ್ತರ ನೀಡಿದ್ದರು.
ಒಂದು ವೇಳೆ ಆಸ್ಪತ್ರೆಯಲ್ಲಿ ದಾಖಲಾಗಿರುವ ರೋಗಿಗಳು ಭಯದಿಂದ ಇರುತ್ತಾರೆಯೇ ಎಂದು ಪ್ರಧಾನಿ ಪ್ರಶ್ನಿಸಿದ್ದರು. ದಾಖಲಾದ ರೋಗಿಗಳ ಜತೆ ನಾವು ಮಾತನಾಡಲು ಪ್ರಯತ್ನಿಸುತ್ತೇವೆ. ಅಲ್ಲದೇ ಯಾವುದೇ ಕಾರಣಕ್ಕೂ ಭಯಪಡಬೇಡಿ. ಏನೂ ಆಗುವುದಿಲ್ಲ, ನಿಮ್ಮ ರಿಪೋರ್ಟ್ ನೆಗೆಟೀವ್ ಆಗಿ ಬರಲಿದೆ ಎಂದು ಧೈರ್ಯ ತುಂಬುವುದಾಗಿ ತಿಳಿಸಿದ್ದರು ಎಂದು ವರದಿ ತಿಳಿಸಿದೆ.
ಈವರೆಗೆ ಆಸ್ಪತ್ರೆಯಲ್ಲಿ ಕೋವಿಡ್ 19 ವೈರಸ್ ರೋಗಿಗಳು ಗುಣಮುಖರಾದ ನಂತರ ಡಿಸ್ ಚಾರ್ಜ್ ಆಗಿರುವುದಾಗಿ ಛಾಯಾ ಜಗ್ ತಪ್ ಪ್ರಧಾನಿ ಮೋದಿಗೆ ಮಾಹಿತಿ ನೀಡಿದ್ದರು. ಬಳಿಕ ಪ್ರಧಾನಿ ಮೋದಿ ಅವರು ನರ್ಸ್ ಬಳಿ, ದೇಶದ ವಿವಿಧ ಆಸ್ಪತ್ರೆಗಳಲ್ಲಿ ಲಕ್ಷಾಂತರ ಮಂದಿ ಸಿಬ್ಬಂದಿಗಳು ಅವಿರತವಾಗಿ ಕೆಲಸ ನಿರ್ವಹಿಸುತ್ತಿದ್ದು ಅವರಿಗೆ ಯಾವ ಸಂದೇಶ ನೀಡುತ್ತೀರಿ ಎಂದು ಪ್ರಶ್ನಿಸಿದ್ದರು.
ಅದಕ್ಕೆ ನರ್ಸ್ ಛಾಯಾ, ಯಾವುದೇ ಕಾರಣಕ್ಕೂ ಭಯಪಡಬೇಕಾದ ಅಗತ್ಯವಿಲ್ಲ. ಈ ವೈರಸ್ ವಿರುದ್ಧ ಹೋರಾಡಲೇಬೇಕಾಗಿದೆ. ಈ ವೈರಸ್ ವಿರುದ್ಧ ದೇಶ ಗೆಲುವು ಸಾಧಿಸಬೇಕಾಗಿದೆ. ಇದೇ ಆಸ್ಪತ್ರೆಗಳ ಮತ್ತು ಸಿಬ್ಬಂದಿಗಳ ಮುಖ್ಯ ಉದ್ಧೇಶವಾಗಬೇಕಾಗಿದೆ ಎಂದು ತಿಳಿಸಿರುವುದಾಗಿ ವರದಿ ಹೇಳಿದೆ.