ಲಕ್ನೋ: ಪತಿ ಜತೆಗಿನ ಜಗಳದಿಂದ ಆಕ್ರೋಶಗೊಂಡ ಪತ್ನಿ ಐವರು ಮಕ್ಕಳನ್ನು ಗಂಗಾ ನದಿಗೆ ಎಸೆದಿರುವ ಹೃದಯವಿದ್ರಾವಕ ಘಟನೆ ಉತ್ತರಪ್ರದೇಶದ ಭಾದೋಹಿ ಪ್ರದೇಶದಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಗಂಗಾನದಿಯಲ್ಲಿ ಮಕ್ಕಳಿಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ ಎಂದು ವರದಿ ತಿಳಿಸಿದೆ.
ಪೊಲೀಸ್ ವರಿಷ್ಠಾಧಿಕಾರಿ ರಾಮ್ ಬದಾನ್ ಸಿಂಗ್ ಈ ಬಗ್ಗೆ ವಿವರಿಸಿದ್ದು, ಜಹಾಂಗೀರಾಬಾದ್ ಗ್ರಾಮದ ಗೋಪಿಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ತಡ ರಾತ್ರಿ ಘಟನೆ ನಡೆದಿರುವುದಾಗಿ ತಿಳಿಸಿದ್ದಾರೆ.
ಕಳೆದ ಒಂದು ವರ್ಷದಿಂದ ಪತಿ ಮಂಜು ಯಾದವ್, ಹಾಗೂ ಪತಿ ಮೃದುಲ್ ಯಾದವ್ ನಡುವೆ ಗಲಾಟೆ ನಡೆಯುತ್ತಿತ್ತು. ಇದರಿಂದ ಬೇಸತ್ತು ಮಕ್ಕಳನ್ನು ಕೊಂದು ನದಿಗೆ ಎಸೆಯಲು ಪತಿ ತೀರ್ಮಾನಿಸಿದ್ದಳು ಎಂದು ವರದಿ ಹೇಳಿದೆ.
ರಾತ್ರಿ ಇಬ್ಬರ ನಡುವೆ ಗಲಾಟೆ ಹೆಚ್ಚಾಗಿದ್ದು, ಈ ವೇಳೆ ಕೋಪಗೊಂಡ ಪತ್ನಿ ಮಕ್ಕಳಾದ ಆರತಿ, ಸರಸ್ವತಿ, ಮಾತೇಶ್ವರಿ, ಶಿವಶಂಕರ್ ಹಾಗೂ ಕೇಶವ್ ಪ್ರಸಾದ್ ಸೇರಿದಂತೆ ಐವರು ಮಕ್ಕಳನ್ನು ಗಂಗಾನದಿಗೆ ಎಸೆದಿದ್ದಳು. ಅದು ತುಂಬಾ ಆಳವಾದ ಪ್ರದೇಶವಾಗಿದ್ದರಿಂದ ಮಕ್ಕಳು ಮುಳುಗಿ ಸಾವನ್ನಪ್ಪಿದ್ದಾರೆಂದು ಶಂಕಿಸಲಾಗಿದೆ. ಸ್ಥಳೀಯ ಮೀನುಗಾರರು ಸ್ಥಳಕ್ಕೆ ಆಗಮಿಸಿ ಶೋಧ ಕಾರ್ಯನಡೆಸಿದರೂ ಮಕ್ಕಳ ದೇಹ ಪತ್ತೆಯಾಗಿರಲಿಲ್ಲ ಎಂದು ವರದಿ ತಿಳಿಸಿದೆ.
ಲಾಕ್ ಡೌನ್ ನಿಂದ ಘಟನೆ ನಡೆಯಿತೇ?
ಕೋವಿಡ್ 19 ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ದೇಶಾದ್ಯಂತ ಘೋಷಿಸಲಾಗಿದ್ದ 21 ದಿನಗಳ ಲಾಕ್ ಡೌನ್ ನಿಂದಾಗಿ ಆಹಾರ, ಊಟೋಪಚಾರ ದೊರೆಯದೇ ಆಕೆ ಮಕ್ಕಳನ್ನು ಗಂಗಾನದಿಗೆ ಎಸೆದಿರುವುದಾಗಿ ವರದಿಯಾಗಿದ್ದು, ಈ ಬಗ್ಗೆ ಪಿಐಬಿ ಉತ್ತರಪ್ರದೇಶ ನಿಜಾಂಶ ಬಿಚ್ಚಿಟ್ಟಿದೆ. ಆಹಾರದ ಕೊರತೆಯಿಂದಾಗಿ ತಾನು ಮಕ್ಕಳನ್ನು ನದಿಗೆ ಎಸೆದಿಲ್ಲ. ಪತಿ ಜತೆಗಿನ ಜಗಳದಿಂದ ಮಕ್ಕಳನ್ನು ನದಿಗೆ ಎಸೆದಿರುವುದಾಗಿ ತಪ್ಪೊಪ್ಪಿಕೊಂಡಿರುವ ವಿಡಿಯೋವನ್ನು ಉತ್ತರಪ್ರದೇಶ ಪ್ರೆಸ್ ಇನ್ ಫಾರ್ಮೇಶನ್ ಬ್ಯುರೋ ಟ್ವೀಟ್ ಮಾಡಿದೆ.