ವಾಷಿಂಗ್ಟನ್: “ಕೋವಿಡ್-19 ವೈರಸ್ ವಿಶ್ವದ ವಿವಿಧ ರಾಷ್ಟ್ರಗಳಲ್ಲಿ 6 ಕೋಟಿ ಮಂದಿಯನ್ನು ಅತೀ ಬಡತನಕ್ಕೆ ತಳ್ಳಲಿದೆ, ಕಳೆದ ಮೂರು ವರ್ಷಗಳ ದುಡಿಮೆಯನ್ನು ಮಾರಕ ಸೋಂಕು ಕಿತ್ತುಕೊಂಡಿದೆ’ ಎಂದು ವಿಶ್ವ ಬ್ಯಾಂಕ್‌ನ ಅಧ್ಯಕ್ಷ ಡೇವಿಡ್ ಮಲ್ಪಾಸ್ ತಿಳಿಸಿದ್ದಾರೆ.
ಸದ್ಯ ವಿಶ್ವದ ವಿವಿಧ 100 ರಾಷ್ಟ್ರಗಳಿಗೆ ವಿಶ್ವ ಬ್ಯಾಂಕ್ 160 ಬಿಲಿಯನ್ ಡಾಲರ್ ಹಣವನ್ನು ಬಿಡುಗಡೆ ಮಾಡಿದ್ದು ಸಹಾಯದ ಹಸ್ತವನ್ನು ನೀಡಿದೆ.
ಈ ಬಗ್ಗೆ ಮಾಧ್ಯಮದೊಂದಿಗೆ ವಿಡಿಯೊ ಕಾನ್ಫರೆನ್ಸ್‌ನಲ್ಲಿ ಮಾತನಾಡಿದ ಡೇವಿಡ್ ಮಲ್ಪಾಸ್, “ಮುಂದಿನ 15 ದಿನಗಳಲ್ಲಿ ಘೋಷಿಸಿರುವ ಹಣವನ್ನು ವಿವಿಧ ರಾಷ್ಟ್ರಗಳಿಗೆ ತಲುಪಿಸುವ ಕೆಲಸವನ್ನು ವಿಶ್ವ ಬ್ಯಾಂಕ್ ಮಾಡಲಿದೆ, ಆದರೆ ವಿಶ್ವದ ಆರ್ಥಿಕತೆ ಈ ವರ್ಷ ಶೇ 5ರಷ್ಟು ಕಡಿಮೆಯಾಗಬಹುದು, ಇದರಿಂದ ಬಡ ದೇಶಗಳ ಮೇಲೆ ಕೆಟ್ಟ ಪರಿಣಾಮ ಬೀರುವ ಸಾಧ್ಯತೆ ಇದೆ, ಕಳೆದ ಮೂರು ವರ್ಷಗಳಲ್ಲಿ ಬಡತನ ನಿರ್ಮೂಲನೆಗಾಗಿ ವಿವಿಧ ಕಾರ್ಯಕ್ರಮಗಳನ್ನು ನಡೆಸಲಾಗಿತ್ತು, ಇದರಿಂದ ಕೊಂಚ ಆರ್ಥಿಕ ಪ್ರಗತಿ ಸಾಧಿಸಲಾಗಿತ್ತು, ಆದರೆ ಅವುಗಳೆಲ್ಲ ಕೋವಿಡ್-19 ಹೊಡೆತಕ್ಕೆ ಸಿಲುಕಿ ಈಗ ಕೊಚ್ಚಿ ಹೋಗಿವೆ, ಅತ್ಯಂತ ಕೆಟ್ಟ ಆರ್ಥಿಕ ಹಿಂಜರಿತ ನಮ್ಮನ್ನು ಮುಂದೆ ಕಾಡಲಿದೆ’ ಎಂದು ಮಾಲ್ಪಾಸ್ ಅಭಿಪ್ರಾಯಪಟ್ಟರು.
ಸದ್ಯ ವಿಶ್ವದೆಲ್ಲೆಡೆ ಒಟ್ಟು 50 ಲಕ್ಷ ಮಂದಿಗೆ ಕೋವಿಡ್-19 ವೈರಸ್ ಸೋಂಕು ತಗುಲಿದೆ, ಸುಮಾರು 3 ಲಕ್ಷ ಮಂದಿ ಮೃತಪಟ್ಟಿದ್ದಾರೆ, ಸೋಂಕಿತರ ಹಾಗೂ ಸಾವಿನ ಸಂಖ್ಯೆಯಲ್ಲಿ ಇನ್ನೂ ಹೆಚ್ಚಾಗುತ್ತಲೇ ಇದೆ.