Advertisement

ಕೋವಿಡ್ 19 ಯೋಧರು

07:28 PM Apr 07, 2020 | Suhan S |

ಎಲ್ರೂ ಮನೆಯಲ್ಲೇ ಇರ್ರಪ್ಪಾ … ನೀವು ಮನೇನಲ್ಲಿ ಇದ್ದರೆ ನಮ್ಮ ಜೀವ ಉಳಿದಂತೆ ಅಂತೆಲ್ಲ ಹೇಳುತ್ತಿರುವಾಗ, ಇಲ್ಲೊಂದಿಷ್ಟು ಯುವಕರು ಬೀದಿಗೆ ಇಳಿದು ಸಮಾಜ ಸೇವೆ ಮಾಡುತ್ತಿದ್ದಾರೆ…

Advertisement

 

ಗುಡಿಗಳಲ್ಲಿ ಮೊಳಗುತ್ತಿದೆ ಜಾಗೃತಿ ಗೀತೆ : ಬಳ್ಳಾರಿ ಜಿಲ್ಲೆ, ಕೊಟ್ಟೂರು ತಾಲೂಕಿನ ದೂಪದಹಳ್ಳಿ ತಾಂಡದ ಯುವಕ ಆನಂದ ಸ್ವಾಮಿ, ಕೋವಿಡ್ 19 ಶುರುವಾಗುತ್ತಿದ್ದಂತೆ ಸುಮ್ಮನೆ ಕೂರಲಿಲ್ಲ. ಸೀದಾ ಹಳ್ಳಿಯ ಮೂರು ದೇಗುಲಗಳಿಗೆ ಹೋಗಿ, ಅಲ್ಲಿದ್ದ ಮೈಕ್‌ ಹಿಡಿದು, ಕೋವಿಡ್ 19  ಗೀತೆಗಳನ್ನು ಹಾಡಲು ಶುರುಮಾಡಿದರು. ಹೀಗಾಗಿ, ಈಗ ದೂಪದಹಳ್ಳಿಯ ಓಣಿಓಣಿಯಲ್ಲೂ ಕೋವಿಡ್ 19  ಜಾಗೃತಿ ಮೊಳಗಿದೆ.

ಜಾಗೃತಿ ಗೀತೆಯ ಸಾಹಿತ್ಯ ರಚಿಸಿಕೊಂಡಿದ್ದು ಸ್ವತಃ ಆನಂದಸ್ವಾಮಿಯೇ. ಅವರು ಹಾಡುವುದಲ್ಲದೇ, ಭಜನಾ ತಂಡ ರಚಿಸಿಕೊಂಡು ಓಣಿಓಣಿಗೂ ಹೋಗಿ ಹಾಡಿ, ಅರಿವು ಮೂಡಿಸುತ್ತಿದ್ದಾರೆ. ಮನೆಮನೆಗೆ ತೆರಳಿ, ಕೋವಿಡ್ 19 ಸೋಂಕು ಹರಡುವ ಬಗೆ, ಸೋಂಕಿನ ಲಕ್ಷಣಗಳು, ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಮನದಟ್ಟು ಮಾಡುತ್ತಿದ್ದಾರೆ.

ಕೋವಿಡ್ 19  ಬಗ್ಗೆ ಕೇರ್‌ ಮಾಡದೆ ಇರುವವರ ಆನಂದವನ್ನು, ಈ ಆನಂದ್‌ ಕಸಿಯುತ್ತಿರುವುದಂತೂ ಸತ್ಯ. ನಿತ್ಯ ಜನ ಸೇರುವ ಜಾಗಗಳಲ್ಲಿ ಕೀಲು ಎಣ್ಣೆ ಬಳಿದು ಅಲ್ಲಿಗೆ ಜನ ಬಾರದಂತೆ ನೋಡಿಕೊಳ್ಳುತ್ತಿದ್ದಾರೆ. ಮರು ವಲಸೆ ಬಂದ ತಮ್ಮ ತಾಂಡದ ಸುಮಾರು ಮೂರ್ನಾಲ್ಕು ಸಾವಿರ ಜನರ ಮನವೊಲಿಸಿ, ಶುಚಿಯಾಗಿ, ಸಾಮಾಜಿಕ ಅಂತರ ಕಾಯ್ದು ಕೊಳ್ಳುವಂತೆ ನೋಡಿಕೊಳ್ಳುತ್ತಿದ್ದಾರೆ. ಇವರೊಟ್ಟಿಗೆ ಯುವಕರಾದ ಬಾಲನಾಯ್ಕ್ ರವಿನಾಯ್ಕ್ ರುದ್ರೇಶ್‌ ನಾಯ್ಕ್. ಕೈ ಜೋಡಿಸಿರುವುದರಿಂದ, ತಾಂಡದಲ್ಲಿ ಜಾಗೃತಿ ಮೂಡಿಸಲು ದೊಡ್ಡ ಯುವ ಪಡೆ ಸಿದ್ಧವಾಗಿದೆ. ಇಷ್ಟೇ ಅಲ್ಲದೆ, ತಾಂಡದ ನೂರಕ್ಕೂ ಹೆಚ್ಚು ಜನರಿಗೆ ಕುಡಿತ ಬಿಡಿಸಿದ್ದು, ಆನಂದಸ್ವಾಮಿಯವರ ಮತ್ತೂಂದು ಹೆಗ್ಗಳಿಕೆ.

Advertisement

“ನಮ್ಮವರಲ್ಲಿ ಬಹುತೇಕರು ಶುಚಿತ್ವಕ್ಕೆ ಹೆಚ್ಚು ಒತ್ತು ಕೊಡಲ್ಲ. ಹೊಟ್ಟೆಪಾಡಿಗೆ ವಲಸೆ ಹೋಗುತ್ತಾರೆ. ಇಂತಹವರು ಈ ವೈರಸ್‌ಗೆ ತುತ್ತಾದರೆ ಗತಿ ಏನು? ಎಂದು ಊಹಿಸಿಕೊಂಡೆ. ಎದೆ ಝಲ್‌ ಎಂದಿತು. ಕರ್ನಾಟಕಕ್ಕೆ ಕೊರೋನಾ ವಕ್ಕರಿಸಿದ್ದೇ ತಡ, ನಾನು ಅಲರ್ಟ್‌ ಆದೆ..’ ಎನ್ನುತ್ತಾರೆ ಆನಂದ ಸ್ವಾಮಿ.

ಕಾಲಿಗೆ ಬೀಳುವ ಮಾಸ್ತರ್‌…! :  ಕೊಟ್ಟೂರಿನ ದೈಹಿಕ ಶಿಕ್ಷಕ ನಾಗರಾಜ ಬಂಜಾರ, ಸೈಕಲ್ಲಿನಲ್ಲಿ ಓಣಿ ಓಣಿ ಸುತ್ತಿ ಕೋವಿಡ್ 19 ಜಾಗೃತಿ ಮೂಡಿಸುತ್ತಿದ್ದಾರೆ. ” ಕೋವಿಡ್ 19  ರೋಗ ಬಂದೈತೈ.. ಎಲ್ಲರೂ ಜಾಗೃತರಾಗೋಣ…’, ” ಕೋವಿಡ್ 19  ನಮ್ಮನ್ನು ನುಂಗಿತ್ತಾ…’ ಅಂತೆಲ್ಲಾ ಸ್ವರಚಿತ ಗೀತೆಗಳನ್ನು ಹಾಡುತ್ತಾ, ತಮಟೆ ಬಡಿಯುತ್ತಾ, ಜನರಲ್ಲಿ ಅರಿವು ಮೂಡಿಸುತ್ತಿದ್ದಾರೆ. ಗುಂಪುಸೇರುವವರ ಬಳಿ ಹೋಗಿ ಕೈ ಮುಗಿದು, ಚದುರುವಂತೆ ವಿನಂತಿಸುತ್ತಾರೆ. ಮಾತು ಕೇಳದಿದ್ದಾಗ ಅವರ ಕಾಲಿಗೂ ಬೀಳುತ್ತಾರೆ!.  

ಮೇಷ್ಟ್ರು ನಮ್ಮ ಕಾಲಿಗೆ ಬೀಳ್ಳೋದೇ… ಅಂತ ಜನ ಗಾಬರಿಯಾಗಿ ದೂರ ನಿಲ್ಲುತ್ತಾರೆ. ನಾಗರಾಜ ಮಾಸ್ತರ್‌, ನಿತ್ಯ ಬೆಳಗ್ಗೆ, ಸಂಜೆಯಂತೆ ದಿನದಲ್ಲಿ ಕನಿಷ್ಠ ನಾಲ್ಕೈದು ಗಂಟೆಯನ್ನು ಜನ ಜಾಗೃತಿಗೆ, ಊರಿನ ಸ್ವಚ್ಛತೆಗೆಂದೇ ಮೀಸಲಿಟ್ಟಿದ್ದಾರೆ. ಇವರ ಬೆನ್ನಿಗೆ ಹಸಿರು- ಹೊನಲು ತಂಡದ ಯುವಕರು ನಿಂತಿದ್ದಾರೆ. ಉಪನ್ಯಾಸಕ ಬಸವರಾಜ್‌, ಕೃಷ್ಣಸಿಂಗ್‌, ಪೇಂಟರ್‌ ಗುರು, ಅಭಿಷೇಕ್‌ ಸಹಕರಿಸುವವರ ಪಟ್ಟಿ ಹೀಗೆ ಬೆಳೆಯುತ್ತದೆ. “ಮೊದಮೊದಲಿಗೆ ಜನ ನಮ್ಮ ಮಾತಿಗೆ ಕಿವಿಗೊಡುತ್ತಿರಲಿಲ್ಲ. ಆದರೆ, ಇತ್ತೀಚೆಗೆ ಪರವಾಗಿಲ್ಲ. ಜನ ಜಾಗೃತರಾಗುತ್ತಿದ್ದಾರೆ’ ಎನ್ನುತ್ತಾರೆ ನಾಗರಾಜ.­

 

ಸ್ವರೂಪಾನಂದ ಎಂ. ಕೊಟ್ಟೂರು

 

 

Advertisement

Udayavani is now on Telegram. Click here to join our channel and stay updated with the latest news.

Next