Advertisement

ಕೋವಿಡ್-19 ಎಚ್ಚರಿಕೆ: ಸ್ವಯಂ ಎಚ್ಚರಿಕೆ ವಹಿಸಿ ಜವಾಬ್ದಾರಿ ಮೆರೆಯಿರಿ

01:04 AM May 06, 2020 | Sriram |

ಮಣಿಪಾಲ: ಕೋವಿಡ್-19 ಸೋಂಕು ಪ್ರಸರಣವನ್ನು ತಡೆಯುವುದಕ್ಕಾಗಿ ಘೋಷಿಸಲಾಗಿದ್ದ ಲಾಕ್‌ಡೌನ್‌ ಬಹುತೇಕ ಮುಕ್ತಾಯವಾಗಿದೆ. ಭಾರತದಂತಹ ಅಧಿಕ ಜನಸಂಖ್ಯೆಯ ದೇಶದಲ್ಲಿ ಸೋಂಕು ಸಾಮುದಾಯಿಕವಾಗಿ ಹರಡದಂತೆ ನಿಯಂತ್ರಿಸಲು ಪ್ರಾಯಃ ಇದೊಂದೇ ಪರಿಣಾಮಕಾರಿ ಕ್ರಮವಾಗಿದ್ದು, ಅದು ಬಹುತೇಕ ಯಶಸ್ವಿಯೂ ಆಗಿದೆ. ಆದರೆ ಈಗಲೂ ಕೋವಿಡ್-19 ಹಾವಳಿ ಸಂಪೂರ್ಣವಾಗಿ ನಿಂತಿಲ್ಲ. ಹಾಗೆಂದು ತಿಂಗಳಾನುಗಟ್ಟಲೆ ಲಾಕ್‌ಡೌನ್‌ ಮುಂದುವರಿಸುವುದೂ ಸಾಧ್ಯವಿಲ್ಲ. ಇದಕ್ಕಾಗಿಯೇ ಸರಕಾರ ವಿನಾಯಿತಿಗಳನ್ನು ಘೋಷಿಸಿರುವುದು.

Advertisement

ಸರಕಾರ ತನ್ನ ಕೆಲಸ ಮಾಡಿದೆ, ಇನ್ನೀಗ ಸ್ವಯಂ ಎಚ್ಚರಿಕೆಯಿಂದ ಇದ್ದು ತಮ್ಮನ್ನು ತಾವು ರಕ್ಷಿಸಿಕೊಳ್ಳುವ ಜವಾಬ್ದಾರಿ ನಾಗರಿಕರದು. ಬಂಧನ ಕಳಚಿಕೊಂಡಿತೆಂದು ಎಲ್ಲೆ ಮೀರಿದ ಉತ್ಸಾಹ ಪಡದೆ ಸೋಂಕು ಬೆನ್ನ ಹಿಂದೆಯೇ ಇದೆ ಎಂಬ ಜಾಗೃತಿಯೊಂದಿಗೆ ನಾವು ದೈನಂದಿನ ಚಟುವಟಿಕೆಗಳನ್ನು ಕೈಗೊಳ್ಳಬೇಕು. ನಾವೇನು ಮಾಡಬೇಕು, ಏನನ್ನು ಮಾಡಬಾರದು ಎಂಬ ಉದಯವಾಣಿ ಕಾಳಜಿ ಇಲ್ಲಿದೆ.

1 ಈ ಹಿಂದಿನಂತೆಯೇ ಇನ್ನು ಮುಂದಕ್ಕೂ ಮಾಸ್ಕ್ ಅಥವಾ ಮುಖಗವಸಿನಿಂದ ನಮ್ಮ ಮೂಗು, ಬಾಯಿಗಳನ್ನು ಮುಚ್ಚಿಕೊಳ್ಳೋಣ. ಇದು ಸೋಂಕು ನಮಗೆ ಬಾರದಂತೆಯೂ ನಮ್ಮಿಂದ ಇತರರಿಗೆ ಹರಡದಂತೆಯೂ ಕಾಪಾಡುತ್ತದೆ.

2 ಸಾಮಾಜಿಕ ಅಂತರವನ್ನು ನಮ್ಮ ಪ್ರತೀ ಹೆಜ್ಜೆಯ ಮಂತ್ರವಾಗಿಸಿಕೊಳ್ಳೋಣ. ಬೆಳಗ್ಗೆ ಹಾಲು ಕೊಳ್ಳುವಲ್ಲಿಂದ ತೊಡಗಿ ಉದ್ಯೋಗ ಸ್ಥಳದ ವರೆಗೆ ನೂರಾರು ಮಂದಿಯೊಂದಿಗೆ ನಾವು ಒಡನಾಡುತ್ತೇವೆ. ಎಲ್ಲ ಸಂದರ್ಭಗಳಲ್ಲಿಯೂ ದೈಹಿಕ ಅಂತರ ಕಾಪಾಡಿಕೊಳ್ಳೋಣ.

3 ಪ್ರತೀ ಬಾರಿ ಹೊರಗೆ ಹೋಗಿ ಮನೆಗೆ ಬರುವಾಗ, ಕೆಲಸದ ಸ್ಥಳದಲ್ಲಿಯೂ ಆಗಾಗ ಹ್ಯಾಂಡ್‌ ಸ್ಯಾನಿಟೈಸರ್‌ ಉಪಯೋಗಿಸಿ ಕೈಗಳನ್ನು ಸ್ವತ್ಛ ಮಾಡಿಕೊಳ್ಳೋಣ. ಸ್ಯಾನಿಟೈಸರ್‌ ಬೇಕೇ ಬೇಕು ಎಂದೇನಿಲ್ಲ; ಸಾಬೂನು ಬಳಸಿದರೂ ಆಗಬಹುದು. ಕೈಗಳ ಹಿಂದು ಮುಂದು ಮೊಣಕೈ ತನಕ ಸ್ವತ್ಛವಾಗಬೇಕು ಅಷ್ಟೇ.

Advertisement

4 ಅದೇರೀತಿ ಮನೆಯಿಂದ ಹೊರಗಿರುವಾಗ ಆಗಾಗ ಮೂಗು, ಬಾಯಿ, ಕಣ್ಣು ಮುಟ್ಟಿಕೊಳ್ಳುವ ಅಭ್ಯಾಸವನ್ನು ಪ್ರಜ್ಞಾಪೂರ್ವಕವಾಗಿ ದೂರ ಮಾಡೋಣ.

5 ಕೋವಿಡ್-19 ಸಹಿತ ಯಾವುದೇ ಸೋಂಕು ಬೇಗನೆ ತಟ್ಟುವುದು ರೋಗ ನಿರೋಧಕ ಶಕ್ತಿ ಕಡಿಮೆ ಇರುವ ವೃದ್ಧರು, ಮಕ್ಕಳು, ಕಾಯಿಲೆಪೀಡಿತರು, ಗರ್ಭಿಣಿಯರಿಗೆ. ಹೀಗಾಗಿ ನಮ್ಮ ಮನೆಯಲ್ಲಿರುವ ಈ ಮಂದಿ ಹೆಚ್ಚು ಹೊರಗೆ ಓಡಾಡುವುದು ಬೇಡ. ಅವರನ್ನು ಆದಷ್ಟು ಕಾಳಜಿಯಿಂದ ರಕ್ಷಿಸಿಕೊಳ್ಳೋಣ.

6 ಕೋವಿಡ್-19 ಲಕ್ಷಣಗಳಿದ್ದಲ್ಲಿ ಪರೀಕ್ಷಿಸಿಕೊಳ್ಳುವ, ಮನೆಯಲ್ಲಿ ಇತರರಿಂದ ಪ್ರತ್ಯೇಕವಾಗಿ ಉಳಿಯುವ ಸ್ವಯಂಪ್ರೇರಣೆ ನಮ್ಮಲ್ಲಿ ಇರಲಿ. ಇದರಿಂದ ಸೋಂಕು ಹಬ್ಬುವುದನ್ನು ತಡೆಯಲು ನಾವು ಕಾರಣರಾಗುತ್ತೇವೆ.

7 ಆರೋಗ್ಯಕರ ಆಹಾರ ಪದ್ಧತಿ, ಉತ್ತಮ ದೈಹಿಕ ಚಟುವಟಿಕೆ ನಮ್ಮದಾಗಲಿ. ಇದರಿಂದ ರೋಗ ನಿರೋಧಕ ಶಕ್ತಿ ವೃದ್ಧಿಯಾಗಿ ಸೋಂಕಿನ ಅಪಾಯ ತಾನಾಗಿ ದೂರವಾಗುತ್ತದೆ. ಹಾಗೆಯೇ ರೋಗ ನಿರೋಧಕ ಶಕ್ತಿಯನ್ನು ಕುಂದಿಸುವ ದುರಭ್ಯಾಸಗಳನ್ನು ದೂರ ಮಾಡೋಣ.

ಲಾಕ್‌ಡೌನ್‌ ಸಡಿಲಿಕೆಯಾಗಿರುವ ಕಾರಣ ಜನರು ಅನಾವಶ್ಯವಾಗಿ ಹೊರಗಡೆ ಬರಬಾರದು. ಕೋವಿಡ್-19 ಕಡಿಮೆಯಾಗಿದೆ ಎಂದು ನಿರ್ಲಕ್ಷ್ಯ ವಹಿಸದೇ ದಿನಸಿ ಸಾಮಗ್ರಿ, ಇತರ ವಸ್ತುಗಳ ಖರೀದಿಗೆ ತೆರಳಿದಾಗ ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು. 60 ವರ್ಷ ಮೇಲ್ಪಟ್ಟವರು, ಗರ್ಭಿಣಿಯರು, ಬಿಪಿ, ಶುಗರ್‌, ಅಸ್ತಮಾ, ಕ್ಯಾನ್ಸರ್‌ ಮತ್ತಿತರ ದೀರ್ಘ‌ಕಾಲಿಕ ಸಮಸ್ಯೆಗಳಿಂದ ಬಳಲುತ್ತಿರುವವರು ಮುಂದೆಯೂ ಆದಷ್ಟು ಮನೆಯೊಳಗಡೆಯೇ ಇರಬೇಕು. ವೈದ್ಯರ ಬಳಿ ತೆರಳುವ ಮುನ್ನ ಅವರಲ್ಲಿ ಸಮಯ ನಿಗದಿ ಪಡಿಸಿ ಹೋಗಬೇಕು. ಇದರಿಂದ ಅನಾವಶ್ಯಕ ಕಾಯುವುದು ತಪ್ಪುತ್ತದೆ. ಒಟ್ಟಾರೆಯಾಗಿ ಎಲ್ಲರೂ ಸಾಮಾಜಿಕ ಜವಾಬ್ದಾರಿ ಅರಿತುಕೊಂಡು ಸೋಂಕು ಹರಡದಂತೆ ಸಾಮಾಜಿಕ ಅಂತರವನ್ನು ಕಾಪಾಡಬೇಕು.
-ಡಾ| ರಾಮಚಂದ್ರ ಬಾಯರಿ,
ಜಿಲ್ಲಾ ಆರೋಗ್ಯಾಧಿಕಾರಿ, ದ.ಕ.

ಕೋವಿಡ್‌-19ರ ವಿರುದ್ಧ ಸಾರ್ವಜನಿಕರು ಸ್ವಯಂ ಆರೋಗ್ಯದ ರಕ್ಷಣೆ ಮಾಡಿಕೊಳ್ಳಬೇಕು. ಸಾರ್ವಜನಿಕ ಸ್ಥಳದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಧರಿಸುವುದು, ವಸ್ತುಗಳನ್ನು ಮುಟ್ಟಿದ ಬಳಿಕ ಸ್ಯಾನಿಟೈಸರ್‌ ಬಳಸುವುದು ಕಡ್ಡಾಯ. ಜತೆಗೆ ರೆಡ್‌ಝೋನ್‌ನಿಂದ ಬರುವವರ ಮಾಹಿತಿ ಸಹಾಯವಾಣಿಗೆ ನೀಡಬೇಕು. ಬೇರೆ ಜಿಲ್ಲೆಯಿಂದ ಬಂದವರು, ಕೋವಿಡ್‌ 19 ಗುಣಮುಖ ಹೊಂದಿರುವವರು ಕಡ್ಡಾಯವಾಗಿ ಹೋಮ್‌ ಕ್ವಾರೆಂಟೈನ್‌ನಲ್ಲಿ ಇರಬೇಕು. ಆ ಮೂಲಕ ಕೋವಿಡ್-19 ವೈರಸ್‌ನ್ನು ಸಮುದಾಯಕ್ಕೆ ಹರಡದಂತೆ ನೋಡಿಕೊಳ್ಳಲು ಸಾಧ್ಯ.
-ಡಾ| ಸುಧೀರ್‌ಚಂದ್ರ ಸೂಡ, ಡಿಎಚ್‌ಒ, ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next