Advertisement

30 ಕೋತಿ ಮೇಲೆ ಲಸಿಕೆ ಪ್ರಯೋಗ? ಎನ್‌ಐವಿಯಲ್ಲಿ ನಡೆಯಲಿದೆ ಟ್ರಯಲ್‌

02:49 AM Jun 04, 2020 | Sriram |

ಪುಣೆ: ವೈರಸ್‌ಗೆ ಲಸಿಕೆ ಅಭಿವೃದ್ಧಿ ವಿಚಾರದಲ್ಲಿ ವಿವಿಧ ದೇಶಗಳೊಂದಿಗೆ ಭಾರತವೂ ಪ್ರಬಲ ಪೈಪೋಟಿ ನಡೆಸುತ್ತಿದ್ದು, ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್‌) ಯ ನ್ಯಾಶನಲ್‌ ಇನ್‌ಸ್ಟಿಟ್ಯೂಟ್‌ ಆಫ್ ವೈರಾಲಜಿಯು ಲಸಿಕೆಯ ಪ್ರಯೋಗಕ್ಕೆ 30 ಕೋತಿಗಳ ಬಳಕೆಗೆ ಅನುಮತಿ ನೀಡಿದೆ.

Advertisement

3 ರಿಂದ 4ರ ವಯೋಮಾನದ 30 ಹೆಣ್ಣು ಕೋತಿಗಳನ್ನು ಪುಣೆಯ ನ್ಯಾಶನಲ್‌ ಇನ್‌ ಸ್ಟಿಟ್ಯೂಟ್‌ ಆಫ್ ವೈರಾಲಜಿಗೆ ಸದ್ಯದಲ್ಲೇ ಹಸ್ತಾಂತರಿಸಲಾಗುತ್ತದೆ. ಪುಣೆಯ ವಡ ಗಾಂವ್‌ ಅರಣ್ಯ ಪ್ರದೇಶ ದಿಂದ ಈ ಕೋತಿಗಳನ್ನು ಹಿಡಿದು ತಂದು, ಇವುಗಳ ಮೇಲೆ ಲಸಿಕೆ ಪ್ರಯೋಗ ನಡೆಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಮಂಗಗಳನ್ನು ಹಿಡಿಯುವ ಪ್ರಕ್ರಿಯೆಯಲ್ಲಿ ಅರಣ್ಯ ಇಲಾಖೆಯು ವೈರಾಲಜಿ ಸಂಸ್ಥೆಗೆ ಸಹಾಯ ಮಾಡಲಿದ್ದು, ಸಂಸ್ಥೆಯ ಸಿಬಂದಿಯೇ ಕೋತಿಗಳನ್ನು ಹಿಡಿದು ತರಬೇಕಿದೆ. ಈ ಕುರಿತು ಮಾಹಿತಿ ನೀಡಿ ರುವ ಮಹಾರಾಷ್ಟ್ರ ಅರಣ್ಯ ಸಚಿವ ಸಂಜಯ್‌ ರಾಥೋಡ್‌, ಕೋತಿಗಳ ಮೇಲೆ ಲಸಿಕೆಯ ಪ್ರಯೋಗ ನಡೆಸಲು ನಾವು ಅನುಮತಿ ನೀಡಿದ್ದೇವೆ. ಅವುಗಳ ದೈನಂದಿನ ಚಟುವಟಿಕೆಗಳಿಗೆ ತೊಂದರೆ ಯಾಗಬಾರದು ಮತ್ತು ಪ್ರಾಣಿಗಳನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂಬ ಸೂಚನೆಯನ್ನು ನೀಡಿದ್ದೇನೆ. ಜತೆಗೆ, ಈ ಪ್ರಾಜೆಕ್ಟ್ ಅನ್ನು ವಾಣಿಜ್ಯ ಉದ್ದೇಶಕ್ಕೆ ಬಳಸುವಂತಿಲ್ಲ ಎಂಬ ಷರತ್ತನ್ನೂ ಹಾಕಲಾಗಿದೆ ಎಂದಿದ್ದಾರೆ.

ದೇಶಾದ್ಯಂತ ಸದ್ಯ 10ಕ್ಕೂ ಹೆಚ್ಚು ಲಸಿಕೆ ಗಳ ಪ್ರಯೋಗ ನಡೆಯುತ್ತಿದೆ. ಮುಂದಿನ 3ರಿಂದ 6 ತಿಂಗಳೊಳಗಾಗಿ ಸುಮಾರು 4 ಲಸಿಕೆಗಳು ಕ್ಲಿನಿಕಲ್‌ ಪ್ರಯೋಗದ ಹಂತಕ್ಕೆ ತಲುಪಲಿವೆ ಎಂದು ಕಳೆದ ವಾರವಷ್ಟೇ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್‌ ಹೇಳಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next