ಒಂದೇ ದಿನದಲ್ಲಿ ದೇಶಾದ್ಯಂತ 328 ಮಂದಿಗೆ ಕೋವಿಡ್ 19 ವೈರಸ್ ಸೋಂಕು ದೃಢಪಟ್ಟಿದ್ದು, ಈ ಪೈಕಿ ಹೆಚ್ಚಿನವರು ಹೊಸದಿಲ್ಲಿಯ ನಿಜಾಮುದ್ದೀನ್ ನ ಧಾರ್ಮಿಕ ಸಮಾವೇಶಕ್ಕೆ ಹೋಗಿ ಬಂದವರು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಗುರುವಾರ ಮಾಹಿತಿ ನೀಡಿದೆ.
ಅಲ್ಲದೆ, 24 ಗಂಟೆಗಳ ಅವಧಿಯಲ್ಲಿ 12 ಮಂದಿ ಮೃತಪಟ್ಟಿರುವುದಾಗಿಯೂ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ ಅಗರ್ವಾಲ್ ಹೇಳಿದ್ದಾರೆ. ಒಟ್ಟಾರೆ ದೇಶದಲ್ಲಿ ಈವರೆಗೆ 2397 ಮಂದಿಗೆ ಸೋಂಕು ತಗುಲಿದ್ದು, 69 ಮಂದಿ ಸಾವಿಗೀಡಾಗಿದ್ದಾರೆ.
ಯಾವ ರಾಜ್ಯದಲ್ಲಿ ಎಷ್ಟೆಷ್ಟು?: ಮಹಾರಾಷ್ಟ್ರದಲ್ಲಿ ಒಂದೇ ದಿನ 81 ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 416ಕ್ಕೇರಿದೆ. ಇಲ್ಲಿ ಒಟ್ಟು 19 ಮಂದಿ ಸಾವಿಗೀಡಾಗಿದ್ದಾರೆ. ತಮಿಳುನಾಡಿನಲ್ಲಿ ಗುರುವಾರ 75 ಮಂದಿಗೆ (ಒಟ್ಟು 309ಕ್ಕೇರಿಕೆ) ಸೋಂಕು ದೃಢವಾಗಿದೆ. ಕೇರಳದಲ್ಲಿ 21 ಮಂದಿ(286)ಗೆ, ದೆಹಲಿಯಲ್ಲಿ 67 ಮಂದಿಗೆ (219), ಆಂಧ್ರಪ್ರದೇಶದ 32 ಮಂದಿ (143), ರಾಜಸ್ಥಾನದಲ್ಲಿ 13(133), ಕರ್ನಾಟಕದಲ್ಲಿ 11 (121), ಉತ್ತರಪ್ರದೇಶದಲ್ಲಿ 4 (121), ಜಮ್ಮು- ಕಾಶ್ಮೀರದಲ್ಲಿ 8 (70), ಪಶ್ಚಿಮ ಬಂಗಾಳ 16 (53), ಹರ್ಯಾಣದಲ್ಲಿ 6 (49) ಸೇರಿದಂತೆ ಒಟ್ಟಾರೆ 300ಕ್ಕೂ ಹೆಚ್ಚು ಮಂದಿಗೆ ಕೋವಿಡ್ 19 ವೈರಸ್ ಇರುವುದು ದೃಢಪಟ್ಟಿದೆ.
ದೇಶಾದ್ಯಂತ ಒಟ್ಟು 50 ವೈದ್ಯಕೀಯ ಸಿಬಂದಿಗೆ (ವೈದ್ಯರು, ನರ್ಸ್ ಗಳು ಹಾಗೂ ಅರೆವೈದ್ಯಕೀಯ ಸಿಬಂದಿ) ಕೊರೊನಾ ಸೋಂಕು ದೃಢಪಟ್ಟಿದೆ ಎಂದು ಹೇಳಿದೆ.