ಲಂಡನ್: ಕೋವಿಡ್ 19 ಗ್ರಂಥದ ಲಂಡನ್ ಅಧ್ಯಾಯದಲ್ಲಿ ಭಾರತೀಯ ಪುಟಗಳನ್ನು ಓದುತ್ತೀರಾ? ಹಾಗಾದರೆ ಇಲ್ಲಿವೆ ಆ ಪುಟಗಳು. ಇದರಲ್ಲಿ ದುಃಖವೂ ಇದೆ, ಸಮಾಧಾನವೂ ಇದೆ. ದುಃಖವೆಂದರೆ ಭಾರತಕ್ಕೆ ವಾಪಸಾಗಬೇಕಿದ್ದವರಿಗೆ ದಿಕ್ಕು ಕಾಣದಿರುವುದು, ಸಮಾಧಾನವೆಂದರೆ ಭಾರತೀಯ ದೂತವಾಸ ತಾತ್ಕಾಲಿಕ ವ್ಯವಸ್ಥೆ ಮಾಡಿರುವುದು.
ಲಂಡನ್‌ನಲ್ಲಿ ಸೋಂಕು ಕಾಳ್ಗಿಚ್ಚಿನಂತೆ ಹಬ್ಬುತ್ತಿದೆ. ಸಮಾಧಾನಕಾರ ಸಂಗತಿಯೆಂದರೆ ತಡವಾಗಿಯಾದರೂ ಇಂಗ್ಲೆಂಡ್ ಕುಂಭಕರ್ಣ ನಿದ್ರೆಯಿಂದ ಎಚ್ಚೆತ್ತಿದೆಯಂತೆ. ಆರಂಭದಲ್ಲಿ ಸಾವು ನೋವಿನ ಪ್ರಮಾಣ ಕಡಿಮೆ ಇದ್ದದ್ದು ನಿಜ. ಈಗ ಸೋಂಕು ಪೀಡಿತರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿರುವುದೂ ಅಷ್ಟೇ ನಿಜ. ಶಿಕ್ಷಣ ಹಾಗೂ ವಿಶೇಷ ಅಧ್ಯಯನಕ್ಕೆ ತೆರಳಿದ ಭಾರತೀಯ ವಿದ್ಯಾರ್ಥಿಗಳು ಇಲ್ಲಿ ಹೆಚ್ಚಿದ್ದಾರೆ. ಇದೀಗ ಆವರಿಗೆ ಭಾರತಕ್ಕೆ ಮರಳು ಸಾಧ್ಯವಾಗುತ್ತಿಲ್ಲ.
ತಿಂಗಳುಗಳ ಹಿಂದೆ ಲಂಡನ್‌ಗೆ ತೆರಳಿದ್ದ ಮಂಗಳೂರಿನ ವರೊಬ್ಬರು ಉದಯವಾಣಿ ಜತೆ ಮಾತನಾಡಿದ್ದು ಅಲ್ಲಿನ ಪರಿಸ್ಥಿತಿಯನ್ನು ಬಿಚ್ಚಿಟ್ಟಿದ್ದಾರೆ.
‘ವಿಮಾನ ಕ್ಯಾನ್ಸಲ್ ಆಯ್ತು…ತಮ್ಮ ಕುಟುಂಬದ ಮೂವರು ಸದಸ್ಯರೊಂದಿಗೆ ಉದ್ಯೋಗದ ಕಾರಣಕ್ಕಾಗಿ ಲಂಡನ್‌ಗೆ ಇವರು ತೆರಳಿದ್ದರು. ಮಾರ್ಚ್ 19ರಂದು ಭಾರತಕ್ಕೆ ಹೊರಡಬೇಕಾದ ಏರ್‌ಇಂಡಿಯಾ ವಿಮಾನದಲ್ಲಿ ಟಿಕೇಟು ಕಾದಿರಿಸಿದ್ದರು. ಹೊರಡುವ ತಯಾರಿಯಲ್ಲಿದ್ದ ಅವರಿಗೆ ಇಂಗ್ಲೆಂಡ್‌ನಿಂದ ಹೊರಡಬೇಕಿದ್ದ ಎಲ್ಲ ವಿಮಾನಗಳನ್ನು ಮಾರ್ಚ್ 19ರಂದೇ ಏರ್ ಇಂಡಿಯಾ ಸ್ಥಗಿತಗೊಳಿಸಿದ್ದು ಅಸಹಾಯಕ ಪರಿಸ್ಥಿತಿಗೆ ದೂಡಿತು. ಆ ಕಾರಣದಿಂದ ಇನ್ನೂ 20 ದಿನಗಳ ಕಾಲ ಲಂಡನ್‌ನಲ್ಲೇ ಉಳಿದುಕೊಳ್ಳಬೇಕಿದೆ. ಅವರಿಗೆಲ್ಲರಿಗೂ ತಾತ್ಕಾಲಿಕ ವ್ಯವಸ್ಥೆಯನ್ನು ಭಾರತೀಯ ದೂತಾವಾಸ ಮಾಡಿದೆ. ಮಾರ್ಚ್ 19ರ ವಿಮಾನಕ್ಕೆ ಟಿಕೆಟ್ ಕಾದಿರಿಸವರಿಗೆ ಹಣ ಮರುಪಾವತಿಯ ಭರವಸೆ ಏರ್‌ಇಂಡಿಯಾ ನೀಡಿದೆ. ಆದರೆ ಟಿಕೆಟ್ ಬುಕ್ಕಿಂಗ್ ಏಜೆಂಟರು ಪ್ರಯಾಣಿಕರ ಬೇಡಿಕೆಗೆ ತಕ್ಕಂತೆ ಸ್ಪಂದಿಸುತ್ತಿಲ್ಲ ಎಂಬ ಕೊರಗು ಅವರದ್ದು.
ಸೆಮಿಸ್ಟರ್ ಕೊನೆ ಸಂದರ್ಭ ಸೆಮಿಸ್ಟರ್ ಮುಗಿದು ರಜಾ ಅವಧಿ ಶುರುವಾಗಿದ್ದ ಸಂದರ್ಭ. ಸಾಕಷ್ಟು ಮಂದಿ ಭಾರತೀಯ ವಿದ್ಯಾರ್ಥಿಗಳು ಭಾರತಕ್ಕೆ ಬರಲು ಸಿದ್ಧವಾಗಿದ್ದರು. ಆದರೆ ಈಗ ವಿಮಾನ ಸೇವೆ ರದ್ದಾಗಿರುವ ಕಾರಣ ಏನೂ ಮಾಡದಂತಾಗಿದೆ. ಭಾರತೀಯ ದೂತಾವಾಸ ಇವರಿಗೆ ಪರ್ಯಾಯ ವ್ಯವಸ್ಥೆ ಮಾಡಿದೆ. ಮೊದಲೆರಡು ದಿನ ದೂತಾವಾಸದಲ್ಲಿದ್ದರೂ, ಬಳಿಕ ಬಳಿಯ ವಸತಿಗೃಹದಲ್ಲಿ ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿದೆ. ವೀಸಾ ವಿಸ್ತರಣೆ ನಿಗದಿತ ಸಮಯದ (ಪ್ರವಾಸಿ ವೀಸಾ ಇತ್ಯಾದಿ) ವೀಸಾದಲ್ಲಿ ತೆರಳಿ ಅವಧಿ ಮುಗಿದಿದ್ದರೆ ಅಂಥವುಗಳ ಅವಧಿಯನ್ನು ವಿಸ್ತರಿಸಲಾಗುತ್ತಿದೆ. ಈ ನಿವಾಸಿಗಳ ನೆರವಿಗೆ ಭಾರತೀಯ ದೂತಾವಾಸ ನಿಂತಿದೆ.
ಲಂಡನ್ ಕಥೆ: ಬ್ರಿಟನ್ ಆರಂಭದಲ್ಲಿ ಕೋವಿಡ್ 19ವನ್ನು ಲಘವಾಗಿ ಪರಿಗಣಿಸಿದ್ದರಿಂದ ಸೋಂಕಿತರ ಸಂಖ್ಯೆ ಹೆಚ್ಚಾಯಿತು. ಜನರು ಪಾರ್ಕ್, ಸಿನೆಮಾ, ಬೀಚ್‌ಗಳಲ್ಲಿ ಸುತ್ತಾಡಿಕೊಳ್ಳುತ್ತಿದ್ದರು. ಇಲ್ಲಿ ಸೋಂಕು ಸುಲಭವಾಗಿ ಒಬ್ಬರಿಂದ ಮತ್ತೂಬ್ಬರಿಗೆ ಹರಡಿತು. ಕೊನೆಗೂ ಎಚ್ಚೆತ್ತ ಸರಕಾರ, ಕೆಲವೆ ದಿನಗಳ ಹಿಂದಷ್ಟೇ ಲಾಕ್‌ಡೌನ್ ಘೋಷಿಸಿದೆ. ಇಲ್ಲಿ ಕುಟುಂಬದ ಸದಸ್ಯರ ಜತೆ ಮಾತ್ರ ತೆರಳಬಹುದು. ಬೇರೆ ಕುಟುಂದ ಒಬ್ಬ ಸದಸ್ಯರನ್ನು ಮಾತ್ರ ಭೇಟಿಯಾಗಬಹುದು. ಗುಂಪಾಗಿ ಜನ ಸೇರಿದರೆ ದಂಡ ಖಚಿತ. ಅಗತ್ಯ ವಸ್ತುಗಳನ್ನು ಖರೀದಿಸಲು ಅವಕಾಶವಿದೆ. ಸಾರ್ವಜನಿಕ ಸಂಪರ್ಕ ಸೇವೆಗಳೆಲ್ಲಾ ಬಂದ್. ಬಹುತೇಕ ಸಂಸ್ಥೆಗಳಲ್ಲಿ ಮನೆಯಿಂದಲೇ ಕೆಲಸ.
— ಕಾರ್ತಿಕ್ ಆಮೈ