Advertisement

ರಾಜ್ಯದ 15 ಜಿಲ್ಲೆ ರೆಡ್‌ ಝೋನ್‌ ; ರಾಜ್ಯದಲ್ಲಿ ಸಾವಿನ ಸಂಖ್ಯೆ 21ಕ್ಕೆ ಏರಿಕೆ

08:11 AM May 01, 2020 | Hari Prasad |

ಬೆಂಗಳೂರು: ರಾಜ್ಯ ಆರೋಗ್ಯ ಇಲಾಖೆ ಹೊಸ ಮಾನದಂಡ­ಗಳೊಂದಿಗೆ ಜಿಲ್ಲಾವಾರು ಕೆಂಪು, ಕಿತ್ತಳೆ ಹಾಗೂ ಹಸುರು ವಲಯವನ್ನು ಪಟ್ಟಿ  ಮಾಡಿದ್ದು, ರಾಜ್ಯದ 15 ಜಿಲ್ಲೆಗಳು ಕೆಂಪು ವಲಯ­ದಲ್ಲಿವೆ.

Advertisement

ಕೋವಿಡ್ ಸೋಂಕು ಪ್ರಕರಣಗಳನ್ನು ಆಧರಿಸಿ ಈ ವಲಯಗಳನ್ನು ಗುರುತಿಸಲಾ­ಗಿದೆ. ಕಳೆದ 14 ದಿನಗಳಲ್ಲಿ ಸೋಂಕು ದೃಢಪಟ್ಟ ಜಿಲ್ಲೆಗಳನ್ನು ಕೆಂಪು ವಲಯ­ವಾಗಿ, ಕಳೆದ 14 ದಿನಗಳಲ್ಲಿ ಯಾವುದೇ ಪ್ರಕರಣ ದಾಖಲಾಗದೆ, 15 ರಿಂದ 28 ದಿನಗಳಲ್ಲಿ ಸೋಂಕು ಪ್ರಕರಣ ದೃಢಪಟ್ಟ ಜಿಲ್ಲೆಯನ್ನು ಕಿತ್ತಳೆ ವಲಯವಾಗಿ, ಕಳೆದ 28 ದಿನಗಳಲ್ಲಿ ಯಾವುದೇ ಸೋಂಕು ಪ್ರಕರಣ ದೃಢಪಡದ ಜಿಲ್ಲೆಯನ್ನು ಹಸುರು ವಲಯವಾಗಿ ಗುರುತಿಸ­ಲಾಗಿದೆ.

ಬುಧವಾರ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ  ರಾಜ್ಯದ 15 ಜಿಲ್ಲೆಗಳು ಕೆಂಪು, 3 ಜಿಲ್ಲೆಗಳು ಕಿತ್ತಳೆ ಹಾಗೂ 12 ಜಿಲ್ಲೆಗಳು ಹಸುರು ವಲಯದಲ್ಲಿವೆ. ಉಡುಪಿ ಜಿಲ್ಲೆ ಹಸುರು ವಲಯಕ್ಕೆ ಸೇರ್ಪಡೆಯ ಅರ್ಹತೆ ಗಳಿಸಿದ್ದು, ಅಧಿಕೃತವಾಗಿ ಘೋಷಣೆಯಾಗಬೇಕಿದೆ.

ರಾಜ್ಯದಲ್ಲಿ ಸಾವಿನ ಸಂಖ್ಯೆ 21ಕ್ಕೆ
ರಾಜ್ಯದಲ್ಲಿ ಕೋವಿಡ್ ವೈರಸ್ ಕಾರಣದಿಂದ ಮತ್ತೊಬ್ಬರು ಮೃತಪಟ್ಟಿದ್ದಾರೆ. ಬುಧವಾರ ಮೃತಪಟ್ಟ ಈ ವೃದ್ಧ ತುಮಕೂರಿನವರು. ಇದರೊಂದಿಗೆ ರಾಜ್ಯದಲ್ಲಿ ಕೋವಿಡ್ ವೈರಸ್ ನಿಂದ ಮೃತಪಟ್ಟವರ ಸಂಖ್ಯೆ 21ಕ್ಕೆ ಏರಿಕೆಯಾಗಿದೆ. ಇದೇ ವೇಳೆ ಬುಧವಾರ ಒಟ್ಟು 12 ಪ್ರಕರಣಗಳು ಕಂಡು ಬಂದಿದ್ದು, ಸೋಂಕಿಗೊಳಗಾದವರ ಸಂಖ್ಯೆ 535ಕ್ಕೆ ತಲುಪಿದೆ.

ತುಮಕೂರಿನ ಮೃತ ವೃದ್ಧನಿಗೆ 73 ವರ್ಷ ವಯಸ್ಸಾಗಿದ್ದು, ಎ.25ರಂದು ತೀವ್ರ ಉಸಿರಾಟ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು. ದೀರ್ಘ‌ಕಾಲದ ಶ್ವಾಸಕೋಶ ರೋಗ (ಸಿಒಪಿಡಿ), ಮಧುಮೇಹ ಮತ್ತು ಅಸ್ತಮಾದಿಂದ ಬಳಲುತ್ತಿದ್ದರು. ಬುಧವಾರ ಸಂಜೆ ಸೋಂಕು ದೃಢಪಟ್ಟಿದ್ದು, ಅಷ್ಟರಲ್ಲಾಗಲೇ ಚಿಕಿತ್ಸೆ ಫ‌ಲಕಾರಿಯಾಗದೆ ಸಾವಿಗೀಡಾಗಿದ್ದರು.

Advertisement

ಕಳೆದ ವಾರ ಜಿಲ್ಲಾವಾರು ಸೋಂಕುಪೀಡಿತರ ಪಟ್ಟಿಯಲ್ಲಿ ಕಲಬುರಗಿ ಐದನೇ ಸ್ಥಾನದಲ್ಲಿತ್ತು. ಆದರೆ ಈ ವಾರ ನಿರಂತರ ಸೋಂಕು ಪ್ರಕರಣಗಳ ಹೆಚ್ಚಳ ಮತ್ತು ಬುಧವಾರ ಒಂದೇ ದಿನ ಎಂಟು ಪ್ರಕರಣ ದೃಢವಾದ್ದರಿಂದ ಅಲ್ಲಿ ಸೋಂಕುಪೀಡಿತರ ಸಂಖ್ಯೆ 52ಕ್ಕೆ ಏರಿದೆ.

ಡಿಸಿಎಂ, ಗೃಹ ಸಚಿವರು ಕ್ವಾರಂಟೈನ್‌
ಕೋವಿಡ್ 19 ವೈರಸ್ ಪ್ರಕರಣ 475 ಜತೆ ನೇರ ಸಂಪರ್ಕ ಹೊಂದಿದ್ದ‌ ಕಾರಣ ಡಿಸಿಎಂ ಡಾ| ಅಶ್ವತ್ಥನಾರಾಯಣ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ವೈದ್ಯಕೀಯ ಸಚಿವ ಡಾ| ಸುಧಾಕರ್‌ ಹೋಮ್‌ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ.

ಕೇಸ್‌  475ರ ಪ್ರಯಾಣ ಮಾಹಿತಿ ಬಿಡುಗಡೆಯಾದ ಬಳಿಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಟ್ವೀಟ್‌ ಮಾಡಿ, ಕೋವಿಡ್ ನಿಯಂತ್ರಣ ವಿಷಯದಲ್ಲಿ ಸರಕಾರ ದ್ವಿಮುಖ ನೀತಿ ಅನುಸರಿಸುತ್ತಿದ್ದು, ಸೋಂಕು ದೃಢಪಟ್ಟಿರುವ ವ್ಯಕ್ತಿಯು ಸಿಎಂ, ಡಿಸಿಎಂ, ಗೃಹ ಸಚಿವರು ಮತ್ತು ಇತರ ಇಬ್ಬರು ಸಚಿವರ ಸಂಪರ್ಕಕ್ಕೆ ಬಂದಿದ್ದರೂ ಕ್ವಾರಂಟೈನ್‌ಗೆ ಒಳಗಾಗಿಲ್ಲ ಎಂದು ಆಕ್ಷೇಪಿಸಿದ್ದರು.

ಇದಾದ ಕೆಲವೇ ಕ್ಷಣಗಳಲ್ಲಿ ಡಾ| ಅಶ್ವತ್ಥನಾರಾಯಣ, ಬೊಮ್ಮಾಯಿ, ಡಾ| ಸುಧಾಕರ್‌ ಮತ್ತು ಸಿ.ಟಿ. ರವಿ ಟ್ವೀಟ್‌ ಮಾಡಿ, ತಾವು ತಪಾಸಣೆ ಮಾಡಿಸಿದ್ದು, ನೆಗೆಟಿವ್‌ ವರದಿ ಬಂದಿದೆ ಎಂದರು. ಆದರೂ ಹೋಮ್‌ ಕ್ವಾರಂಟೈನ್‌ಗೆ ಒಳಗಾಗಿರುವುದಾಗಿ ಡಾ| ಅಶ್ವತ್ಥ ನಾರಾಯಣ ಮತ್ತು ಬೊಮ್ಮಾಯಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next