Advertisement

ಹಲ್ಲೆಕೋರರ ವಿರುದ್ಧ ಕಠಿನ ಕ್ರಮಕ್ಕೆ ನಿರ್ಧಾರ: ಬೆತ್ತಲಾಗಿ ತಿರುಗಿದರು, ಕಿರಿಕಿರಿ ಮಾಡಿದರು!

09:30 AM Apr 06, 2020 | Hari Prasad |

ಹೊಸದಿಲ್ಲಿ: ಕೋವಿಡ್ 19 ವೈರಸ್ ಸೋಂಕು ಪರೀಕ್ಷೆಗೆ ಆಗಮಿಸಿದ್ದ ವೈದ್ಯರು, ಸಹಾಯಕ ಸಿಬ್ಬಂದಿಯ ಮೇಲೆ ದೇಶದ ಅಲ್ಲಲ್ಲಿ ನಡೆದ ಹಲ್ಲೆಗಳನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಈ ಪ್ರಕರಣಗಳಲ್ಲಿನ ತಪ್ಪಿತಸ್ಥರ ಮೇಲೆ 1980ರ ರಾಷ್ಟ್ರೀಯ ಭದ್ರತಾ ಕಾಯ್ದೆಯನ್ವಯ (ಎನ್‌ಎಸ್‌ಎ) ಪ್ರಕರಣ ದಾಖಲಿಸಲಾಗಿದೆ. ಮತ್ತೂಂದೆಡೆ, ನಿಜಾಮುದ್ದೀನ್‌ ಸಮಾವೇಶದಲ್ಲಿ ಭಾಗಿಯಾಗಿದ್ದ 960 ವಿದೇಶಿಗರನ್ನು ಕಪ್ಪುಪಟ್ಟಿಗೆ ಸೇರಿಸಲಾಗಿದೆ. ಭವಿಷ್ಯದಲ್ಲಿ ಅವರು ಮತ್ತೆಂದೂ ಭಾರತಕ್ಕೆ ಕಾಲಿಡಂತೆ ಮಾಡಲಾಗಿದೆ.

Advertisement

ಇಂದೋರ್‌ನಲ್ಲಿ: ಮಧ್ಯಪ್ರದೇಶದ ಇಂದೋರ್‌ನಲ್ಲಿ ವೈದ್ಯಕೀಯ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದ ನಾಲ್ವರ ವಿರುದ್ಧ ಎನ್‌ಎಸ್‌ಎ ಅನ್ವಯ ಪ್ರಕರಣ ದಾಖಲಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ವಶಕ್ಕೆ ಪಡೆದು, ಅವರ ವಿರುದ್ಧ ಈಗ ಎನ್‌ಎಸ್‌ಎ ಅನ್ವಯ ಪ್ರಕರಣ ದಾಖಲಿಸಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಆರು ಮಂದಿಯನ್ನು ವಿಚಾರಣೆ ನಡೆಸಲಾಗುತ್ತಿದೆ. ಜಾಲತಾಣಗಳಲ್ಲಿ ತಪ್ಪು ಸಂದೇಶಗಳನ್ನು ಹರಡುತ್ತಿದ್ದ ಆಧಾರದಲ್ಲಿ ಆರಿಫ್‌ ಖಾನ್‌ (26) ಎಂಬಾತನನ್ನು ಬಂಧಿಸಲಾಗಿದೆ.

ಉತ್ತರ ಪ್ರದೇಶದಲೂ: ಉತ್ತರ ಪ್ರದೇಶ ಸರಕಾರ ಕೂಡ, ಪೊಲೀಸರ ಮೇಲೆ, ವೈದ್ಯಕೀಯ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸುವವರ ವಿರುದ್ಧ ಎನ್‌ಎಸ್‌ಎ ಕಾಯ್ದೆ ಜಾರಿಗೊಳಿಸುವಂತೆ ಎಲ್ಲಾ ಜಿಲ್ಲಾಡಳಿತಗಳಿಗೆ ಸೂಚಿಸಿದೆ. ಬುಧವಾರ ರಾತ್ರಿ ಮುಝಾಫ‌ರ್‌ಪುರ್‌ ನಗರದಲ್ಲಿ ಲಾಕ್‌ಡೌನ್‌ ಉಲ್ಲಂಘಿಸಿ ಯುವಕರ ತಂಡ ,ಪೊಲೀಸರ ಮೇಲೆ ಹಲ್ಲೆ ನಡೆಸಿತ್ತು.

ಆಗ ಒಬ್ಬ ಸಬ್‌ ಇನ್ಸ್‌ಪೆಕ್ಟರ್‌, ಒಬ್ಬ ಪೇದೆ ಗಂಭೀರವಾಗಿ ಗಾಯಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌, ಎನ್‌ಎಸ್‌ಎ ಕಾಯ್ದೆ ಅನ್ವಯ ಪ್ರಕರಣ ದಾಖಲಿಸುವಂತೆ ಆದೇಶಿಸಿದ್ದಾರೆ.

Advertisement

ಬೆತ್ತಲಾಗಿ ತಿರುಗಿದರು, ಕಿರಿಕಿರಿ ಮಾಡಿದರು
ಗಾಜಿಯಾಬಾದ್‌ನ ಎಂಎಂಜಿ ಆಸ್ಪತ್ರೆಯಲ್ಲಿರುವ ತೀವ್ರ ನಿಗಾ ವಲಯಗಳಲ್ಲಿ ಇರುವ ಆರು ಮಂದಿ ತಬ್ಲೀ ಬೆಂಬಲಿಗರ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆಯ ಅನ್ವಯ ಕೇಸು ದಾಖಲಿಸಲಾಗಿದೆ.

ಚಿಕಿತ್ಸೆಗಾಗಿ ಬಂದ ವೈದ್ಯರು, ಶುಶ್ರೂಷಕರ ಕಡೆಗೆ ಅಸಹ್ಯವಾದ ಚಿಹ್ನೆ ತೋರಿಸಿದ್ದು, ಇಡೀ ಕ್ವಾರಂಟೈನ್‌ ಘಟಕದಲ್ಲಿ ಬೆತ್ತಲೆಯಾಗಿ ಅಲೆಯುತ್ತಾ ಎಲ್ಲರಿಗೂ ಕಿರಿಕಿರಿ ಉಂಟು ಮಾಡುತ್ತಿದ್ದಾರೆ. ವೈದ್ಯರ ದೂರಿನ ಹಿನ್ನೆಲೆಯಲ್ಲಿ ಅವರ ವಿರುದ್ಧ ಕೇಸು ದಾಖಲಿಸಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ತಿಳಿಸಿದ್ದಾರೆ.

ವಿದೇಶಿಗರ ಕಪ್ಪು ಪಟ್ಟಿಗೆ ಸೇರ್ಪಡೆ
ನಿಜಾಮುದ್ದೀನ್‌ ಸಮಾವೇಶಕ್ಕೆ ಆಗಮಿಸಿದ್ದ 960 ವಿದೇಶೀಯರನ್ನು ಕಪ್ಪು ಪಟ್ಟಿಗೆ ಸೇರಿಸಲಾಗಿದ್ದು ಅವರ ವೀಸಾಗಳನ್ನು ರದ್ದುಗೊಳಿಸಲಾಗಿದೆ ಎಂದು ಕೇಂದ್ರ ಗೃಹ ಇಲಾಖೆ ಪ್ರಕಟಿಸಿದೆ. ಇವರಲ್ಲಿ ನಾಲ್ವರು ಅಮೆರಿಕನ್ನರು, ಒಬ್ಬತ್ತು ಬ್ರಿಟಿಷರು, ಆರು ಚೀನೀಯರು, 379 ಇಂಡೋನೇಷಿಯನ್ನರು, 110, ಬಾಂಗ್ಲಾದೇಶೀಯರು, 63 ಮ್ಯಾನ್ಮಾರ್‌ ಪ್ರಜೆಗಳು, 33 ಲಂಕನ್ನರು, 77 ಕಿರ್ಗಿಸ್ತಾನ್‌ ಪ್ರಜೆಗಳು, 75 ಮಲೇಷಿಯನ್ನರು, 65 ಥಾಯ್ಲೆಂಡ್‌ನ‌ವರು, 12 ವಿಯೆಟ್ನಾಂ ಪ್ರಜೆ ಗಳು, 9 ಸೌದಿ ಅರೇಬಿಯಾದವರು ಹಾಗೂ ಮೂವರು ಫ್ರೆಂಚರು ಸೇರಿದ್ದಾರೆ ಎಂದು ಗೃಹ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ರಾಷ್ಟ್ರೀಯ ಭದ್ರತಾ ಕಾಯ್ದೆ ಪ್ರಮುಖಾಂಶಗಳು
– ರಾಷ್ಟ್ರೀಯ ಸುರಕ್ಷತೆಗೆ ಧಕ್ಕೆ ತರುವಂಥ ವ್ಯಕ್ತಿಗಳನ್ನು ಗುರುತಿಸಿ ಈ ಕಾಯ್ದೆಯಡಿ ಸರಕಾರ ಬಂಧಿಸಬಹುದು.

– ಕರ್ತವ್ಯ ನಿರತ ಪೊಲೀಸರು ಹಾಗೂ ಇನ್ನಿತರ ಸರ್ಕಾರಿ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದರೂ ಕಾಯ್ದೆ ಪ್ರಯೋಗಿಸಬಹುದು.

– ಆ ವ್ಯಕ್ತಿಯು ಕಾನೂನು, ನೀತಿ ಸಂಹಿತೆ ಉಲ್ಲಂಘಿಸುವುದನ್ನು ತಡೆಯಲು ಈ ಕ್ರಮ ಕೈಗೊಳ್ಳಲು ಅವಕಾಶ.

– ಕಾಯ್ದೆಯ ಅಡಿ ಬಂಧನಕ್ಕೊಳಗಾದ ವ್ಯಕ್ತಿಯನ್ನು 12 ತಿಂಗಳುಗಳವರೆಗೆ ಯಾವುದೇ ವಿಚಾರಣೆಯಿಲ್ಲದೆ ಬಂಧನದಲ್ಲಿ ಇಡಲು ಅವಕಾಶ.

– ಕಾಯ್ದೆಯಡಿ ಬಂಧಿಸಲ್ಪಡುವ ವ್ಯಕ್ತಿಗೆ ಆತನ/ಆಕೆಯ ವಿರುದ್ಧ ಇರುವ ಆರೋಪಗಳನ್ನು ಕನಿಷ್ಠ10 ದಿನಗಳವರೆಗೆ ತಿಳಿಸದೇ ಇರಲು ಅವಕಾಶ.

– ಬಂಧಿತನು ಆಯಾ ರಾಜ್ಯಗಳ ಹೈಕೋರ್ಟ್‌ಗಳಲ್ಲಿರುವ ಸಲಹಾ ಮಂಡಳಿಗಳಿಗೆ ತನ್ನ ಬಂಧನದ ವಿರುದ್ಧ ಮೇಲ್ಮನವಿ ಸಲ್ಲಿಸಬಹುದು.

– ಬಂಧಿತನಿಗೆ ತನ್ನ ಪರವಾಗಿ ವಾದ ಮಂಡಿಸಲು ಪ್ರತ್ಯೇಕವಾಗಿ ವಕೀಲರನ್ನು ನೇಮಿಸಿಕೊಳ್ಳುವ ಅವಕಾಶ ಇರುವುದಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next