ವಿಜಯಪುರ: ರಾಜ್ಯದಲ್ಲಿರುವ 7 ಪ್ರಯೋಗಾಲಯಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ಇದೀಗ ವಿಜಯಪುರ ಜಿಲ್ಲೆಯ ಶಾಸಕರ ಆಗ್ರಹದ ಮೇರೆಗೆ ಸರ್ಕಾರಿ ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್ 19 ವೈರಸ್ ಸೋಂಕು ಪತ್ತೆಗಾಗಿ ಅತ್ಯಾಧುನಿಕ ಪ್ರಯೋಗಾಲಯ ಸ್ಥಾಪನೆಗೆ ಪ್ರಸ್ತಾವನೆ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಆರೋಗ್ಯ ಸಚಿವ ಬಿ. ಶ್ರೀರಾಮುಲು ಹೇಳಿದರು.
ಡಿಸಿ ಕಚೇರಿ ಸಭಾಂಗಣದಲ್ಲಿ ಕೋವಿಡ್ 19ನಿಯಂತ್ರಣ ಕಾರ್ಯ ಚಟುವಟಿಕೆಗಳ ಕುರಿತು ಪರಿಶೀಲನೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ವಿಜಯಪುರ ಸರ್ಕಾರಿ ಆಸ್ಪತ್ರೆಗಳಲ್ಲಿ ಇದು ಅಸಾಧ್ಯ ಎಂದಾದರೆ ಖಾಸಗಿ ವೈದ್ಯಕೀಯ ಕಾಲೇಜುಗಳಿರುವ ಆಸ್ಪತ್ರೆಗಳಲ್ಲಿ ಈ ಪ್ರಯೋಗಾಲಯ ಸ್ಥಾಪನೆಗೆ ಅವಕಾಶ ಕಲ್ಪಿಸಲಾಗಿದೆ. ಜಿಲ್ಲೆ ಮಹಾರಾಷ್ಟ್ರದ ಗಡಿಗೆ ಹೊಂದಿಕೊಂಡಿದ್ದು, ಲಕ್ಷಾಂತರ ಜನರು ಗೋವಾಗೆ ವಲಸೆ ಹೋಗಿ ಬರುತ್ತಾರೆ. ಹೀಗಾಗಿ ಈ ಶಾಸಕರ ಕಾಳಜಿಯ ಭಾವನೆಗೆ ಸ್ಪಂದಿಸಲು ಪ್ರಯೋಗಾಲಯಕ್ಕೆ ಪ್ರಸ್ತಾವನೆ ಸಲ್ಲಿಸಲು ಸೂಚಿಸಲಾಗಿದೆ. ಈ ಗಂಭೀರ ಸಂದರ್ಭದಲ್ಲಿ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ರಾಜ್ಯದ ಜನರು ಮುಕ್ತವಾಗಿ ದೇಣಿಗೆ ನೀಡಿ ಸರ್ಕಾರದ ನೆರವಿಗೆ ನಿಂತಿದ್ದಾರೆ. ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಉಳ್ಳವರು ಮಾತ್ರವಲ್ಲ ಪ್ರತಿಯೊಬ್ಬರೂ ತಮ್ಮ ಕೈಲಾದಷ್ಟು ಸಹಾಯ ನೀಡಬೇಕು. ಆ ಮೂಲಕ ಹೆಚ್ಚಿನ ನೆರವು ಹರಿದು ಬರಲಿ ಎಂದರು.
ಕೋವಿಡ್ 19ವೈರಸ್ ನಿಗ್ರಹಕ್ಕೆ ನಮ್ಮ ಸರ್ಕಾರ ಎಲ್ಲ ರೀತಿಯ ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ಜಿಲ್ಲೆಯಲ್ಲಿ 40 ವೆಂಟಿಲೇಟರ್ ಇದ್ದು, ಇನ್ನೂ ಹೆಚ್ಚಿನ ವೆಂಟಿಲೇಟರ್ ಸೌಲಭ್ಯ ಕಲ್ಪಿಸಲಾಗುತ್ತದೆ ಎಂದರು.
2 ಸಾವಿರ ವೈದ್ಯರ ನೇಮಕ: ರಾಜ್ಯದಲ್ಲಿ ಕೋವಿಡ್ 19 ನಿಗ್ರಹ ವಿಷಯದಲ್ಲಿ ನಮ್ಮ ವೈದ್ಯರು, ನರ್ಸ್‌ಗಳು ಅತ್ಯುತ್ತಮ ಕರ್ತವ್ಯ ಮೆರೆಯುತ್ತಿದ್ದಾರೆ. ಬರುವ 3 ತಿಂಗಳಲ್ಲಿ ರಾಜ್ಯದಲ್ಲಿ ಕೊರತೆ ಇರುವ 2 ಸಾವಿರ ವೈದ್ಯರ ನೇಮಕಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ. ಕಿರಿಯ ಸಹಾಯಕಿಯರ ಸಂಬಳ ವಿತರಣೆ ವಿಷಯದಲ್ಲಿ ಇರುವ ಲೋಪ ಸರಿಪಡಿಸಲು ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದರು.
ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ, ಸೋಮನಗೌಡ ಸಾಸನೂರು, ಅರುಣ ಶಹಪೂರ ಇದ್ದರು.