ಕಲಬುರಗಿ: ಕೋವಿಡ್ 19 ಸೋಂಕಿನ ಭೀತಿಯಲ್ಲಿ ನಲುಗುತ್ತಿರುವ ಕಲಬುರಗಿ ಜಿಲ್ಲೆಯ ಜನತೆಗೆ ಅರಿವು, ಧೈರ್ಯ ತುಂಬಬೇಕಾದ ಜನ ಪ್ರತಿನಿಧಿಗಳು ಅಧಿವೇಶನದ ನೆಪದಲ್ಲಿ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಶ್ರೀ ರಾಮಸೇನೆ ರಾಜ್ಯಾಧ್ಯಕ್ಷರಾದ ಆಂದೋಲ ಸಿದ್ದಲಿಂಗ ಸ್ವಾಮೀಜಿ ಟೀಕಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್ 19 ಸೋಂಕು ಅಣುಬಾಂಬ್ ಇದ್ದಂತೆ. ಜಿಲ್ಲೆಯ ಜನ ಪ್ರತಿನಿಧಿಗಳು ಧಾವಿಸಿ ನಗರಕ್ಕೆ ಬರಬೇಕು. ಇಲ್ಲವಾದಲ್ಲಿ ಮುಂದಿನ ಅಪಾಯಕ್ಕೆ ಜನಪ್ರತಿನಿಧಿಗಳೇ ಕಾರಣ ಎಂದು ಗುಡುಗಿದರು.
ಕೊರೊನಾ ಹರಡುವಿಕೆ ನಿಯಂತ್ರಿಸಲು ಜಿಲ್ಲಾಧಿಕಾರಿ ಶರತ್ ಬಿ. ಕಟ್ಟುನಿಟ್ಟಾದ ಕ್ರಮ ತೆಗೆದುಕೊಳ್ಳುತ್ತಿದ್ದಾರೆ. ಜಿಲ್ಲಾಧಿಕಾರಿಗಳ ಕ್ರಮ ಸ್ವಾಗತಾರ್ಹವಾಗಿದೆ. ಆದರೆ, ಸೋಂಕಿನ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ ಆತಂಕಗೊಳ್ಳಬೇಡಿ ಎಂದು ಆತ್ಮಸ್ಥೈರ್ಯ ತುಂಬುವಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಮತ್ತು ಜನ ಪ್ರತಿನಿಧಿಗಳು ವಿಫಲರಾಗಿದ್ದಾರೆ ಎಂದರು.
ಜನರು ಸಂಕಷ್ಟದಲ್ಲಿ ಇದ್ದಾಗಲೂ ಜನ ಪ್ರತಿನಿಧಿಗಳು ಸಿನಿಮಾ ನಟರನ್ನು ಭೇಟಿಯಾಗಿ ಅವರ ಜೊತೆಗಿನ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿರುವುದು ನಾಚಿಕೆಗೇಡು. ಇಂತಹ ಜನ ಪ್ರತಿನಿಧಿಗಳು ಯಾಕೆ ಬೇಕು ಎಂದು ಪ್ರಶ್ನಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಜಿಲ್ಲೆಗೆ ಬರಲ್ಲ ಎಂದು ಹೇಳಿರುವುದು ನಾಗರಿಕ ಸಮಾಜ ತಲೆ ತಗ್ಗಿಸುವ ವಿಷಯ. ಒಬ್ಬ ಡಿಸಿಎಂ ಆಗಿ ಹಿಂಜರಿಕೆ ಹೇಳಿಕೆ ನೀಡಿದ್ದು ಖಂಡನೀಯವಾಗಿದೆ. ಕಾರಜೋಳ ಕಾಣೆಯಾಗಿದ್ದರೆ, ಅವರನ್ನು ಮುಖ್ಯಮಂತ್ರಿ ಯಡಿಯೂರಪ್ಪನವರು ಹುಡುಕಿ ಕೊಡಬೇಕೆಂದು ವ್ಯಂಗ್ಯವಾಡಿದರು.