Advertisement

ಕೋವಿಡ್ 19 ವೈರಸ್ ಸೋಂಕು ದ್ವಿಗುಣಗೊಳ್ಳುವ ಅವಧಿ ಇಳಿಕೆ ; ಮೊದಲು 3 ದಿನ; ಈಗ 6.2 ದಿನ

09:15 AM Apr 19, 2020 | Hari Prasad |

ನವದೆಹಲಿ: ಸಂಕಷ್ಟದ ನಡುವೆಯೂ ಭರವಸೆಯ ಆಶಾಕಿರಣ ಎಂಬಂತೆ ದೇಶದಲ್ಲಿ ಕೋವಿಡ್ 19 ವೈರಸ್ ಸೋಂಕಿತರ ಸಂಖ್ಯೆ ದ್ವಿಗುಣಗೊಳ್ಳುವ ಅವಧಿಯು ಕಳೆದೊಂದು ವಾರದಿಂದ 6.2 ದಿನಗಳಿಗೆ ಇಳಿಕೆಯಾಗಿದೆ. ಅದಕ್ಕೂ ಮೊದಲು ಅಂದರೆ ಲಾಕ್‌ ಡೌನ್‌ ಘೋಷಣೆಗೂ ಮುನ್ನ ಪ್ರತಿ 3 ದಿನಗಳಿಗೊಮ್ಮೆ ಸೋಂಕಿತರ ಸಂಖ್ಯೆ ದುಪ್ಪಟ್ಟಾಗುತ್ತಿತ್ತು ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

Advertisement

ಉಸಿರಾಟದ ಸಮಸ್ಯೆ ಹಾಗೂ ಜ್ವರದಂಥ ಲಕ್ಷಣ ಇರುವ ಜನರನ್ನೂ ಪರೀಕ್ಷೆಗೊಳಪಡಿಸಿದ್ದೂ ಈ ಬೆಳವಣಿಗೆಗೆ ಕಾರಣ. ಅಲ್ಲದೆ ಹೊಸ ಪ್ರಕರಣಗಳ ಪ್ರಮಾಣದಲ್ಲೂ ಶೇ.40ರಷ್ಟು ಇಳಿಕೆಯಾಗಿದೆ ಎಂದು ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ ಅಗರ್ವಾಲ್‌ ಮಾಹಿತಿ ನೀಡಿದ್ದಾರೆ.

ವಿಶೇಷವೆಂದರೆ, ರಾಷ್ಟ್ರೀಯ ಸರಾಸರಿಗೆ ಹೋಲಿಸಿದರೆ 19 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಸೋಂಕಿತರ ಸಂಖ್ಯೆ ದ್ವಿಗುಣಗೊಳ್ಳುವ ಅವಧಿ ಇನ್ನಷ್ಟು ಹೆಚ್ಚಿನ ದಿನಗಳಿಗೆ ಇಳಿಕೆಯಾಗಿದೆ. ಕೇರಳ, ದೆಹಲಿ, ತಮಿಳುನಾಡು, ಆಂಧ್ರಪ್ರದೇಶ, ಉತ್ತರ ಪ್ರದೇಶಗಳು ಇಂಥ ರಾಜ್ಯಗಳ ಸಾಲಿಗೆ ಸೇರಿವೆ.

ಅಲ್ಲದೆ, ದೇಶದಲ್ಲಿ ಚೇತರಿಕೆ ಕಾಣುತ್ತಿರುವ ಸೋಂಕಿತರ ಸಂಖ್ಯೆಯೂ ಸುಧಾರಿಸಿದೆ. ಗುಣಮುಖರಾದ ರೋಗಿಗಳು ಮತ್ತು ಸಾವಿನ ಸಂಖ್ಯೆಯ ಅನುಪಾತ 80:20ರಷ್ಟಿದ್ದು, ಅನೇಕ ದೇಶಗಳಿಗೆ ಹೋಲಿಸಿದರೆ ನಮ್ಮ ದೇಶದ ಸ್ಥಿತಿ ಉತ್ತಮವಾಗಿದೆ ಎಂದು ಅಗರ್ವಾಲ್‌ ಹೇಳಿದ್ದಾರೆ.

4 ವಾರಗಳಾದರೆ ಸಡಿಲಿಕೆ: ಕ್ವಾರಂಟೈನ್‌ ವಲಯದಲ್ಲಿ ಸತತ 4 ವಾರಗಳ ಕಾಲ ಯಾವುದೇ ದ್ವಿತೀಯ ಪಾಸಿಟಿವ್‌ ಪ್ರಕರಣ ಪತ್ತೆಯಾಗದೇ ಇದ್ದರೆ, ಅಂಥ ಪ್ರದೇಶದಲ್ಲಿನ ನಿರ್ಬಂಧಗಳನ್ನು ಸಡಿಲಿಸಲಾಗುತ್ತದೆ ಎಂದೂ ಅಗರ್ವಾಲ್‌ ಹೇಳಿದ್ದಾರೆ.

Advertisement

ಕೊನೆಯ ಸೋಂಕಿತ ವ್ಯಕ್ತಿಯನ್ನು ಐಸೋಲೇಟ್‌ ಮಾಡಿದ ಹಾಗೂ ಆತನೊಂದಿಗೆ ಸಂಪರ್ಕ ಹೊಂದಿದವರೆಲ್ಲರೂ 28 ದಿನಗಳ ಕಾಲ ನಿಗಾದಲ್ಲಿ ಇದ್ದ ಬಳಿಕ, 14 ದಿನಗಳು ಯಾವುದೇ ಪ್ರಕರಣ ಪತ್ತೆಯಾಗದಿದ್ದರೆ ಈ ರೀತಿಯ ಕ್ರಮ ಕೈಗೊಳ್ಳಲಾಗುತ್ತದೆ ಎಂದಿದ್ದಾರೆ.

24 ಗಂಟೆಯಲ್ಲಿ 1007 ಪ್ರಕರಣ: ಕೇವಲ 24 ಗಂಟೆಗಳ ಅವಧಿಯಲ್ಲಿ ದೇಶಾದ್ಯಂತ 23 ಮಂದಿ ಸಾವಿಗೀಡಾಗಿದ್ದು, 1,007 ಹೊಸ ಪ್ರಕರಣಗಳು ದಾಖಲಾಗಿವೆ. ಈ ಮೂಲಕ ಸೋಂಕಿತರ ಸಂಖ್ಯೆ 14 ಸಾವಿರದ ಸಮೀಪಕ್ಕೆ ಬಂದಿದ್ದರೆ, ಸಾವಿನ ಸಂಖ್ಯೆ 450 ದಾಟಿದೆ.

ಇದೇ ವೇಳೆ, ಮೇ ತಿಂಗಳ ಮೊದಲ ವಾರದಲ್ಲಿ ದೇಶದ ಸೋಂಕಿತರ ಸಂಖ್ಯೆ ಉತ್ತುಂಗಕ್ಕೇರಲಿದ್ದು, ಅದರ ನಂತರದ ದಿನಗಳಲ್ಲಿ ಈ ಸಂಖ್ಯೆ ಇಳಿಮುಖವಾಗುತ್ತಾ ಸಾಗಲಿದೆ ಎಂದು ಸರಕಾರ ಆಂತರಿಕ ಮೌಲ್ಯಮಾಪನದಿಂದ ತಿಳಿದುಬಂದಿರುವುದಾಗಿ ಮೂಲಗಳು ತಿಳಿಸಿವೆ. ಈ ಹಿನ್ನೆಲೆಯಲ್ಲಿ, ಮುಂದಿನ ವಾರವು ನಿರ್ಣಾಯಕವಾಗಲಿದೆ ಎಂದೂ ಹೇಳಲಾಗಿದೆ.

ಡಿಸ್ಚಾರ್ಜ್‌ ಎಲ್ಲಿ ಎಷ್ಟು?
ಅತಿಹೆಚ್ಚು ಸೋಂಕಿತರಿರುವ ರಾಜ್ಯ ಮಹಾರಾಷ್ಟ್ರದಲ್ಲಿ ಗುಣಮುಖರಾಗುತ್ತಿರುವವರ ಪ್ರಮಾಣವೂ ಹೆಚ್ಚಿದೆ. ಇಲ್ಲಿ 3 ಸಾವಿರಕ್ಕೂ ಹೆಚ್ಚು ಮಂದಿಗೆ ಸೋಂಕು ದೃಢವಾಗಿದೆ. 300ಕ್ಕೂ ಹೆಚ್ಚು ರೋಗಿಗಳು ಡಿಸ್ಚಾರ್ಜ್‌ ಆಗಿದ್ದಾರೆ.

ಚೇತರಿಕೆಯ ವಿಚಾರದಲ್ಲಿ ಕೇರಳಕ್ಕೆ 2ನೇ ಸ್ಥಾನ. 390ಕ್ಕೂ ಹೆಚ್ಚು ಸೋಂಕಿತರು ಅಲ್ಲಿದ್ದಾರೆ, 245 ಗುಣಮುಖರಾಗಿದ್ದಾರೆ. ತೆಲಂಗಾಣ ಮತ್ತು ತಮಿಳುನಾಡಿನಲ್ಲಿ ಕ್ರಮವಾಗಿ 186 ಮತ್ತು 180 ಮಂದಿ ಚೇತರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next