ಬೆಂಗಳೂರು: ಕೋವಿಡ್ 19 ಸೋಂಕು ಹರಡುವ ಭೀತಿ ಹಿನ್ನೆಲೆಯಲ್ಲಿ ನ್ಯಾಯಾಲಯಗಳ ಆವರಣದಲ್ಲಿ ಕಕ್ಷಿದಾರರ ಮತ್ತು ವಕೀಲರ ಸಂಖ್ಯೆ ಕಡಿಮೆ ಮಾಡುವ ಉದ್ದೇಶದಿಂದ ಹೈಕೋರ್ಟ್ ಮೂರು ಪೀಠಗಳು ಮತ್ತು ಬೆಂಗಳೂರು ನಗರದ ಎಲ್ಲಾ ನ್ಯಾಯಾಲಯಗಳ ಕೆಲಸದ ಅವಧಿಯನ್ನು ಕಡಿತಗೊಳಿಸಲಾಗಿದೆ.
ಹೈಕೋರ್ಟ್‌ನ ಬೆಂಗಳೂರು ಪ್ರಧಾನ ಪೀಠ, ಕಲಬುರಗಿ ಮತ್ತು ಧಾರವಾಡ ಪೀಠಗಳು ಮಾರ್ಚ್ 23ರಿಂದ ಬೆಳಗ್ಗೆ 10.30ರಿಂದ ಮಧ್ಯಾಹ್ನ 1.30ರವರೆಗೆ ಮಾತ್ರ ಕಲಾಪ ನಡೆಸಲಿದೆ. ವಿಶೇಷ ಪ್ರಕರಣಗಳಲ್ಲಿ ಮಾತ್ರ ಕಾಲಾಪ ಅವಧಿಯನ್ನು1.30ರ ನಂತರ ಮುಂದುವರಿಸಲಾಗುತ್ತದೆ.
ಇನ್ನೂ ಬೆಂಗಳೂರು ನಗರದಲ್ಲಿರುವ ಸಿಟಿ ಸಿವಿಲ್, ಮ್ಯಾಜಿಸ್ಟ್ರೇಟ್ ಕೋರ್ಟ್‌ಗಳು ಮಾರ್ಚ್ 21ರಿಂದ (ಶನಿವಾರ)ಬೆಳಗ್ಗೆ 11ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಕಲಾಪ ನಡೆಸಲಿವೆ. ಫೈಲಿಂಗ್ ಹಾಗೂ ಇತರೆ ಕೌಂಟರ್‌ಗಳು 11ರಿಂದ 2.30ರವರೆಗೆ ತೆರೆದಿರುತ್ತದೆ. ಮಧ್ಯಾಹ್ನ 3ರ ನಂತರ ನ್ಯಾಯಾಲಯಗಳು ಮುಚ್ಚಲ್ಪಡುತ್ತವೆ. 3 ಗಂಟೆಯ ನಂತರ ಈ ಕೊರ್ಟ್‌ಗಳಿಗೆ ಪ್ರವೇಶ ಮಾಡುವುದರಿಂದ ವಕೀಲರು ಹಾಗೂ ಕಕ್ಷಿದಾರರಿಗೆ ನಿರ್ಬಂಧ ಹೇರಲಾಗಿದೆ.
ಬೆಂಗಳೂರು ನಗರ, ಕಲಬುರಗಿ ಮತ್ತುಕೊಡಗು-ಮಡಿಕೇರಿ ಜಿಲ್ಲೆಯಲ್ಲಿನ ಎಲ್ಲಾ ನ್ಯಾಯಾಲಯಗಳು ಕೇವಲ ತುರ್ತು ಪ್ರಕರಣಗಳು ಮತ್ತು ಜಾಮೀನು ಅರ್ಜಿಗಳನ್ನು ಮಾತ್ರ ವಿಚಾರಣೆ ನಡೆಸಲಿದೆ.
ಉಳಿದ ಪ್ರಕರಣಗಳು ವಕೀಲರು, ಕಕ್ಷಿದಾರರು, ಆರೋಪಿಗಳು ಮನವಿ ಮಾಡದ ಹೊರತಾಗಿಯೂ ಮುಂದೂಡಲಾಗುತ್ತದೆ. ಸಾಕ್ಷಿಗಳ ಹೇಳಿಕೆ ದಾಖಲು ಮತ್ತು ಅಂತಿಮ ವಿಚಾರಣೆ ತತ್ಕಾಲಿಕವಾಗಿ ಮುಂದೂಡಲಾಗುತ್ತದೆ. ಕಕ್ಷಿದಾರರು ಹಾಗೂ ಸಂದರ್ಶಕರಿಗೆ ಕೊರ್ಟ್‌ಗಳ ಪ್ರವೇಶ ಮಾಡುವುದಕ್ಕೆ ನಿರ್ಬಂಧ ಹೇರಲಾಗಿದೆ.
ಹೈಕೋರ್ಟ್‌ನ ಮೂರು ನ್ಯಾಯಪೀಠಗಳು, ಬೆಂಗಳೂರು ನಗರ, ಕಲಬುರಗಿ ಮತ್ತು ಕೊಡಗು-ಮಡಿಕೇರಿ ಜಿಲ್ಲೆಯಲ್ಲಿರುವ ಕೋರ್ಟ್‌ಗಳ ಆವರಣಗಳಿಗೆ ಕಕ್ಷಿದಾರರು ಪ್ರವೇಶ ಮಾಡಬೇಕೆಂದರೆ ವಕೀಲರ ಸರ್ಟಿಫಿಕೇಟ್ ತರಬೇಕು. ಇಲ್ಲವಾದರೆ, ಕಕ್ಷಿದಾರರಿಗೆ ಪ್ರವೇಶಾವಕಾಶ ನಿರಾಕರಿಸಲಾಗುತ್ತದೆ. ತಮ್ಮ ಪ್ರಕರಣದ ವಿವರ ಹಾಗೂ ದಾಖಲೆಗಳನ್ನು ಒದಗಿಸಿ ಲಿಖೀತ ಮನವಿ ಸಲ್ಲಿಸುವ ಪಾರ್ಟಿ ಇನ್ ಪರ್ಸನ್‌ಗಳಿಗೆ ನ್ಯಾಯಾಲಯಗಳ ಒಳಗೆ ಪ್ರವೇಶಿಸಲು ಅನುಮತಿ ನೀಡಲಾಗುತ್ತದೆ ಎಂದು ರಿಜಿಸ್ಟ್ರಾರ್ ಜನರಲ್ ಪ್ರತ್ಯೇಕ ನೋಟಿಫಿಕೇಷನ್ ಹೊರಡಿಸಿದ್ದಾರೆ.