Advertisement
ಇಷ್ಟೊಂದು ಸಂಖ್ಯೆಯ ಸಾವುಗಳು ನಿಜಕ್ಕೂ ಆತಂಕ ಹಾಗೂ ಬೇಸರ ಹುಟ್ಟಿಸುವ ಸಂಗತಿಯೇ ಹೌದು.
Related Articles
Advertisement
ಆದಾಗ್ಯೂ, ಈಗ ಪ್ರತಿದಿನ 1 ಲಕ್ಷಕ್ಕೂ ಅಧಿಕ ಟೆಸ್ಟಿಂಗ್‌ಗಳನ್ನು ನಡೆಸಲಾಗುತ್ತಿದೆಯಾದರೂ, ಇದು ಎಲ್ಲಾ ರಾಜ್ಯಗಳಲ್ಲೂ ಸಮನಾಗಿಲ್ಲ ಎನ್ನುವುದೇ ಆತಂಕದ ವಿಷಯ. ಅದರಲ್ಲೂ ರಾಜಧಾನಿ ದೆಹಲಿಯಲ್ಲಿ ಹಾಗೂ ವಾಣಿಜ್ಯ ನಗರಿ ಮುಂಬಯಿಯಲ್ಲಿ ಹಠಾತ್ತನೆ ಪರೀಕ್ಷೆಗಳ ಪ್ರಮಾಣ ಕಡಿಮೆಯಾಗಿದ್ದು ಟೀಕೆಗೆ ಒಳಗಾಗುತ್ತಿದೆ.
ಆದರೆ, ಪರೀಕ್ಷೆಗಳ ಸಂಖ್ಯೆಯನ್ನು ಹೆಚ್ಚಿಸುವುದೊಂದೇ ಮರಣ ಪ್ರಮಾಣದ ತಡೆಗೆ ಪರಿಣಾಮಕಾರಿ ಮಾರ್ಗ ಆಗಲಾರದು. ಹೆಚ್ಚಿನ ಸಂಖ್ಯೆಯಲ್ಲಿ ಜೀವಗಳು ಉಳಿಯಬೇಕು ಎಂದರೆ, ರೋಗಾವಸ್ಥೆಯು ಉಲ್ಬಣಿಸುವ ಮುನ್ನವೇ ರೋಗಿಯು ಪರೀಕ್ಷೆಗೊಳಪಟ್ಟು, ಆಸ್ಪತ್ರೆ ತಲುಪುವುದು ಮುಖ್ಯವಾಗುತ್ತದೆ. ಈಗಲೂ ಅನೇಕರು ರೋಗ ಲಕ್ಷಣಗಳು ತೀವ್ರವಾದ ನಂತರವೇ ಟೆಸ್ಟಿಂಗ್‌ಗೆ ಮುಂದಾಗುತ್ತಿದ್ದಾರೆ.
ಎಲ್ಲಕ್ಕಿಂತ ಆತಂಕ ಹುಟ್ಟಿಸುತ್ತಿರುವ ಸಂಗತಿಯೆಂದರೆ, ರೋಗದ ಅಪಾಯದ ಬಗ್ಗೆ ಈಗ ಜನರಲ್ಲಿ ಭಯವೇ ದೂರವಾಗಿಬಿಟ್ಟಿದೆಯೇನೋ ಎಂಬಂಥ ಚಿತ್ರಣಗಳು ಕಂಡುಬರುತ್ತಿರುವುದು. ಲಾಕ್ ಡೌನ್ ನಿಯಮಗಳು ಸಡಿಲವಾಗಿ, ಆರ್ಥಿಕ ಚಕ್ರ ಆರಂಭವಾಗುವುದು ದೇಶದ ವಿತ್ತ ಹಿತದೃಷ್ಟಿಯಿಂದ ಅಗತ್ಯ ಕ್ರಮವಾಗಿತ್ತು.
ಆದರೆ, ನಿರ್ಬಂಧಗಳು ಸಡಿಲವಾಗಿವೆ ಎಂದರೆ ಎಲ್ಲವೂ ಸಹಜ ಸ್ಥಿತಿಗೆ ಬಂದಿದೆ ಎಂದೇನೂ ಅರ್ಥವಲ್ಲ. ಸತ್ಯವೇನೆಂದರೆ, ಈಗ ದೇಶದಲ್ಲಿ ಸೋಂಕು ವೇಗವಾಗಿ ಹರಡುತ್ತಿದೆ. ಈಗ ಮಾಡುವ ನಿಷ್ಕಾಳಜಿಯು ಖಂಡಿತ ಮುಂದೆ ಬೆಲೆ ತೆರುವಂತೆ ಮಾಡಲಿದೆ.
ಈ ಕಾರಣಕ್ಕಾಗಿಯೇ ಅಪಾಯವನ್ನು ಕಡೆಗಣಿಸದೇ, ಸಾಮಾಜಿಕ ಅಂತರದ ನಿಯಮಗಳನ್ನು, ಸ್ವಚ್ಛತೆಯನ್ನು ಪಾಲಿಸಲೇಬೇಕು. ಏಪ್ರಿಲ್ – ಮೇ ಅವಧಿಯಲ್ಲಿ ಗಂಟೆಗೊಮ್ಮೆಯಾದರೂ ಕೈತೊಳೆಯುತ್ತಿದ್ದ ಭಾರತೀಯರು ಈಗ ಹೊರಗೆ ಅಡ್ಡಾಡಿ ಬಂದರೂ ಈ ನಿಯಮವನ್ನು ಸರಿಯಾಗಿ ಪಾಲಿಸುತ್ತಿಲ್ಲ ಎನ್ನುತ್ತದೆ ಪ್ಯಾಂಡೆಮಿಕ್ ರಿಸರ್ಚ್ ಸೊಸೈಟಿಯ ಅಧ್ಯಯನ ವರದಿ. ನೆನಪಿರಲಿ, ಕೋವಿಡ್ ವಿರುದ್ಧದ ಹೋರಾಟ ಈಗ ನಿರ್ಣಾಯಕ ಹಂತ ತಲುಪಲಿದೆ. ಭಾರತೀಯರೆಲ್ಲ ಎಚ್ಚರಿಕೆಯಿಂದಿರಲೇ ಬೇಕಾದ ಸಮಯವಿದು.