ನವದೆಹಲಿ:ಜಗತ್ತನ್ನೇ ಬೆಚ್ಚಿಬೀಳಿಸಿದ್ದ ಕೋವಿಡ್ ಸೋಂಕಿಗೆ ಸಂಬಂಧಿಸಿದಂತೆ ದೇಶೀಯವಾಗಿ ವರ್ಷದೊಳಗೆ ಲಸಿಕೆ ತಯಾರಿಸಿರುವ ಭಾರತ ಜನವರಿ (2021) 16ರಿಂದ ದೇಶಾದ್ಯಂತ ಲಸಿಕೆ ನೀಡುವ ಕಾರ್ಯಕ್ರಮ ಆರಂಭವಾಗಲಿದೆ ಎಂದು ಕೇಂದ್ರ ಸರ್ಕಾರ ಶನಿವಾರ(ಜನವರಿ 09, 2021) ತಿಳಿಸಿದೆ.
ದೇಶದಲ್ಲಿ ಜನವರಿ 16ರಿಂದ ಆರಂಭವಾಗಲಿರುವ ಲಸಿಕೆ ನೀಡಿಕೆ ಯೋಜನೆಯಲ್ಲಿ ಮೊದಲಿಗೆ ಆರೋಗ್ಯ ಸೇವೆ ನೀಡುವ ಸಿಬ್ಬಂದಿಗಳಿಗೆ, ಆಶಾ ಕಾರ್ಯಕರ್ತೆಯರಿಗೆ ನೀಡಲಿದ್ದು, ಅಂದಾಜು 3 ಕೋಟಿ ಜನರು ಇದ್ದಿರುವುದಾಗಿ ತಿಳಿಸಿದೆ. ನಂತರ 50 ವರ್ಷ ಮೀರಿದ ಹಾಗೂ 50ವರ್ಷದೊಳಗಿನ ವ್ಯಕ್ತಿಗಳಿಗೆ ಕೋವಿಡ್ ಲಸಿಕೆ ನೀಡಲಾಗುವುದು. ಇವರ ಸಂಖ್ಯೆ 27 ಕೋಟಿ ಎಂದು ತಿಳಿಸಿದೆ.
ಭಾರತ ಸರ್ಕಾರ ಬಿಡುಗಡೆ ಮಾಡಿರುವ ಪತ್ರಿಕಾ ಪ್ರಕಟಣೆ ಪ್ರಕಾರ, ಇಂದು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಕೋವಿಡ್ 19 ಲಸಿಕೆ ಕುರಿತ ಉನ್ನತದ ಮಟ್ಟದ ಪುನರ್ ಪರಿಶೀಲನಾ ಸಭೆ ನಡೆದಿತ್ತು. ಸಭೆಯಲ್ಲಿ ಕ್ಯಾಬಿನೆಟ್ ಕಾರ್ಯದರ್ಶಿ, ಪ್ರಧಾನಿ ಕಾರ್ಯಾಲಯದ ಮುಖ್ಯಕಾರ್ಯದರ್ಶಿ, ಆರೋಗ್ಯ ಕಾರ್ಯದರ್ಶಿ ಹಾಗೂ ಇತರ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.
ಇದನ್ನೂ ಓದಿ:2ಲಕ್ಷ ರೂ. ಮೌಲ್ಯದ ಚಿನ್ನಾಭರಣ ಖರೀದಿಗೆ ಆಧಾರ್ ಬೇಕಿಲ್ಲ;ವಿತ್ತ ಇಲಾಖೆ ಸ್ಪಷ್ಟನೆಯಲ್ಲೇನಿದೆ?
2021ರ ಜನವರಿಯಲ್ಲಿ ಸಾಲು, ಸಾಲಾಗಿ ಹಬ್ಬಗಳು(ಮಕರ ಸಂಕ್ರಾಂತಿ, ಪೊಂಗಲ್, ಲೋಹ್ರಿ) ನಡೆಯಲಿರುವ ಹಿನ್ನಲೆಯಲ್ಲಿ ಜನವರಿ 16ರಿಂದ ಕೋವಿಡ್ 19 ಲಸಿಕೆ ನೀಡಲು ಆರಂಭಿಸುವ ಕುರಿತು ನಿರ್ಧಾರ ತೆಗೆದುಕೊಳ್ಳಲಾಯಿತು ಎಂದು ವರದಿ ತಿಳಿಸಿದೆ.