ವಾಷಿಂಗ್ಟನ್/ಇಸ್ಲಾಮಾಬಾದ್: ಕೋವಿಡ್ 19 ವೈರಸ್ ಅಟ್ಟಹಾಸದ ನಡುವೆ ಜನ ಜೀವನದ ಮೇಲೆ ಪರಿಣಾಮ ಬೀರಿದ್ದರೆ, ಮತ್ತೊಂದೆಡೆ ಪಾಕಿಸ್ತಾನದಲ್ಲಿ ಹಿಂದೂಗಳು ಮತ್ತು ಕ್ರಿಶ್ಚಿಯನ್ ಸಮುದಾಯಕ್ಕೆ ಆಹಾರ ನೀಡಲು ನಿರಾಕರಿಸುತ್ತಿರುವ ವರದಿ ಬಂದಿರುದಾಗಿ ಅಮೆರಿಕದ ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯದ ಆಯೋಗ ತಿಳಿಸಿದ್ದು, ಇದು ಪಾಕಿಸ್ತಾನಕ್ಕೆ ತೀವ್ರ ಹಿನ್ನಡೆ ಅನುಭವಿಸುವಂತೆ ಮಾಡಿರುವುದಾಗಿ ವರದಿ ತಿಳಿಸಿದೆ.
ಅಮೆರಿಕದ (ಯುಎಸ್ ಸಿಐಆರ್ ಎಫ್) ಧಾರ್ಮಿಕ ಸ್ವಾತಂತ್ರ್ಯ ಆಯೋಗದ ಕಮಿಷನರ್ ಅನುರಿಮಾ ಭಾರ್ಗವ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಕೋವಿಡ್ 19 ಸೋಂಕು ಹರುಡುವುದು ಜಾಗತಿಕವಾಗಿ ಮುಂದುವರಿದಿದೆ. ಪಾಕಿಸ್ತಾನದಲ್ಲಿಯೂ ಕೋವಿಡ್ ಅಟ್ಟಹಾಸಕ್ಕೆ ಜನರು ನಲುಗಿದ್ದು ಹಸಿವಿನ ಜತೆಯೂ ಹೋರಾಡುವಂತಾಗಿದೆ.
ಅಲ್ಲದೇ ತಮ್ಮ ಕುಟುಂಬವನ್ನು ಸುರಕ್ಷಿತ ಹಾಗೂ ಆರೋಗ್ಯವಾಗಿ ಇಟ್ಟುಕೊಳ್ಳಲು ಊಟೋಪಚಾರವನ್ನು ಧಾರ್ಮಿಕ ನಂಬಿಕೆ ಮೇಲೆ ನಿರಾಕರಿಸಬಾರದು. ಈ ನಿಟ್ಟಿನಲ್ಲಿ ನಾವು ಪಾಕಿಸ್ತಾನ ಸರ್ಕಾರಕ್ಕೆ ಆಗ್ರಹಿಸುತ್ತಿದ್ದೇವೆ, ಆಹಾರವನ್ನು ಹಿಂದೂ, ಕ್ರಿಶ್ಚಿಯನ್ ಹಾಗೂ ಇತರ ಅಲ್ಪಸಂಖ್ಯಾತ ಸಮುದಾಯಕ್ಕೂ ಹಂಚಬೇಕು ಎಂದು ತಿಳಿಸಿದೆ.
ಕೆಲವು ಮಾಧ್ಯಮ ವರದಿ ಪ್ರಕಾರ, ಕರಾಚಿ ಮೂಲದ ಸರ್ಕಾರೇತರ ಸಂಸ್ಥೆಯಾದ ಸಾಯ್ ಲಾನಿ ವೆಲ್ ಫೇರ್ ಇಂಟರ್ ನ್ಯಾಶನಲ್ ಟ್ರಸ್ಟ್, ಕೋವಿಡ್ 19 ವೈರಸ್ ಬಿಕ್ಕಟ್ಟಿನ ಹಿನ್ನಲೆಯಲ್ಲಿ ವಸತಿ ರಹಿತರಿಗೆ ಹಾಗೂ ಕಾರ್ಮಿಕರಿಗೆ ನೆರವು ನೀಡುತ್ತಿದೆ. ಆದರೆ ಹಿಂದೂ ಮತ್ತು ಕ್ರಿಶ್ಚಿಯನ್ ಸಮುದಾಯಕ್ಕೆ ಆಹಾರದ ನೆರವು ನೀಡಿಲ್ಲ ಎಂದು ಆರೋಪಿಸಿದೆ.
ಯುಎಸ್ ಸಿಐಆರ್ ಎಫ್ ಕಮಿಷನರ್ ಜಾನ್ನಿ ಮೂರ್ರೆ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಇತ್ತೀಚೆಗೆ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅಂತಾರಾಷ್ಟ್ರೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದ ವೇಳೆ, ಕೋವಿಡ್ 19 ವೈರಸ್ ನಿಂದಾಗಿ ಜಗತ್ತಿನ ಅಭಿವೃದ್ದಿಶೀಲ ರಾಷ್ಟ್ರಗಳು ಹಸಿವಿನಿಂದ ಸಾಯುವ ಜನರನ್ನು ರಕ್ಷಿಸಿಕೊಳ್ಳಲು ಪ್ರಯತ್ನಿಸುವ ಜವಾಬ್ದಾರಿ ಇದೆ. ಇದು ಹಲವಾರು ದೇಶಗಳಿಗೆ ಎದುರಾಗುವ ಸಮಸ್ಯೆಯಾಗಿದೆ ಎಂದು ತಿಳಿಸಿದ್ದರು.
ಪ್ರಧಾನಿ ಖಾನ್ ನೇತೃತ್ವದ ಸರ್ಕಾರ ಈ ಸಮಯವನ್ನು ಸಮರ್ಥವಾಗಿ ಎದುರಿಸಬೇಕಾಗಿದೆ. ಆದರೆ ಆಹಾರದ ನೆರವಿನ ಹಿಂದೆ ಅಲ್ಪಸಂಖ್ಯಾತ ಧಾರ್ಮಿಕ ಭಾವನೆ ಇರಬಾರದು. ಇಲ್ಲದಿದ್ದರೆ ಇದರಿಂದ ಮತ್ತೊಂದು ದೊಡ್ಡ ಬಿಕ್ಕಟ್ಟು ಎದುರಾಗಲಿದೆ. ಇದು ಧಾರ್ಮಿಕ ತಾರತಮ್ಯ ಮತ್ತು ಅಂತರ ಧರ್ಮಿಯ ಬಿಕ್ಕಟ್ಟಿಗೆ ಕಾರಣವಾಗಲಿದೆ ಎಂದು ಎಚ್ಚರಿಸಿದೆ.