Advertisement

ಹಣ್ಣು ಬೆಳೆಗಾರರಿಗೆ ಹುಣ್ಣಾಯ್ತು ಕೋವಿಡ್ 19

05:48 PM Mar 31, 2020 | Suhan S |

ಗದಗ: ಬಯಲು ಸೀಮೆ ಗದಗ ಜಿಲ್ಲೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ತೋಟಗಾರಿಕೆ ಬೆಳೆಗಳನ್ನು ಹೆಚ್ಚು ಬೆಳೆಯಲಾಗುತ್ತಿದೆ. ಇಲ್ಲಿ ಬೆಳೆಯುವ ವಿವಿಧ ಹಣ್ಣುಗಳು ಅಂತಾರಾಷ್ಟ್ರೀಯ ಗುಣಮಟ್ಟ ಹೊಂದಿವೆ. ಆದರೆ ಇತ್ತೀಚೆಗೆ ಆವರಿಸಿರುವ ಕೋವಿಡ್ 19 ವೈರಸ್‌ ಕಾರ್ಮೋಡದಿಂದ ಸರಕು ಸಾಗಾಟ ಸ್ಥಗಿತಗೊಂಡ ಕಾರಣ ಜಿಲ್ಲೆಯ ತೋಗಾರಿಕಾ ಬೆಳೆಗಾರರು ಕಣ್ಣೀರಿಡುವಂತಾಗಿದೆ.

Advertisement

ಜಿಲ್ಲೆ ಬಹುತೇಕ ಮಳೆ ಆಶ್ರಿತ ಪ್ರದೇಶವಾಗಿದ್ದರೂ ತುಂಗಭದ್ರಾ ನದಿ, ಸಿಂಗಟಾಲೂರು ಏತ ನೀರಾವರಿ ಯೋಜನೆ ಹಾಗೂ ಕೊಳವೆಬಾವಿಯ ನೀರನ್ನು ಅವಲಂಬಿಸಿ ವಿವಿಧೆಡೆ ಹಣ್ಣು ಬೆಳೆಯಲಾಗುತ್ತಿದೆ. ಜಿಲ್ಲೆಯಲ್ಲಿ ಮಾವು, ಕಲ್ಲಂಗಡಿ, ಪೇರಲ, ದಾಳಿಂಬೆ, ದ್ರಾಕ್ಷಿ ಹಾಗೂ ಚಿಕ್ಕು ಬೆಳೆಯಲಾಗುತ್ತಿದೆ. ಕಲ್ಲಂಗಡಿಯನ್ನು ಜಿಲ್ಲೆಯ ರೋಣ ತಾಲೂಕಿನ ಬೆಣ್ಣೆಹಳ್ಳದುದ್ದಕ್ಕೆ ಹೆಚ್ಚು ಬೆಳೆಯಲಾಗುತ್ತದೆ. ಆ ಪೈಕಿ ಗದಗ ತಾಲೂಕಿನ ಹುಲಕೋಟಿ ಭಾಗದಲ್ಲಿ ಬೆಳೆಯಲಾಗುವ ವಿವಿಧ ತಳಿಯ ಮಾವು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೇಡಿಕೆ ಹೊಂದಿದೆ. ಹೀಗಾಗಿ ಪ್ರತಿ ವರ್ಷ ಕೈತುಂಬ ಆದಾಯ ಪಡೆಯುತ್ತಿದ್ದ ಇಲ್ಲಿನ ರೈತರನ್ನು ಕೋವಿಡ್ 19  ಕಂಗಾಲಾಗಿಸಿದೆ.

ಬೇಡಿಕೆ ಕುಸಿತ: ಜಿಲ್ಲೆಯಲ್ಲಿ ಬೆಳೆಯಲಾಗುವ ಮಾವು, ಚಿಕ್ಕು, ದಾಳಿಂಬೆ ಹಣ್ಣುಗಳು ದುಬೈ, ಅಮೆರಿಕ, ಸಿಂಗಾಪುರ, ಶ್ರೀಲಂಕಾ, ಮಲೇಷಿಯಾಕ್ಕೆ ರಫ್ತಾಗುತ್ತವೆ. ಜಿಲ್ಲೆಯ ಬೆಳೆಗಳನ್ನು ಮುಂಬೈ ಮಾರುಕಟ್ಟೆ ಮೂಲಕ ವಿದೇಶಕ್ಕೆ ರಫ್ತು ಮಾಡಲಾಗುತ್ತದೆ. ಆದರೆ ಮಹಾಮಾರಿ ಕೊರೊನಾ ಸೃಷ್ಟಿಸಿರುವ ಆತಂಕದಿಂದ ವಿದೇಶಕ್ಕೆ ಹಣ್ಣುಗಳ ರಫ್ತು ಸ್ಥಗಿತಗೊಂಡಿವೆ. ಲಾಕ್‌ಡೌನ್‌ನಿಂದ ಸ್ಥಳೀಯ ಮಾರುಕಟ್ಟೆಯೂ ಬಾಗಿಲು ಮುಚ್ಚಿದ್ದರಿಂದ ಹಣ್ಣು ಬೆಳೆಗಾರರು ಲಕ್ಷಾಂತರ ರೂ. ನಷ್ಟ ಅನುಭವಿಸುವಂತಾಗಿದೆ.

ಕಾರ್ಮಿಕರು ಸಿಗದೇ ಕೊಳೆಯುತ್ತಿವೆ: ಒಂದೆಡೆ ಹಣ್ಣಿನ ಉತ್ಪನ್ನಗಳು ಅಗತ್ಯ ವಸ್ತುಗಳ ಪಟ್ಟಿಯಲ್ಲಿ ಬರುತ್ತವೆ. ಮತ್ತೂಂದೆಡೆಗೆ ಹಣ್ಣು, ತರಕಾರಿ ವಾಹನಗಳ ಸಾಗಾಟಕ್ಕೆ ಯಾವುದೇ ನಿರ್ಬಂಧವಿಲ್ಲ ಎನ್ನಲಾಗುತ್ತದೆ. ಆದರೆ ವಿವಿಧೆಡೆ ಕೊರೊನಾ ಸೋಂಕಿನ ಭೀತಿಯಿಂದಾಗಿ ತೋಟಗಳಲ್ಲಿ ಕೆಲಸಕ್ಕೆ ಕಾರ್ಮಿಕರೇ ಸಿಗುತ್ತಿಲ್ಲ. ಜೊತೆಗೆ ಜಿಲ್ಲಾವಾರು ಚೆಕ್‌ ಪೋಸ್ಟ್‌ಗಳಲ್ಲಿ ಎದುರಾಗುವ ಕಿರಿಕಿರಿಯಿಂದಾಗಿ ಹಣ್ಣುಗಳನ್ನು ಸಾಗಿಸಲು ಸರಕು ಸಾಗಾಣಿಕೆ ವಾಹನಗಳ ಮಾಲೀಕರು, ಚಾಲಕರೂ ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ವರ್ತಕರೂ ಹೊರತಾಗಿಲ್ಲ. ಆದರೆ ವರ್ಷವಿಡೀ ಬೆಳೆ ಕಾದು, ಆದಾಯ ನೀಡುವ ಸಮಯದಲ್ಲೇ ಕೋವಿಡ್ 19  ಭೀತಿ ಆವರಿಸಿದ್ದರಿಂದ ಹಣ್ಣಿನ ಬೆಳೆಗಳು ಬೇಡಿಕೆ ಕಳೆದುಕೊಂಡಿವೆ. ಬೆಳೆಗಾಗಿ ಮಾಡಿದ ಸಾಲ ತೀರಿಸುವುದು ಹೇಗೆ ಎಂಬುದು ರೈತರ ಅಳಲು.

ಜಿಲ್ಲೆಯಲ್ಲಿ ತೋಟಗಾರಿಕೆ ಬೆಳೆಗಳು ಬೇಡಿಕೆ ಇಲ್ಲದೇ, ನೆಲಕ್ಕಚ್ಚಿವೆ. ರೈತರನ್ನು ಸಂಕಷ್ಟದಿಂದ ಪಾರು ಮಾಡಲು ಸರಕಾರ ಮುಂದಾಗಬೇಕು. ಹಾಪ್‌ಕಾಮ್ಸ್‌ ಅಥವಾ ತೋಗಾರಿಕೆ ಇಲಾಖೆ ಮೂಲಕವೇ ಬೆಂಬಲ ಬೆಲೆ ಮಾದರಿಯಲ್ಲಿ ಹಣ್ಣಿನ ಉತ್ಪನ್ನಗಳನ್ನು ಖರೀದಿಸಬೇಕು. ಇದರಿಂದ ಮಧ್ಯ ವರ್ತಿಗಳ ಹಾವಳಿ ತಪ್ಪಿ, ರೈತರು, ಗ್ರಾಹಕರೊಂದಿಗೆ ಸರಕಾರಕ್ಕೂ ನೆರವಾಗುತ್ತದೆ.-ಕರಿಯಪ್ಪ ರವಳ್ಳೋಜಿ, ಹುಲಕೋಟಿ ರೈತ

Advertisement

ಹಣ್ಣು ಬೆಳೆಗಾರರ ಸಮಸ್ಯೆಯನ್ನು ಇಲಾಖೆ ಕಾರ್ಯದರ್ಶಿಗಳ ಗಮನಕ್ಕೆ ತಂದಿದ್ದೇವೆ. ಈ ಬಗ್ಗೆ ಅವರೂ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಶೀಘ್ರವೇ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುವುದು. -ಶಶಿಕಾಂತ ಕೋಟಿಮನಿ, ಉಪನಿರ್ದೇಶಕ, ತೋಟಗಾರಿಕೆ ಇಲಾಖೆ

 

-ವೀರೇಂದ್ರ ನಾಗಲದಿನ್ನಿ

Advertisement

Udayavani is now on Telegram. Click here to join our channel and stay updated with the latest news.

Next