Advertisement

ಬಿಡಿಎ ಖಾಲಿ ಅಪಾರ್ಟ್‌ಮೆಂಟ್‌ಗಳಲ್ಲಿ ಕೋವಿಡ್‌ 19 ಚಿಕಿತ್ಸೆ?

06:11 AM Jun 30, 2020 | Lakshmi GovindaRaj |

ಬೆಂಗಳೂರು: ಕೋವಿಡ್‌ 19 ಸೋಂಕಿತರು ಹೆಚ್ಚಳದಿಂದ ಬೆಡ್‌ಗಳ ಕೊರತೆ ಎದುರಾಗಿದ್ದು, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಖಾಲಿ ಅಪಾರ್ಟ್‌ಮೆಂಟ್‌ಗಳನ್ನು ಬಳಸಿಕೊಳ್ಳಲು ಪಾಲಿಕೆ ಚಿಂತನೆ ನಡೆಸಿದೆ. ನಗರದಲ್ಲಿ ಕೋವಿಡ್‌ 19  ಅಟ್ಟಹಾಸ ಮೆರೆಯುತ್ತಿದ್ದು, ವಿಕ್ಟೋರಿಯಾ, ರಾಜೀವ್‌ಗಾಂಧಿ ಆಸ್ಪತ್ರೆಗಳು ಭರ್ತಿಯಾಗಿವೆ.

Advertisement

ಹಜ್‌ ಭವನದಲ್ಲಿ 500 ಬೆಡ್‌ ವ್ಯವಸ್ಥೆ ಮಾಡಿದ್ದು, ಈಗಾಗಲೇ ಅರ್ಧದಷ್ಟು ಸೋಂಕಿತರನ್ನು ರವಾನಿಸಲಾಗಿದೆ. ಉಳಿದಂತೆ ಕೋರಮಂಗಲ  ಕ್ರೀಡಾಂಗಣದಲ್ಲಿ ಸಾವಿರ ಬೆಡ್‌ಗಳ ವ್ಯವಸ್ಥೆ ಕೈಗೊಳ್ಳಲಾಗಿದ್ದು, ಕಳೆದ 2ದಿನಗಳ ಸೋಂಕಿತರ ಸಂಖ್ಯೆ ಗಮನಿಸಿದರೆ ಶೀಘ್ರ ಇದು ಕೂಡ ಭರ್ತಿಯಾಗಲಿದೆ. ಉಳಿದಂತೆ ಖಾಸಗಿ ಆಸ್ಪತ್ರೆಗಳಲ್ಲಿ ಬೆಡ್‌ಗಳ ವ್ಯವಸ್ಥೆ ಕೈಗೊಂಡಿದ್ದು, ಅದನ್ನು  ಮೀರಿ ಸೋಂಕಿತರ ಸಂಖ್ಯೆ ಹೆಚ್ಚಾದರೆ, ಬೆಡ್‌ಗಳ ಕೊರತೆ ಕಂಡುಬಂದರೆ ಜನವಸತಿ ಇಲ್ಲದ ಬಿಡಿಎ ಖಾಲಿ ಅಪಾರ್ಟ್‌ಮೆಂಟ್‌ಗಳನ್ನು ಬಳಸಿಕೊಳ್ಳುವ ಚಿಂತನೆ ನಡೆದಿದೆ.

ಬಿಡಿಎ ಅಧಿಕಾರಿಗಳು ಹೇಳುವಂತೆ 1,900ಕ್ಕೂ ಅಧಿಕ ಫ್ಲ್ಯಾಟ್‌ಗಳು ಖಾಲಿ ಇದ್ದು, ಇನ್ನು ಕೆಲವೆಡೆ ಇಡೀ ಅಪಾರ್ಟ್‌ ಮೆಂಟ್‌ ಖಾಲಿ ಇವೆ. ಕೋವಿಡ್‌ 19 ಸೋಂಕಿತರ ಸಂಖ್ಯೆ ಇದೇ ರೀತಿ ಹೆಚ್ಚಳವಾದರೆ, ಅಪಾರ್ಟ್‌ಮೆಂಟ್‌ಗಳಲ್ಲಿ ಸ್ಯಾನಿಟೈಸ್‌ ಸಿಂಪಡಣೆ ಮಾಡಿ, ಮೂಲಸೌಕರ್ಯ ಕಲ್ಪಿಸಿ  ಸೋಂಕಿತರ ಚಿಕಿತ್ಸೆಗೆ ಅವಕಾಶ ಮಾಡಿಕೊಡಲಾಗುತ್ತದೆ.

ಹೊಸದಾಗಿ 6 ಕೋವಿಡ್‌ ಆರೈಕೆ ಕೇಂದ್ರ
ಬೆಂಗಳೂರು: ನಗರದಲ್ಲಿ ಕೋವಿಡ್‌ 19  ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮತ್ತಷ್ಟು ಕೋವಿಡ್‌ ಆರೈಕೆ ಕೇಂದ್ರ ತೆರೆಯಲು ಪಾಲಿಕೆ ಮುಂದಾಗಿದೆ. ಕೋವಿಡ್‌ 19 ಸೋಂಕಿನ ಲಕ್ಷಣ ಇಲ್ಲದ ಸೋಂಕಿತರ ಚಿಕಿತ್ಸೆಗೆ  ಈ  ಆರೈಕೆ ಕೇಂದ್ರ ಬಳಸಿಕೊಳ್ಳಲು ನಿರ್ಧರಿಸಲಾಗಿದ್ದು, ನಗರದಲ್ಲಿ ಸೋಮವಾರ ಹೊಸದಾಗಿ 6 ಕೋವಿಡ್‌ ಆರೈಕೆ ಕೇಂದ್ರಗಳನ್ನು ಬಿಬಿಎಂಪಿಯ ಅಧಿಕಾರಿಗಳು ಗುರುತಿಸಿದ್ದಾರೆ.

ತುಮಕೂರು ರಸ್ತೆಯ ಬೆಂಗಳೂರು ಅಂತಾರಾಷ್ಟ್ರೀಯ  ವಸ್ತು ಪ್ರದರ್ಶನ ಕೇಂದ್ರದಲ್ಲಿ 7 ಸಾವಿರ ಹಾಸಿಗೆ, ಪ್ಯಾಲೆಸ್‌ ಗ್ರೌಂಡ್‌ನ‌ಲ್ಲಿ 3 ಸಾವಿರ ಹಾಸಿಗೆ, ಜ್ಞಾನ ಭಾರತಿ ಬೆಂಗಳೂರು ವಿಶ್ವ ವಿದ್ಯಾಲಯದ ಬಾಲಕಿಯರ ಹಾಸ್ಟೆಲ್‌ ನಲ್ಲಿರುವ 350 ಹಾಸಿಗೆ, ಬೆಂಗಳೂರು ವಿವಿ ಬಾಲಕಿಯರ ಹಾಸ್ಟೆಲ್‌  ಈಶಾನ್ಯದಲ್ಲಿರುವ 400 ಹಾಸಿಗೆ, ಇಂದಿರಾ ನಗರದ 2ನೇ ಹಂತದ ಕೋರಮಂಗಲದ ಒಳಾಂಗಣ ಕ್ರೀಡಾಂಗಣದ 250 ಹಾಸಿಗೆಗಳು, ದಯಾನಂದ ಸಾಗರ್‌ ವಿವಿ ವಿದ್ಯಾರ್ಥಿ ನಿಲಯದಲ್ಲಿನ 250 ಹಾಸಿಗೆಗಳನ್ನು ಕೋವಿಡ್‌ ಆರೈಕೆ  ಕೇಂದ್ರವಾಗಿ ಬಳಸಿಕೊಳ್ಳಲು ಪಾಲಿಕೆ ಅಧಿಕಾರಿಗಳು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

Advertisement

ಕಳೆದ 3 ದಿನಗಳಿಂದ ನಗರದಲ್ಲಿ ಸೋಂಕಿತರ ಸಂಖ್ಯೆ ನ್ಪೋಟವಾಗುತ್ತಿದೆ. ಇದರ ಬೆನ್ನಲ್ಲೇ ಆಸ್ಪತ್ರೆಗಳ ಕೊರತೆ ಸೃಷ್ಟಿಯೂ ಎದುರಾಗಿದೆ. ಹೀಗಾಗಿ,  ಕೋವಿಡ್‌ 19 ಸೋಂಕಿನ ಲಕ್ಷಣ ಇಲ್ಲದ ಸೋಂಕಿತರಿಗೆ ಕೋವಿಡ್‌ ಆರೈಕೆ ಕೇಂದ್ರಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.

ಗುಣಮುಖ ಕಡಿಮೆ, ಬೆಡ್‌ಗಳ ಕೊರತೆ: ಬೆಂಗಳೂರಿನಲ್ಲಿ ಕೋವಿಡ್‌ 19 ಸೋಂಕಿಗೆ ಹೆಚ್ಚಾಗಿ ವೃದ್ಧರು ತುತ್ತಾಗುತ್ತಿದ್ದು, ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಗುಣಮುಖರಾಗುತ್ತಿರುವವರ ಪ್ರಮಾಣ ತೀರಾ ಕಡಿಮೆ ಇದೆ.  ಲಾಕ್‌ಡೌನ್‌  ಸಂದರ್ಭದಲ್ಲಿ ಶೇ.60ಕ್ಕೂ ಅಧಿಕ ಪ್ರಮಾಣ ಗುಣಮುಖರಾದರೆ, ಭಾಗಶಃ ಲಾಕ್‌ಡೌನ್‌ ಸಡಿಲಿಕೆ ನಂತರ ಶೇ.10 ಕ್ಕೆ ಕುಸಿದಿದೆ. ಕಳೆದ 2 ದಿನಗಳಲ್ಲಿ 1,379 ಸೋಂಕಿತರು ದೃಢ ಪಟ್ಟರೆ, ಬಿಡುಗಡೆಯಾದವರು ಕೇವಲ 7 ಮಂದಿ. ಹೀಗಾಗಿ  ಬೆಡ್‌ಗಳ ಕೊರತೆ ಎದುರಾಗುತ್ತಿದೆ. ಗುಣಮುಖ ಪ್ರಮಾಣ ಹೆಚ್ಚಳವಾಗದಿದ್ದರೆ ಇನ್ನಷ್ಟು ತೊಂದರೆ ಎದುರಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಸೋಂಕಿತರಿಗೆ ಬೆಡ್‌ಗಳ ಕೊರತೆ ಎದುರಾಗದಂತೆ ಅಗತ್ಯ ಕ್ರಮ ವಹಿಸಲಾಗಿದೆ. ಮುಂದಿನ ದಿನಗಳಲ್ಲಿ ಅಗತ್ಯ ಬಿದ್ದರೆ ಬಿಡಿಎ ಖಾಲಿ ಅಪಾರ್ಟ್‌ಮೆಂಟ್‌ಗಳನ್ನು ಬಳಸಿಕೊಳ್ಳುವ ಚಿಂತನೆ ಇದೆ. ಈ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಸದ್ಯ  ಬೆಡ್‌ಗಳ ಕೊರತೆ ಇಲ್ಲ. 
-ಸರ್ಫ್ರಾಜ್‌ ಖಾನ್‌, ಪಾಲಿಕೆ ಜಂಟಿ ಆಯುಕ್ತ

Advertisement

Udayavani is now on Telegram. Click here to join our channel and stay updated with the latest news.

Next