Advertisement

ವಾರಿಯರ್ಸ್‌ಗೆ ಅಂಟಿದ ಮಹಾಮಾರಿ!

02:45 PM Apr 16, 2020 | Team Udayavani |

ಬಾಗಲಕೋಟೆ: ಕೋವಿಡ್ 19 ಸೋಂಕು ವಿರುದ್ಧ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಪೊಲೀಸ್‌ ಸಿಬ್ಬಂದಿಗೂ ಭೀತಿ ಕಾಡುತ್ತಿದ್ದು, ಅವರ ಸುರಕ್ಷತೆಗೆ ಜಿಲ್ಲಾ ಪೊಲೀಸ್‌ ಇಲಾಖೆಗೆ ಧಾವಿಸಿದೆ. ಮುಧೋಳದ ಸಿಪಿಐ ಕಚೇರಿಯಲ್ಲಿ ಗುಪ್ತ ವಾರ್ತೆ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ ಜಮಖಂಡಿಯ 39 ವರ್ಷದ ಪೇದೆಗೆ ಬುಧವಾರ ಸೋಂಕು ದೃಢಪಟ್ಟಿದೆ. ಕಳೆದ ನಾಲ್ಕು ದಿನಗಳ ಹಿಂದಿನವರೆಗೂ ಕರ್ತವ್ಯದಲ್ಲಿದ್ದ ಪೇದೆ, ಮುಧೋಳದಲ್ಲಿ ಸೋಂಕಿತರು ಕಂಡು ಬಂದ ಮದರಸಾ ಮತ್ತು ಆ ಪ್ರದೇಶದಲ್ಲಿ ಕರ್ತವ್ಯ ನಿಭಾಯಿಸಿದ್ದರು. ಈ ವೇಳೆ ಅವರಿಗೆ ಸೋಂಕು ತಗುಲಿರಬಹುದು ಎಂದು ಶಂಕಿಸಲಾಗಿದೆ.

Advertisement

ವಿಶ್ವವನ್ನೇ ತಲ್ಲಣಗೊಳಿಸಿರುವ ಈ ಮಹಾಮಾರಿ, ತನ್ನ ವಿರುದ್ಧ ಹೋರಾಡುವವರನ್ನೂ ಬಿಟ್ಟಿಲ್ಲ. ಪೊಲೀಸ್‌ ಪೇದೆಗೆ ಎರಡು ದಿನದಿಂದ ತೀವ್ರ ಜ್ವರ ಮತ್ತು ಪದೇ ಪದೇ ಸೀನು ಬರುತ್ತಿದ್ದ ಹಿನ್ನೆಲೆಯಲ್ಲಿ ಜಮಖಂಡಿಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಅಲ್ಲಿಂದಲೇ ಅವರ ಗಂಟಲು ಮಾದರಿ ಪರೀಕ್ಷೆಗೆ ಕಳುಹಿಸಲಾಗಿತ್ತು. ಬುಧವಾರ ಬೆಳಗ್ಗೆ ಅವರಿಗೆ ಸೋಂಕಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಅವರನ್ನು ಜಿಲ್ಲಾ ಆಸ್ಪತ್ರೆಯ ಕೋವಿಡ್‌-19 ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

ಈ ಪೇದೆಯೊಂದಿಗೆ ನೇರ ಸಂಪರ್ಕದಲ್ಲಿದ್ದ ಮುಧೋಳದ ಸಿಪಿಐ ಮತ್ತು ಅವರ ಕಚೇರಿಯ ಇತರೆ ಸಿಬ್ಬಂದಿ, ಕಂದಾಯ ಇಲಾಖೆಯ ಕೆಲ ಸಿಬ್ಬಂದಿ ಹಾಗೂ ಕೆಲವು ವೈದ್ಯರನ್ನೂ ತಪಾಸಣೆಗೆ ಒಳಪಡಿಸಲಾಗುತ್ತಿದೆ. ಬುಧವಾರ ಅವರೆಲ್ಲರನ್ನೂ ಬಾಗಲಕೋಟೆಗೆ ಕರೆಸಿ, ಗಂಟಲು ಮಾದರಿ ಪಡೆದಿದ್ದು, ಸದ್ಯ ಎಪಿಎಂಸಿ ಸುತ್ತಲಿನ ಪ್ರದೇಶದ ಖಾಸಗಿ ಲಾಡ್ಜ್ವೊಂದರಲ್ಲಿ ನಿಗಾದಲ್ಲಿಡಲಾಗಿದೆ.

ಸುರಕ್ಷತೆ ಅತೀ ಮುಖ್ಯ: ಕೋವಿಡ್ 19  ಸೋಂಕಿನ ವಿರುದ್ಧ ಹೋರಾಟಗಾರರಲ್ಲಿ ವೈದ್ಯರು, ನರ್ಸ್‌ಗಳು, ಪೊಲೀಸರು, ಕಂದಾಯ ಇಲಾಖೆ ಸಹಿತ ವಿವಿಧ ಇಲಾಖೆಗಳ ಅ ಧಿಕಾರಿಗಳು, ಆರೋಗ್ಯ ಕವಚ-108ರ ಸಿಬ್ಬಂದಿ, ಆಶಾ, ಅಂಗನವಾಡಿ ಕಾರ್ಯಕರ್ತೆಯರು ಹೀಗೆ ಹಲವು ಸಿಬ್ಬಂದಿ, ಹಗಲು-ರಾತ್ರಿ ಎನ್ನದೇ ಶ್ರಮಿಸುತ್ತಿದ್ದಾರೆ. ಅವರಿಗೆಲ್ಲ ಸುರಕ್ಷತೆ ಒದಗಿಸುವ ನಿಟ್ಟಿನಲ್ಲಿ ಆಯಾ ಇಲಾಖೆಯ ಮುಖ್ಯಸ್ಥರಾಗಿರುವ ಜಿಲ್ಲಾ ಧಿಕಾರಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹಾಗೂ ಜಿಪಂ. ಸಿಇಒ ತಕ್ಷಣ ಕಾರ್ಯ ಪ್ರವೃತ್ತರಾಗಬೇಕಿದೆ. ಈಗಾಗಲೇ ಎಸ್ಪಿ ಲೋಕೇಶ ಜಗಲಾಸರ ತಮ್ಮ ಇಡೀ ಪೊಲೀಸ್‌ ಸಿಬ್ಬಂದಿಗೆ ಮನೋಸ್ಥೈರ್ಯ ತುಂಬುವ ಜತೆಗೆ ಅವರೊಂದಿಗೆ ಸದಾ ನಾನಿದ್ದೇನೆ ಎಂಬ ಮಾತು ಹೇಳಿ ಮೆಚ್ಚುಗೆ ಪಡೆದಿದ್ದಾರೆ. ವೈದ್ಯಕೀಯ, ಕಂದಾಯ, ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಪಿಡಿಒಗಳು, ಇತರೆ ಅಧಿ ಕಾರಿ-ಸಿಬ್ಬಂದಿಗಳೂ ಇಂತಹ ಧೈರ್ಯ ತುಂಬುವ ಹಾಗೂ ಅವರಿಗೆ ಅಗತ್ಯ ಸುರಕ್ಷತೆ ಒದಗಿಸಬೇಕು ಎಂಬ ಒತ್ತಾಯ ಕೇಳಿ ಬಂದಿದೆ.  ಆದರೂ, ಈಗಾಗಲೇ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಡಳಿತ, ಕೋವಿಡ್ 19 ವಿರುದ್ಧ ಹೋರಾಟ ಮಾಡುವ ಪ್ರತಿಯೊಂದು ಇಲಾಖೆಯ ಸಿಬ್ಬಂದಿ, ಅಧಿಕಾರಿಗಳ ಸುರಕ್ಷತೆಗೆ ಹೆಚ್ಚಿನ ಕಾಳಜಿ ವಹಿಸಿದೆ ಎಂದು ಕೋವಿಡ್‌-19 ಜಿಲ್ಲಾ ವಿಶೇಷ ಅಪರ ಜಿಲ್ಲಾ ಕಾರಿ ಬಸವರಾಜ ಸೋಮಣ್ಣವರ ಅಭಯ ನೀಡಿದ್ದಾರೆ.

ಕೇಂದ್ರದ ಪಟ್ಟಿಯಲ್ಲಿ ಬಾಗಲಕೋಟೆ : ಕೋವಿಡ್ 19  ಸೋಂಕು ಹರಡುತ್ತಿರುವ ರಾಜ್ಯಗಳ ಹಾಟ್‌ ಸ್ಪಾಟ್‌ ಜಿಲ್ಲೆಗಳನ್ನು ಗುರುತಿಸಿದ್ದು, ರಾಜ್ಯದ 8 ಜಿಲ್ಲೆಗಳನ್ನು ಆ ಪಟ್ಟಿಗೆ ಸೇರಿಸಿದೆ. ಅದರಲ್ಲಿ ಬಾಗಲಕೋಟೆ ಜಿಲ್ಲೆ ಕೋವಿಡ್ 19 ಹಾಟ್‌ಸ್ಪಾಟ್‌ ಪಟ್ಟಿಯಲ್ಲಿದ್ದು, ಕೊರೊನಾ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಮುಂಜಾಗ್ರತೆ ಕೈಗೊಳ್ಳಲು ನಿರ್ದೇಶನ ನೀಡಿದೆ.

Advertisement

ನಗರದಲ್ಲೇ 11 ಸೋಂಕಿತರು : ಬುಧವಾರದವರೆಗೆ ಒಟ್ಟು 14 ಜನ ಸೋಂಕಿತರು ಜಿಲ್ಲೆಯಲ್ಲಿ ಪತ್ತೆಯಾಗಿದ್ದು, ಅದರಲ್ಲಿ ಬಾಗಲಕೋಟೆ ನಗರದ ಒಂದೇ ಏರಿಯಾದಲ್ಲಿ ಒಟ್ಟು 11 ಜನರಿಗೆ ಸೋಂಕು ತಗುಲಿದೆ. ಅದರಲ್ಲಿ ಮೂವರು ಮಕ್ಕಳು, ಐದು ಜನ ಮಹಿಳೆಯರು, 6 ಜನ ಪುರುಷರಿದ್ದು, ಅದರಲ್ಲಿ ಒಬ್ಬ ವೃದ್ಧ ಕೋವಿಡ್ 19 ಕ್ಕೆ ಬಲಿಯಾಗಿದ್ದಾರೆ. ಮುಧೋಳದ ಒಂದೇ ಏರಿಯಾದಿಂದ ಮೂವರಿಗೆ ಸೋಂಕು ತಗುಲಿದ್ದು, ಓರ್ವ ಪೊಲೀಸ್‌ ಪೇದೆ ಇರುವುದು ದುಃಖಕರವಾಗಿದೆ.

ಇಕ್ಕಟ್ಟಾದ ಮನೆ-ಕೆಮ್ಮಂಗಿಲ್ಲ-ಸೀನಂಗಿಲ್ಲ : ಹಳೆಯ ಬಾಗಲಕೋಟೆಯ ಪರಿಸ್ಥಿತಿ ಬಹಳ ಇಕ್ಕಟ್ಟಾಗಿದೆ. ಇಲ್ಲಿರುವ ಇಕ್ಕಟ್ಟಾದ ರಸ್ತೆಗಳು, ಒಂದಕ್ಕೊಂದು ಅಂಟಿಕೊಂಡಿರುವ ಮನೆಗಳು, ಕೊರೊನಾ ಅತಿಬೇಗ ಹರಡಲು ಕಾರಣವೂ ಎಂಬ ಮಾತು ಕೇಳಿ ಬಂದಿದೆ. ಇಲ್ಲಿನ ಹಲವು ರಸ್ತೆಗಳು ನಾಲ್ಕು ಅಡಿಯೂ ಅಗಲವಾಗಿಲ್ಲ. ಮನೆಯ ಕಟ್ಟೆಯ ಮುಂದೆ ಕುಳಿತು ಕೆಮ್ಮಿದರೂ, ಎದುರಿನ ವ್ಯಕ್ತಿಗೆ ಎಂಜಲು ಬಡಿಯುವಷ್ಟು ಇಕ್ಕಟ್ಟಾದ ಪ್ರದೇಶವಾಗಿದೆ. ಹೀಗಾಗಿ ಲಾಕ್‌ಡೌನ್‌ ಬದಲು, ಸದ್ಯ ಸೀಲ್‌ಡೌನ್‌ ಅನ್ನು ಅಧಿಕೃತವಾಗಿ ಮಾಡಿದ್ದು, ಜನರು ತಮ್ಮ ಮತ್ತು ತಮ್ಮ ಕುಟುಂಬದವರ ಸುರಕ್ಷತೆಗಾಗಿ ಮೇ 3ರವರೆಗೂ ಗಟ್ಟಿ ಮನಸ್ಸಿನಿಂದ ಹೊರ ಬರದೇ ಮನೆಯಲ್ಲಿರಬೇಕಿದೆ.

ಮುಧೋಳದ ಪೊಲೀಸ್‌ ಪೇದೆಗೆ ಸೋಂಕು ತಗುಲಿರುವುದು ದುಃಖಕರ ಸಂಗತಿ. ನಮ್ಮ ಸಿಬ್ಬಂದಿ ಧೈರ್ಯದಿಂದ ಪರಿಸ್ಥಿತಿ ನಿಭಾಯಿಸುತ್ತಿದ್ದು, ಅವರೊಂದಿಗೆ ಇಲಾಖೆ ಇದೆ. ಪ್ರತಿಯೊಬ್ಬ ಅಧಿಕಾರಿ, ಸಿಬ್ಬಂದಿಗೆ ಸ್ಯಾನಿಟೈಜರ್‌, ಹ್ಯಾಂಡ್‌ಗ್ಲೋಜ್, ಮಾಸ್ಕ್ ನೀಡಲಾಗಿದೆ. ಪೊಲೀಸ್‌ ಠಾಣೆ ಮತ್ತು ಅವರ ವಸತಿಗೃಹಗಳ ಸುತ್ತ ರಾಸಾಯನಿಕ ಸಿಂಪಡಣೆ ಮಾಡಲಾಗುತ್ತಿದೆ. ಮುಧೋಳದ ಪೇದೆ ಜತೆಗೆ ಸಂಪರ್ಕ ಹೊಂದಿದ್ದವರನ್ನು ತಪಾಸಣೆಗೆ ಒಳಪಡಿಸಲಾಗುತ್ತಿದೆ. ಕೋವಿಡ್ 19  ವಿರುದ್ಧದ ಹೋರಾಟವನ್ನು ಇಲಾಖೆ ಧೈರ್ಯದಿಂದ ಎದುರಿಸುತ್ತದೆ.  ಲೋಕೇಶ ಜಗಲಾಸರ, ಎಸ್ಪಿ

 

ಶ್ರೀಶೈಲ ಕೆ. ಬಿರಾದಾರ

Advertisement

Udayavani is now on Telegram. Click here to join our channel and stay updated with the latest news.

Next