ಬಾಗಲಕೋಟೆ : ಮುಂದಿನ ಮೂರು ತಿಂಗಳಿನಲ್ಲಿ ಕೋವಿಡ್ 3ನೇ ಅಲೆ ಪ್ರಾರಂಭವಾಗುವ ಸಾಧ್ಯತೆ ಇದ್ದು, ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಎಲ್ಲ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಶಿವಯೋಗಿ ಕಳಸದ ಹೇಳಿದರು.
ಜಿಪಂ ಸಭಾಭವನದಲ್ಲಿ ಕೋವಿಡ್ ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳ ಕುರಿತು ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, 3ನೇ ಅಲೆಯಲ್ಲಿ ಹೆಚ್ಚಾಗಿ ಮಕ್ಕಳಲ್ಲಿ ಕಂಡು ಬರುವ ಸಾಧ್ಯತೆ ಇದೆ. ಚಿಕಿತ್ಸೆಗೆ ಬೇಕಾದ ಮೆಡಿಶಿನ್, ವೆಂಟಿಲೇಟರ್, ಐಸಿಒಗಳ ಸಿದ್ಧತೆಗೆ ಕ್ರಮ ಕೈಗೊಳ್ಳಲು ಸೂಚಿಸಿದರು.
ಮೊದಲ ಅಲೆಗೆ ಹೋಲಿಸಿದರೆ ಎರಡನೇ ಅಲೆಯಲ್ಲಿ ಕೋವಿಡ್ ರೂಪಾಂತರವು ಮಕ್ಕಳ ಮೇಲೆ ಪರಿಣಾಮ ಬೀರಿರುವುದನ್ನು ನೋಡುತ್ತಿದ್ದೇವೆ. ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಪಾಲಕರಲ್ಲಿ ಜಾಗೃತಿ ಮೂಡಿಸಲು ಮುಂದಾಗಬೇಕು ಎಂದು ತಿಳಿಸಿದರು. ಗ್ರಾಮಗಳಲ್ಲಿಯೂ ಸಹ ಕೋವಿಡ್ ಸೋಂಕು ಹರಡುತ್ತಿದ್ದು, ಹೆಚ್ಚಿನ ನಿಗಾವಹಿಸಿ ಮನೆ ಮನೆ ಸರ್ವೇ ಕಾರ್ಯ ಚುರುಕುಗೊಳಿಸಬೇಕು. ಕೋವಿಡ್ ಲಕ್ಷಣಗಳು ಕಂಡುಬಂದವರಿಗೆ ತಪಾಸಣೆ ಮಾಡಿ ಸೂಕ್ತ ಚಿಕಿತ್ಸೆಗೆ ಕೊಡಿಸುವ ಕೆಲಸವಾಗಬೇಕು. ಕೋವಿಡ್ ಬಗ್ಗೆ ಗ್ರಾಮದ ಜನರಲ್ಲಿ ಜಾಗೃತಿ ಮೂಡಿಸಿ ಅವರಲ್ಲಿ ಮನೋಸ್ಥೈರ್ಯವನ್ನು ತುಂಬಿಸಿ ಲಾಕ್ ಡೌನ್ ಅವಧಿಯಲ್ಲಿ ಮನೆಯಿಂದ ಹೊರಬರದಂತೆ ಜಾಗೃತಗೊಳಿಸುವ ಕಾರ್ಯವಾಗಬೇಕು. ಅಂದಾಗ ಮಾತ್ರ ಕೋವಿಡ್ ನಿಯಂತ್ರಣ ಸಾಧ್ಯವಾಗುತ್ತದೆ. ಜಿಲ್ಲೆಯಲ್ಲಿ ಕೋವಿಡ್ ಪ್ರಕರಣ ದೃಢಪಟ್ಟ ಗ್ರಾಮಗಳು ಹಾಗೂ ಕೋವಿಡ್ ಮುಕ್ತವಾದ ಗ್ರಾಮಗಳ ಮಾಹಿತಿ ನೀಡಲು ತಿಳಿಸಿದರು.
ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ|ಕೆ.ರಾಜೇಂದ್ರ ಮಾತನಾಡಿ, ಜಿಲ್ಲೆಯಲ್ಲಿ ದಾಖಲಾಗಿರುವ ಕೋವಿಡ್ ಸೋಂಕಿತರಿಗೆ ಪ್ರತಿದಿನ 18ರಿಂದ 19 ಕೆಎಲ್ ಆಕ್ಸಿಜನ್ ಅವಶ್ಯವಿದ್ದು, 17ರಿಂದ 18 ಕೆಎಲ್ ಆಕ್ಸಿಜನ್ ಸದ್ಯ ಸಿಗಿಕೇರಿ ಕ್ರಾಸ್‌ನಲ್ಲಿರುವ ಎಚ್. ಎಸ್.ಕಂಠಿ ಇಂಡಸ್ಟ್ರೀಜ್ ಪ್ರಾವೈಟ್ ಲಿಮಿಟೆಡ್‌ನಿಂದ ಪೂರೈಕೆಯಾಗುತ್ತಿದೆ. ಆಕ್ಸಿಜನ್ ಕೊರತೆಯಾಗದಂತೆ ಆಕ್ಸಿಜನ್ ಸಿಲಿಂಡರ್ ಬಳಸಲಾಗುತ್ತಿದೆ. ಅಲ್ಲದೇ ಪ್ರತಿದಿನ 150 ರಿಂದ 200 ವರೆಗೆ ರೆಮಿಡಿಸಿವರ್ ಚುಚ್ಚುಮದ್ದು ಅವಶ್ಯಕತೆಯಿದ್ದು, ಇಲ್ಲಿವರೆಗೆ 7128 ರೆಮ್‌ಡಿಸಿವಿಯರ್ ಚುಚ್ಚುಮದ್ದು ಸ್ವೀಕೃತವಾಗಿದ್ದು, ಯಾವುದೇ ರೀತಿಯ ತೊಂದರೆ ಇರುವುದಿಲ್ಲ ಎಂದು ಹೇಳಿದರು.
ಕೋವಿಡ್ ಸೋಂಕಿತರ ಚಿಕಿತ್ಸೆಗಾಗಿ 6 ಸರಕಾರಿ ಹಾಗೂ 33 ಖಾಸಗಿ ಆಸ್ಪತ್ರೆಗಳಲ್ಲಿನ ಲಭ್ಯವಿರುವ ಬೆಡ್‌ಗಳ ಮಾಹಿತಿಯನ್ನು ಎನ್‌ಐಸಿ ಪೋರ್ಟಲ್ ನಲ್ಲಿ ಪ್ರತಿದಿನ ಮಾಹಿತಿ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ 1859 ವಿವಿಧ ಬೆಡ್‌ಗಳ ಪೈಕಿ 1442 ಬೆಡ್ ಬಳಕೆಯಾಗುತ್ತಿದ್ದು, ಇನ್ನು 417 ಬೆಡ್‌ಗಳು ಚಿಕಿತ್ಸೆಗೆ ಲಭ್ಯವಿರುತ್ತವೆ. ವಿವಿಧ ಬೆಡ್‌ಗಳ ಲಭ್ಯತೆಗಾಗಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ದಿನ 24 ಗಂಟೆಗಳ ಕಾಲ ಕೋವಿಡ್ ವಾರ್‌ರೂಮ್ ಸಹಾಯವಾಣಿ ತೆರೆಯಲಾಗಿದೆ. ಜಿಲ್ಲೆಯ ಎಲ್ಲ ತಾಲೂಕು ಸೇರಿ ಒಟ್ಟು 10 ಸಿಸಿಸಿ ಕೇಂದ್ರಗಳನ್ನು ತೆರೆಯಲಾಗಿದ್ದು, 853 ಬೆಡ್‌ಗಳ ಪೈಕಿ 534 ಬೆಡ್‌ಗಳು ಖಾಲಿ ಇರುವುದಾಗಿ ತಿಳಿಸಿದರು.
ಜಿ.ಪಂ ಸಿಇj ಟಿ.ಭೂಬಾಲನ ಮಾತನಾಡಿ, ಕರ್ಫ್ಯೂ ಮತ್ತು ಲಾಕ್‌ಡೌನ್ ಅವಧಿಯಲ್ಲಿ 6129 ಜನ ವಲಸಿಗರು ಜಿಲ್ಲೆಗೆ ಆಗಮಿಸಿದ್ದು, ಅವರೆಲ್ಲರ ಆರೋಗ್ಯ ತಪಾಸಣೆ ಮಾಡಲಾಗಿದೆ. ಅದರಲ್ಲಿ 619 ಜನರಿಗೆ ಸೋಂಕು ತಗುಲಿರುವುದು ಕಂಡುಬಂದಿದೆ. ಅವರನ್ನು ಹೋಮ್ ಐಸೋಲೇಷನ್‌ನಲ್ಲಿ ಇಟ್ಟು ನಿಗಾ ವಹಿಸಲಾಗುತ್ತಿದೆ. ಪ್ರತಿಯೊಂದು ಗ್ರಾಮಗಳಲ್ಲಿ ವೈದ್ಯರ ಜತೆ ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಗ್ರಾಪಂ ಸಿಬ್ಬಂದಿ ಒಳಗೊಂಡ ತಂಡ ರಚಿಸಿ ಮನೆ ಮನೆ ಕೋವಿಡ್ ಸರ್ವೇ ಕಾರ್ಯ ನಡೆಸಲಾಗುತ್ತಿದೆ ಎಂದು ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ್, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಉಪವಿಭಾಗಾಧಿಕಾರಿ ಎಂ.ಗಂಗಪ್ಪ, ತಹಶೀಲ್ದಾರ್ ಗುರುಸಿದ್ದಯ್ಯ ಹಿರೇಮಠ ಮುಂತಾದವರು ಉಪಸ್ಥಿತರಿದ್ದರು.