ಕುಂದಾಪುರ: ಮುಂಬಯಿಯಿಂದ ಸರಕು ಸಾಗಾಟ ವಾಹನದಲ್ಲಿ ಬಂದಿದ್ದ ಮಂಡ್ಯ ಮೂಲದ ವ್ಯಕ್ತಿಗೆ ಈಗ ಕೋವಿಡ್ 19 ಸೋಂಕು ಇರುವುದು ಪತ್ತೆಯಾಗಿದೆ.
ದಾರಿ ಮಧ್ಯೆ ಆತ ಕುಂದಾಪುರ ಸಮೀಪದ ತೆಕ್ಕಟ್ಟೆಯ ಪೆಟ್ರೋಲ್ ಬಂಕ್‌ನಲ್ಲಿ ಸ್ನಾನ ಮಾಡಿ ರುವುದು ದೃಢವಾಗಿರುವುದರಿಂದ ತಡರಾತ್ರಿ ಬಂಕ್ ನ್ನು ಸೀಲ್‌ಡೌನ್ ಮಾಡಲಾಗಿದೆ.
ಮುಂಬಯಿಯಿಂದ ಖರ್ಜೂರ ಸಾಗಾಟ ವಾಹನದಲ್ಲಿ ಆತ ಬಂದಿದ್ದು, ಶಿರೂರು ಟೋಲ್‌ಗೇಟ್ ಮತ್ತು ಸಾಸ್ತಾನ ಟೋಲ್‌ಗೇಟ್ ನಡುವಿನ ಸಮುದ್ರದ ಬದಿಯ ಯಾವುದೋ ಪೆಟ್ರೋಲ್ ಬಂಕ್ ಒಂದರಲ್ಲಿ ತಾನು ಸ್ನಾನ ಮಾಡಿರುವುದಾಗಿ ಮಂಡ್ಯದಲ್ಲಿ ವಿಚಾರಣೆ ವೇಳೆ ಮಾಹಿತಿ ನೀಡಿದ್ದ.
ಸೋಮವಾರ ಸಂಜೆ ವೇಳೆಗೆ ಮಂಡ್ಯ ಜಿಲ್ಲಾಡಳಿತದಿಂದ ಬಂದ ಮಾಹಿತಿಯನ್ನು ಅನುಸರಿಸಿ ಕುಂದಾಪುರ ತಾಲೂಕು ಆರೋಗ್ಯಾಧಿಕಾರಿ ಡಾ| ನಾಗಭೂಷಣ ಉಡುಪ ಹಾಗೂ ಕೋಟ ಎಸ್‌ಐ ನಿತ್ಯಾನಂದ ಗೌಡ ನೇತೃತ್ವದಲ್ಲಿ ಎಲ್ಲ ಪೆಟ್ರೋಲ್ ಬಂಕ್‌ಗಳ ಸಿಸಿ ಕೆಮರಾ ದಾಖಲೆಗಳನ್ನು ಪರಿಶೀಲನೆ ನಡೆಸಲಾಯಿತು. ಸೋಮವಾರ ತಡರಾತ್ರಿ ವೇಳೆಗೆ ತೆಕ್ಕಟ್ಟೆಯ ಬಂಕ್‌ನ ಕೆಮರಾ ಪರಿಶೀಲನೆ ವೇಳೆ ಆತ ಸ್ನಾನ ಮಾಡಿರುವ ಬಂಕ್ ಅದುವೇ ಎಂಬುದು ದೃಢವಾಯಿತು. ಪೆಟ್ರೋಲ್ ಬಂಕನ್ನು ತತ್‌ಕ್ಷಣವೇ ಸೀಲ್‌ಡೌನ್ ಮಾಡಿದ್ದು, ಸುತ್ತಲಿನ ಮೂರು ಕಿ.ಮೀ. ವ್ಯಾಪ್ತಿಯನ್ನೂ ಸೀಲ್‌ಡೌನ್ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಹಸುರು ಜಿಲ್ಲೆಯಾಗುವ ನಿರೀಕ್ಷೆಯಲ್ಲಿರುವಾಗ
28 ದಿನಗಳಿಂದ ಯಾವುದೇ ಕೋವಿಡ್ 19 ಪಾಸಿಟಿವ್ ಪ್ರಕರಣ ಇಲ್ಲದ ಉಡುಪಿ ಜಿಲ್ಲೆಯ ಸಾಧನೆಗೆ ಕೋವಿಡ್ 19 ಸೋಂಕಿತನ ತೆಕ್ಕಟ್ಟೆ ಸಂಪರ್ಕ ಜಿಲ್ಲಾಡಳಿತಕ್ಕೆ ತುಸು ತಲೆನೋವು ತರುವಂತಾಗಿದೆ. ಜಿಲ್ಲೆಯ ಗಡಿಗಳನ್ನು ಸಂಪೂರ್ಣ ಸೀಲ್‌ಡೌನ್ ಮಾಡಿದ್ದರೂ ಅವಶ್ಯ ಸಾಮಗ್ರಿ ಸಾಗಣೆ ವಾಹನ ಗಳಿಗೆ ಅವಕಾಶ ಕೊಟ್ಟಿರುವುದನ್ನು ದುರುಪ ಯೋಗಪಡಿಸಿಕೊಂಡು ಇಂತಹ ವ್ಯಕ್ತಿಗಳು ಒಳನುಸುಳುತ್ತಿರುವುದು ಸಮಸ್ಯೆಯಾಗಿದೆ.