Advertisement
ರಾಜ್ಯದ ಒಟ್ಟು ಪ್ರಕರಣಗಳಲ್ಲಿ ಬೆಂಗಳೂರಿನಲ್ಲೇ 61.42 ಪ್ರತಿಶತ ಪ್ರಕರಣಗಳು ಪತ್ತೆಯಾಗಿವೆ. ತನ್ಮೂಲಕ ಈಗ ಕರ್ನಾಟಕ ಅತೀ ಹೆಚ್ಚು ‘ಸಕ್ರಿಯ’ ಸೋಂಕಿತರನ್ನು ಹೊಂದಿರುವ ಹಾಟ್‌ಸ್ಪಾಟ್‌ಗಳಲ್ಲಿ ನಾಲ್ಕನೇ ಸ್ಥಾನ ತಲುಪಿದೆ. ರಾಜ್ಯವೆಂದಷ್ಟೇ ಅಲ್ಲ, ದೇಶದ ವಿವಿಧ ಭಾಗಗಳಲ್ಲಿ ಕೋವಿಡ್ 19 ಹಾವಳಿ ಹೆಚ್ಚುತ್ತಲೇ ಇದೆ.
Related Articles
Advertisement
ಅದರಲ್ಲೂ ಕೆಲವೆಡೆಯಲ್ಲಿ ಸ್ವಾಸ್ಥ್ಯ ವಿಭಾಗದಿಂದ ಜಾರಿಯಾಗುವ ಬುಲೆಟಿನ್‌ಗಳಲ್ಲಿ ರೋಗಿಗಳ ಸಂಖ್ಯೆಯೇನೋ ಇರುತ್ತದೆ. ಆದರೆ ರೋಗಿಯ ವಯಸ್ಸು, ಕ್ಷೇತ್ರ ಮತ್ತು ಸ್ಥಿತಿಗೆ ಸಂಬಂಧಿಸಿದ ಪೂರಕ ಮಾಹಿತಿಗಳು ಸಿಗುತ್ತಿಲ್ಲ ಎನ್ನಲಾಗುತ್ತಿದೆ.
ಹಾಗೆಂದು ರಾಜ್ಯ ಸರಕಾರಗಳು ಉದ್ದೇಶಪೂರ್ವಕವಾಗಿಯೇ ಹೀಗೆ ಮಾಡುತ್ತಿವೆ ಎಂದೇನೂ ಅಲ್ಲ. ಪ್ರಕರಣಗಳ ಸಂಖ್ಯೆ ಅಧಿಕವಾಗುತ್ತಾ ಹೋದಂತೆ ಸಹಜವಾಗಿಯೇ ಸ್ವಾಸ್ಥ್ಯ ಇಲಾಖೆಗಳ ಮೇಲೆ ಒತ್ತಡ ಬೀಳುತ್ತದೆ. ಆದರೆ ಈ ವಿಷಯದಲ್ಲಿ ನಿಷ್ಕಾಳಜಿ ತೋರುವುದು ಖಂಡಿತ ರೋಗ ಪ್ರಸರಣ ತಡೆಯಲ್ಲಿ ಇಡಲಾಗುತ್ತಿರುವ ಹೆಜ್ಜೆಗೆ ಅಡ್ಡಿಯಾಗಬಹುದು.
ಇತ್ತ ರಾಜ್ಯದ ವಿಷಯಕ್ಕೆ ಬರುವುದಾದರೆ ನಮ್ಮಲ್ಲಿ ಕಾಂಟ್ಯಾಕ್ಟ್ ಟ್ರೇಸಿಂಗ್‌ನ ವೇಗದಲ್ಲಿ ಇಳಿಕೆ ಕಂಡುಬಂದಿದೆ. ಹಠಾತ್ತನೆ ಸೋಂಕಿತರ ಸಂಖ್ಯೆಯಲ್ಲಿ ಏರಿಕೆಯಾಗಿರುವುದು ಇದಕ್ಕೆ ಕಾರಣವಾಗಿರಬಹುದು. ಆದರೆ ಮುಂದಿನ ದಿನಗಳಲ್ಲಾದರೂ ಸೋಂಕಿತರ ಸಂಪರ್ಕಕ್ಕೆ ಬಂದವರನ್ನು ಪತ್ತೆಹಚ್ಚುವ ಪ್ರಕ್ರಿಯೆಗೆ ಮರುವೇಗ ಕೊಡುವ ಅಗತ್ಯವಿದೆ.
ಇನ್ನು ರಾಜ್ಯದಲ್ಲಿ ಇದುವರೆಗೂ 7.40 ಲಕ್ಷ ಟೆಸ್ಟಿಂಗ್‌ಗಳಾಗಿವೆ. ಇದಕ್ಕೆ ಹೋಲಿಸಿದರೆ ನಮಗಿಂತಲೂ ಕಡಿಮೆ ಪ್ರಕರಣಗಳಿರುವ ನೆರೆಯ ಆಂಧ್ರಪ್ರದೇಶದಲ್ಲಿ ಈವರೆಗೂ 10.77 ಲಕ್ಷಕ್ಕೂ ಅಧಿಕ ಪರೀಕ್ಷೆಗಳನ್ನು ನಡೆಸಲಾಗಿದೆ. ಅಲ್ಲದೇ ನಿತ್ಯ ಪರೀಕ್ಷೆಗಳ ಪ್ರಮಾಣವೂ ಅಲ್ಲಿ ಅಧಿಕವಿದೆ.
ಜುಲೈ 3ರಂದು ಆ ರಾಜ್ಯದಲ್ಲಿ 38 ಸಾವಿರ ಪರೀಕ್ಷೆಗಳನ್ನು ನಡೆಸಲಾಗಿದೆ. ಗಮನಾರ್ಹ ಸಂಗತಿಯೆಂದರೆ ನಮ್ಮಲ್ಲಿ ಒಂದೇ ದಿನ ಅತೀ ಹೆಚ್ಚು ಪರೀಕ್ಷೆಗಳು ನಡೆದದ್ದು ಸಹ ಜುಲೈ 3ರಂದೇ! ಅಂದು ನಮ್ಮಲ್ಲಿ 18 ಸಾವಿರ ಪರೀಕ್ಷೆಗಳು ನಡೆದಿವೆ.
ರೋಗಿಗಳ ಬಗ್ಗೆ ಸಾರ್ವಜನಿಕರಿಗೂ ಈಗ ಸರಿಯಾಗಿ ಮಾಹಿತಿ ತಿಳಿಯುತ್ತಿಲ್ಲ. ಇಲ್ಲಿ ಮಾಹಿತಿ ಅಡಗಿಸಿದಷ್ಟು ಅಪಾಯ ಹೆಚ್ಚುತ್ತಾ ಸಾಗುತ್ತದೆ. ಒಂದು ನಿರ್ದಿಷ್ಟ ಪ್ರದೇಶದ ವ್ಯಕ್ತಿಗೆ ಸೋಂಕು ತಗಲಿದೆ ಎಂದು ತಿಳಿದರೆ ಅದರ ಸುತ್ತಮುತ್ತಲಿನ ಜನರು ಹೆಚ್ಚು ಜಾಗರೂಕತೆಯಿಂದ ಇರಲು, ಸ್ವಯಂ ಪರೀಕ್ಷೆಗೆ ಒಳಗಾಗಲು ಸಾಧ್ಯವಿದೆ. ಅದನ್ನೇ ತಿಳಿಸದಿದ್ದರೆ ಮುಂದೆ ನಿಯಂತ್ರಣವೂ ಕಷ್ಟವಾಗಬಹುದು.