ಹೊಸದಿಲ್ಲಿ: ಖಾಸಗಿ ಪ್ರಯೋಗಾಲಯಗಳು ಕೋವಿಡ್ ಪರೀಕ್ಷೆಗೆ ವಿಧಿಸುತ್ತಿದ್ದ ಶುಲ್ಕದ ಮೇಲೆ ಹೇರಲಾಗಿದ್ದ 4,500 ರೂ.ಗಳ ಮಿತಿಯನ್ನು ಕೇಂದ್ರ ಸರಕಾರ ಹಿಂಪಡೆದಿದೆ.
ಈ ಕುರಿತಂತೆ ಪ್ರಕಟಣೆ ಹೊರಡಿಸಿರುವ ಭಾರತೀಯ ವೈದ್ಯಕೀಯ ಸಂಶೋಧನಾ ಕೌನ್ಸಿಲ್ (ಐಸಿಎಂಆರ್), ಹೊಸ ಶುಲ್ಕ ನಿಗದಿಯ ಹೊಣೆಯನ್ನು ರಾಜ್ಯ ಸರಕಾರಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ನೀಡಲಾಗಿದೆ ಎಂದು ಹೇಳಿದೆ.
ಈ ಕುರಿತಂತೆ ಮಾತನಾಡಿರುವ ನೀಡಿರುವ ಐಸಿಎಂಆರ್ ಮಹಾನಿರ್ದೇಶಕ ಬಲರಾಮ್ ಭಾರ್ಗವ, ‘ಕೋವಿಡ್ ಪರೀಕ್ಷೆಗೆ ಬೇಕಾಗುವ ಮೂಲ ಸಾಮಗ್ರಿಗಳು ಯಥೇಚ್ಛವಾಗಿ ಲಭ್ಯವಿವೆ. ವಿದೇಶಿ ಪರೀಕ್ಷಾ ಕಿಟ್‌ಗಳ ಜೊತೆಗೆ ಇಂದು ದೇಶೀಯ ಕಿಟ್‌ಗಳೂ ಲಭ್ಯವಿರುವ ಹಿನ್ನೆಲೆಯಲ್ಲಿ, ಖಾಸಗಿ ಪ್ರಯೋಗಾಲಯಗಳ ನಡುವೆ ಶುಲ್ಕ ಸಮರ ಏರ್ಪಟ್ಟಿದೆ. ಹೀಗಾಗಿ, ಶುಲ್ಕವು ಕಡಿಮೆಯಾಗಲಿದೆ. ಈಗ, ಗರಿಷ್ಠ ಶುಲ್ಕ ಮಿತಿ ಮುಂದುವರಿಕೆ ಅಗತ್ಯ ಇಲ್ಲ’ ಎಂದು ತಿಳಿಸಿದ್ದಾರೆ.
ಇನ್ನು, ಶುಲ್ಕ ನಿಗದಿ ವಿಚಾರಕ್ಕೆ ಸಂಬಂಧಿಸಿದಂತೆ ಆಯಾ ಸರಕಾರಗಳು ತಮ್ಮ ವ್ಯಾಪ್ತಿಯಲ್ಲಿನ ಖಾಸಗಿ ಪ್ರಯೋಗಾಲಯಗಳ ಜತೆಗೆ ಚರ್ಚಿಸಿ, ಇಬ್ಬರಿಗೂ ಒಪ್ಪಿಗೆಯಾಗುವಂಥ ಶುಲ್ಕವನ್ನು ನಿಗದಿಪಡಿಸಬೇಕು ಎಂದು ಅವರು ಹೇಳಿದ್ದಾರೆ.
ಇದೇ ಮಾರ್ಚ್‌ನಲ್ಲಿ, ಕೋವಿಡ್ ಪರೀಕ್ಷಾ ಶುಲ್ಕದ ಮೇಲೆ 4,500 ರೂ.ಗಳ ಮಿತಿ ಹೇರಿದ್ದ ಐಸಿಎಂಆರ್, ಅದಾಗಿ ಒಂದು ತಿಂಗಳ ನಂತರ ತನ್ನೀ ಕ್ರಮವನ್ನು ಸುಪ್ರೀಂಕೋರ್ಟ್‌ನಲ್ಲಿ ಸಮರ್ಥಿಸಿಕೊಂಡಿತ್ತು. 4,500 ರೂ. ಗಳಲ್ಲಿ 1,500 ರೂ.ಗಳು ಸ್ಕ್ರೀನಿಂಗ್‌ಗೆ ಇತರ ಶುಲ್ಕದ ಬಾಬ್ತನ್ನು ಮಿಕ್ಕ ಪರೀಕ್ಷೆಗಳಿಗೆ ಬಳಸಲಾಗುತ್ತದೆ ಎಂದು ಹೇಳಿತ್ತು.