ಕೋಲಾರ: ಕೋವಿಡ್ ಸಂಬಂಧಿತ ಮರಣ ಪ್ರಮಾಣ ಹೆಚ್ಚಾಗದಂತೆ ಅಗತ್ಯ ಮುನ್ನೆಚ್ಚರಿಕೆ ವಹಿಸಿ ಚಿಕಿತ್ಸೆ ನೀಡುವಂತೆ ಆರೋಗ್ಯ ಅಧಿಕಾರಿ ಗಳಿಗೆ ಜಿಲ್ಲಾಧಿಕಾರಿ ಸಿ.ಸತ್ಯಭಾಮ ಸೂಚಿಸಿದರು. ನಗರದಲ್ಲಿನ ತಮ್ಮ ಕಚೇರಿಯಲ್ಲಿ ಕೋವಿಡ್ ಸಂಬಂಧ ಕೈಗೊಂಡಿರುವ ಅಗತ್ಯ ಕ್ರಮಗಳ ಕುರಿತು ನಡೆದ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿ, ಕೋವಿಡ್ ಪಾಸಿಟಿವ್ ಪ್ರಕರಣಗಳಿಗೆ ಚಿಕಿತ್ಸೆ ನೀಡುತ್ತಿರುವ ರೋಗಿಗಳಿಗೆ ಪೌಷ್ಟಿಕ ಆಹಾರ ನೀಡುವ ಮೂಲಕ ಅವರಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸಬೇಕು.
ಇದರಿಂದ ಕಡಿಮೆ ಅವಧಿಯಲ್ಲಿ ಬೇಗ ಗುಣಮುಖರಾಗುತ್ತಾರೆ ಎಂದು ತಿಳಿಸಿದರು. ಜಿಲ್ಲೆಯಲ್ಲಿ ಪ್ರಸ್ತುತ 63 ಪಾಸಿಟಿವ್ ಸಕ್ರಿಯ ಪ್ರಕರಣಗಳಿದ್ದು, ಜಾಲಪ್ಪ ಆಸ್ಪತ್ರೆಯಲ್ಲಿ 27 ಹಾಗೂ ಎಸ್.ಎನ್.ಆರ್ ಆಸ್ಪತ್ರೆಯಲ್ಲಿ 36 ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಈಗಾಗಲೇ 57 ಮಂದಿ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ. ಜೂನ್ ಅಂತ್ಯದ ವೇಳೆಗೆ 4,333 ಸ್ಲಾಬ್ ಟೆಸ್ಟ್ ಮಾಡಲಾಗಿದೆ. ಪ್ರತಿ ದಿನ 206 ಜನರ ಟೆಸ್ಟ್ ಮಾಡಲಾಗುತ್ತಿದ್ದು, ಇದನ್ನು 320ಕ್ಕೆ ಹೆಚ್ಚಿಸಲಾಗುವುದು ಎಂದು ಮಾಹಿತಿ ನೀಡಿದರು.
ಜಿಲ್ಲೆಯ ಎಸ್.ಎನ್.ಆರ್ ಆಸ್ಪತ್ರೆಯಲ್ಲಿ ಈಗಾಗಲೇ 200 ಬೆಡ್ ವ್ಯವಸ್ಥೆಯಿದ್ದು, ಇನ್ನೂ 100 ಬೆಡ್‌ಗಳ ವ್ಯವಸ್ಥೆ ಮಾಡಲಾಗುವುದು. ಹೆಚ್ಚಿನ ಪ್ರಕರಣ ಕಂಡು ಬಂದರೆ ಸಂಭ್ರಮ್ ಆಸ್ಪತ್ರೆಯಲ್ಲಿ 200 ಬೆಡ್, ಶ್ಯಾಮ್ ಆಸ್ಪತ್ರೆಯಲ್ಲಿ 150 ಬೆಡ್ ವ್ಯವಸ್ಥೆ ಮಾಡಿಕೊಳ್ಳಲಾಗುವುದು. ಚಿಕಿತ್ಸೆ ನೀಡಲು 5 ಫಿಜೀಷಿಯನ್‌ಗಳಿದ್ದು, ಪ್ರಕರಣ ಹೆಚ್ಚಾದರೆ ಖಾಸಗಿ ಆಸ್ಪತ್ರೆಗಳ ಫಿಜೀಷಿಯನ್‌ಗಳನ್ನು ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.
ಕೋವಿಡ್ 19 ಚಿಕಿತ್ಸೆ ನೀಡಲು ವೈದ್ಯರ 10 ತಂಡ ಇಟ್ಟುಕೊಳ್ಳಲಾಗುವುದು. ಜಿಲ್ಲೆಯಲ್ಲಿ 41 ಸಾವಿರ ಪಿಪಿಇ ಕಿಟ, 14,400 ಎನ್-95 ಮಾಸ್ಕ್ಗಳು, ಅಗತ್ಯ ಸಂಖ್ಯೆಯ ವೆಂಟಿಲೇಟರ್‌ಗಳು ಲಭ್ಯವಿವೆ. ಡಿಜಿಟಲ್ ನರ್ವ್ ಸೆಂಟರ್‌ನಲ್ಲಿ ವಾರ್ ರೂಂ ತೆರೆದಿದ್ದು, ಕೋವಿಡ್ ಸಂಬಂಧಿ ತ ಸಹಾಯ ವಾಣಿಗೆ ಕರೆ ಮಾಡಿ ಗೊಂದಲ ನಿವಾರಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಜಿಲ್ಲಾ ಶಸ್ತ್ರ ಚಿಕಿತ್ಸಕ ನಾರಾಯಣಸ್ವಾಮಿ ಮಾತನಾಡಿ, ಎಸ್.ಎನ್.ಆರ್ ಆಸ್ಪತ್ರೆಯಲ್ಲಿ ಈಗಾಗಲೇ 200 ಬೆಡ್‌ಗಳಿದ್ದು, ಇವುಗಳಲ್ಲಿ 90 ಬೆಡ್‌ಗಳು ಶಂಕಿತರಿಗೆ 70 ಬೆಡ್‌ಗಳು ಪಾಸಿಟಿವ್ ಪ್ರಕರಣಗಳು ಕಂಡು ಬಂದವರಿಗೆ ಉಳಿದ 40 ಬೆಡ್‌ಗಳನ್ನು ಐ.ಸಿ.ಯು ಬೆಡ್‌ಗಳಾಗಿ ಮೀಸಲಿಡಲಾಗಿದೆ. ಈ ಶುಕ್ರವಾರದ ವೇಳೆಗೆ 8 ಪ್ರಕರಣಗಳು ಗುಣಮುಖರಾಗಿ ಬಿಡುಗಡೆಯಾಗಲಿದ್ದಾರೆ ಎಂದು ಮಾಹಿತಿ ನೀಡಿದರು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಶಿವಸ್ವಾಮಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿ ಕಾರಿ ಡಾ.ವಿಜಯ್ ಕುಮಾರ್, ಜಿಲ್ಲಾ ಸರ್ವೇಕ್ಷಣಾ ಧಿಕಾರಿ ಡಾ.ಚಾರಿಣಿ, ಜಾಲಪ್ಪ ಆಸ್ಪತ್ರೆಯ ವೈದ್ಯಕೀಯ ಅ ಧೀಕ್ಷಕ ಮೊಹೀನುದ್ದೀನ್ ಅಜಿಂ ಉಪಸ್ಥಿತರಿದ್ದರು.