ಮೂಲ್ಕಿ: ನ.ಪಂ. ವ್ಯಾಪ್ತಿಯಲ್ಲಿ ಮಲೇರಿಯಾ ಮತ್ತು ಡೆಂಗ್ಯೂ ಕಾಯಿಲೆ ಪಸರಿಸಲು ಪೂರಕವಾದ ಪರಿಸರ ಕಾರಣವಾಗದ ಯಾವುದೇ ಸಂಸ್ಥೆ ಯಾ ವ್ಯಕ್ತಿಗಳ ಮೇಲೆ ಆರೋಗ್ಯದ ದೃಷ್ಟಿಯಿಂದ ಯಾವುದೇ ನಿರ್ದಾಕ್ಷಿಣ್ಯ ಕ್ರಮ ಜರಗಿಸುವಂತೆ ಶಾಸಕ ಉಮಾನಾಥ ಕೋಟ್ಯಾನ್ ಸೋಮವಾರ ಪಂ.ನಲ್ಲಿ ನಡೆದ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಮಳೆಗಾಲ ಸಮೀಪಿಸುತ್ತಿದೆ. ಮಾತ್ರವಲ್ಲ ಆಗಾಗ ಮಳೆ ಬರುತ್ತಿದೆ. ಈ ಸಂದರ್ಭ ವಿವಿಧೆಡೆ ನೀರು ನಿಲುಗಡೆಯಾಗಿ ಸೊಳ್ಳೆ ಉತ್ಪಾದನೆಗೊಂಡು ಮಲೇರಿಯಾ, ಡೆಂಗ್ಯೂವಿನಂತಹ ಕಾಯಿಲೆ ಹರಡುವ ಸಾಧ್ಯತೆ ಇದೆ. ಕೋವಿಡ್ ಭೀತಿ ಇರುವುದರಿಂದ ಜನ ಔಷಧ ತೆಗೆದುಕೊಳ್ಳಲು ಆಸ್ಪತ್ರೆ ಹೋಗದಿರುವ ಸಾಧ್ಯತೆ ಇದೆ. ಆದುದರಿಂದ ಜನ ಪ್ರತಿನಿಧಿಗಳು ಜನರ ಆರೋಗ್ಯದ ರಕ್ಷಣೆಯಲ್ಲಿ ನಗರ ಪಂಚಾಯತ್‌ನೊಂದಿಗೆ ಸಹಕರಿಸಬೇಕು ಎಂದರು.
ಕಾರ್ನಾಡು ಕೈಗಾರಿಕಾ ಪ್ರದೇಶದಲ್ಲಿ ಇರುವ ಆಸ್ಪತ್ರೆಯ ತ್ಯಾಜ್ಯ ಸುಡುವ ಕಾರ್ಖಾನೆಯಿಂದ ಪರಿಸರ ಮಾಲೀನಗೊಳ್ಳುತ್ತಿದೆ. ಇದನ್ನು ನಿಲ್ಲಿಸುವಂತೆ ದೂರು ಬಂದಿರುವುದರಿಂದ ಸೂಕ್ತ ಕ್ರಮ ಜರಗಿಸಲು ಶಾಸಕರು ಸೂಚಿಸಿದರು.
ತ್ಯಾಜ್ಯ: ನಿರ್ಲಕ್ಷ್ಯ ಸಲ್ಲದು
ಮೂಲ್ಕಿ ಕೆಲವು ಕಸ್ಟ್ರಕ್ಷನ್ ಸಂಸ್ಥೆಗಳ ಬಳಿ ನೀರು ಸಂಗ್ರಹವಾಗುವುದನ್ನು ತಡೆಗಟ್ಟುವಂತೆ ತಿಳಿಸಿದರೂ ನಿರ್ಲಕ್ಷ್ಯ ಉಂಟಾಗುತ್ತಿದೆ. ಕೆಲವು ಹೊಟೇಲುಗಳ ತ್ಯಾಜ್ಯ ಒಂದೆಡೆ ಸಂಗ್ರಹವಾಗುವುದನ್ನು ನಿಲ್ಲಿಸಲು ಪೂರಕವಾಗಿ ಹೊಟೇಲು ಮಾಲಕರ ಸಭೆಯನ್ನು ಕರೆಯುವಂತೆ ಶಾಸಕರು ಮುಖ್ಯಾಧಿಕಾರಿಗೆ ಸೂಚಿಸಿದರು.
ನ.ಪಂ.ಆಡಳಿತಾಧಿಕಾರಿ ಮತ್ತು ಮೂಲ್ಕಿ ತಹಶೀಲ್ದಾರ್ ಮಾಣಿಕ್ಯ ಎನ್, ಮುಖ್ಯಾಧಿಕಾರಿ ಪಿ. ಚಂದ್ರ ಪೂಜಾರಿ ಮಾತನಾಡಿದರು. ಆರೋಗ್ಯ ನಿರೀಕ್ಷಕಿ ಲಿಲ್ಲಿ ನಾಯರ್, ಎಂಜಿನಿಯರ್ ದಿವಾಕರ್, ಮಾಜಿ ಅಧ್ಯಕ್ಷ ಸುನೀಲ್ ಆಳ್ವ, ಸದಸ್ಯರಾದ ಶೈಲೇಶ್ ಕುಮಾರ್, ಪುತ್ತು ಬಾವಾ, ಯೋಗೀಶ್ ಕೋಟ್ಯಾನ್ ಮತ್ತಿತರರು ಉಪಸ್ಥಿತರಿದ್ದರು.