ಹೊಸದಿಲ್ಲಿ: ಕೋವಿಡ್ 19 ಪರೀಕ್ಷೆಯ ವರದಿ ಬರುವವರೆಗೂ ಕಾಯದೆ ಕೋವಿಡ್ 19 ಶಂಕಿತ ವ್ಯಕ್ತಿಗಳ ಮೃತದೇಹಗಳನ್ನು ಅವರ ಕುಟುಂಬ ಸದಸ್ಯರಿಗೆ ಹಸ್ತಾಂತರಿಸಬೇಕು ಎಂದು ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಆರೋಗ್ಯ ಸಚಿವಾಲಯ ಸೂಚಿಸಿದೆ.
ಆದರೆ ಮೃತದೇಹಗಳ ಅಂತ್ಯಕ್ರಿಯೆ ಮಾತ್ರ ಸರಕಾರದ ಮಾರ್ಗಸೂಚಿಯ ಅನ್ವಯವೇ ನೆರವೇರಬೇಕು ಎಂದೂ ಹೇಳಿದೆ.
ಪ್ರಯೋಗಾಲಯಗಳಿಂದ ಪರೀಕ್ಷೆಯ ವರದಿ ಬಂದಿಲ್ಲ ಎಂಬ ಕಾರಣಕ್ಕೆ ಮೃತದೇಹಗಳನ್ನು ಹಸ್ತಾಂತರಿಸದೆ ಸತಾಯಿಸುತ್ತಿರುವಂಥ ಘಟನೆಗಳು ವರದಿಯಾಗಿರುವ ಹಿನ್ನೆಲೆಯಲ್ಲಿ ಸಚಿವಾಲಯ ಈ ನಿರ್ದೇಶನ ನೀಡಿದೆ.
ಕೇಂದ್ರ ಆರೋಗ್ಯ ಸಚಿವಾಲಯದ ವೆಬ್‌ಸೈಟ್‌ನಲ್ಲಿರುವ “ಮೃತದೇಹಗಳ ನಿರ್ವಹಣೆಯ ಮಾರ್ಗಸೂಚಿ’ಯ ಅನ್ವಯವೇ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಿಕೊಂಡು ಅಂತ್ಯಸಂಸ್ಕಾರ ನಡೆಸಬೇಕು.
ಒಂದು ವೇಳೆ, ನಂತರ ಬಂದ ವರದಿಯಲ್ಲಿ ಪಾಸಿಟಿವ್ ಎಂದಿದ್ದರೆ, ಆ ವ್ಯಕ್ತಿಯ ಸಂಪರ್ಕಿತರನ್ನು ಪತ್ತೆ ಹಚ್ಚಿ, ಮುಂದಿನ ಪ್ರಕ್ರಿಯೆ ಕೈಗೊಳ್ಳಬೇಕು ಎಂದು ಆರೋಗ್ಯ ಸೇವೆಗಳ ಪ್ರಧಾನ ನಿರ್ದೇಶಕ ಡಾ| ರಾಜೀವ್ ಗರ್ಗ್ ರಾಜ್ಯಗಳಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.