Advertisement

ಕೋವಿಡ್ – 19 ಹೊಡೆತಕ್ಕೆ ಬೆಚ್ಚಿಬಿದ್ದ ಚಿತ್ರರಂಗ

10:07 AM Mar 21, 2020 | mahesh |

ಕೋವಿಡ್ – 19 ಎಂಬ ಹೆಮ್ಮಾರಿಯ ಹೊಡೆತಕ್ಕೆ ಕನ್ನಡ ಚಿತ್ರರಂಗ ಅಕ್ಷರಶಃ ಬೆಚ್ಚಿ ಬಿದ್ದಿದೆ. ಅದರಲ್ಲೂ ಈ ಗ್ಲಾಮರ್‌ ಫೀಲ್ಡ್‌ನಲ್ಲಿ ಕೆಲಸ ಮಾಡುವ ದಿನಗೂಲಿ ಕಾರ್ಮಿಕರೇ ಬಲಿಯಾಗುವಂತಾಗಿರುವುದು ಬೇಸರದ ವಿಷಯ. ಹೌದು, ಚಿತ್ರರಂಗದಲ್ಲಿ ಹೆಚ್ಚು ಹೊಡೆತ ಅನುಭವಿಸಿರೋದು ಮಾತ್ರ ಒಕ್ಕೂಟದಲ್ಲಿ ದಿನಗೂಲಿಗಳಾಗಿ ಕೆಲಸ ಮಾಡುವ ಕಾರ್ಮಿಕರು. ಜಾಗತೀಕರಣ, ಖಾಸಗೀಕರಣ ಬಂದಾಗಲೂ ಇದೇ ದಿನಗೂಲಿ ಕಾರ್ಮಿಕರು ತತ್ತರಿಸಿದ್ದರು. ಈಗ ಕೊರೊನಾ ಭೀತಿ ಎಲ್ಲಾ ಕ್ಷೇತ್ರದ ವ್ಯಾಪಾರ-ವಹಿವಾಟನ್ನೇ ಅಲುಗಾಡಿಸಿದೆ. ದೀಪದ ಕಳೆಗೆ ಕತ್ತಲು ಆವರಿಸಿದಂತೆ ದಿನಗೂಲಿ ನೌಕರರ ಬದುಕು ಮೂರಾಬಟ್ಟೆ ಆಗುವಂತಹ ಸ್ಥಿತಿ ತಲುಪಿದೆ. ಒಕ್ಕೂಟದಲ್ಲಿ ಒಪ್ಪತ್ತಿನ ಊಟಕ್ಕೂ ಪರದಾಡುವ ಕಾರ್ಮಿಕರಿದ್ದಾರೆ. ಅಂದಂದಿನ ಕೂಲಿ ಮಾಡಿದರಷ್ಟೇ ಅವರ ಹೊಟ್ಟೆಗೆ ಹಿಟ್ಟು ಎಂಬ ಪರಿಸ್ಥಿತಿಯೂ ಇದೆ. ಆದರೆ, ಚಿತ್ರೀಕರಣವೇ ಹದಿನೈದು ದಿನಗಳ ಕಾಲ ಸ್ಥಗಿತಗೊಂಡರೆ ಅವರ ಕುಟುಂಬ ನಿರ್ವಹಣೆಯ ಗತಿ ಏನು? ಅಷ್ಟಕ್ಕೂ ಸಮಸ್ಯೆ ನಿರ್ವಹಣೆ ಎಂಬುದು ಒಂದೆರೆಡು ದಿನಗಳ ಮಾತಂತೂ ಅಲ್ಲ. ಈ ಪರಿಸ್ಥಿತಿಯಿಂದ ಹೊರಬಂದು ಚೇತರಿಸಿಕೊಳ್ಳಲು ಸುಮಾರು ಮೂರು ತಿಂಗಳಾದರೂ ಬೇಕೇ ಬೇಕೆಂಬುದು ಸಿನಿಪಂಡಿತರ ಲೆಕ್ಕಾಚಾರ. ಹಾಗಾದರೆ, ದಿನಗೂಲಿ ನೌಕರರ ಬದುಕು-ಬವಣೆ, ಏನು, ಎಂತ ಇತ್ಯಾದಿ ಕುರಿತು ಒಂದು ವರದಿ.

Advertisement

ಕರ್ನಾಟಕ ಚಲನಚಿತ್ರ ಕಾರ್ಮಿಕರ ಒಕ್ಕೂಟದಲ್ಲಿ 3500 ಪ್ಲಸ್‌ ದಿನಗೂಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಆಲ್‌ ಇಂಡಿಯಾ ಫಿಲಂ ಫೆಡರೇಷನ್‌ ಮಾ.31 ರವರೆಗೂ ಚಿತ್ರೀಕರಣ ಸ್ಥಗಿತಗೊಳಿಸುವಂತೆ ಹೇಳಿರುವುದರಿಂದ ಚಿತ್ರರಂಗಕ್ಕೆ ದೊಡ್ಡ ಪೆಟ್ಟು ಬಿದ್ದಿದೆಯಾದರೂ, ದಿನಗೂಲಿ ಕಾರ್ಮಿಕರಿಗೇ ಹೆಚ್ಚು ಹೊಡೆತ ಬಿದ್ದಿದೆ. ಈ ನಿರ್ಧಾರದಿಂದ ಸಂಕಷ್ಟಕ್ಕೆ ಸಿಲುಕೋದು ದಿನಗೂಲಿ ಕಾರ್ಮಿಕರೇ ಹೊರತು ತಂತ್ರಜ್ಞರಂತೂ ಅಲ್ಲ. ಚಿತ್ರೀಕರಣ ಸಮಯದಲ್ಲಿ ದಿನಗೂಲಿ ನೌಕರರಿಲ್ಲದೆ ಯಾವ ಕೆಲಸವೂ ನಡೆಯಲ್ಲ. ಅಂದು ದುಡಿದು, ಅಂದಿನ ಹೊಟ್ಟೆ ತುಂಬಿಸಿಕೊಳ್ಳುವ ಮಂದಿಯೇ ಇಲ್ಲಿ ಹೆಚ್ಚು. ಹಾಗೆ ನೋಡಿದರೆ, ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಇಂತಹ ಪರಿಸ್ಥಿತಿ ಹಿಂದೆಂದೂ ಬಂದಿರಲಿಲ್ಲ. ಡಾ.ರಾಜಕುಮಾರ್‌ ಅಪಹರಣ ಸಂದರ್ಭದಲ್ಲಿ ಸ್ವಯಂ ಪ್ರೇರಿತವಾಗಿ ಚಿತ್ರೀಕರಣ ಬಂದ್‌ ಮಾಡಲಾಗಿತ್ತೇ ಹೊರತು, ಈ ರೀತಿಯ ಸಮಸ್ಯೆ ಎಂದಿಗೂ ಎದುರಾಗಿರಲಿಲ್ಲ. ಗೋಕಾಕ್‌ ಚಳವಳಿ, ಕಾವೇರಿ ಹೋರಾಟ ಹೀಗೆ ಒಂದೆರೆಡು ದಿನಗಳ ಬಂದ್‌ ಬಿಟ್ಟರೆ, ಸುದೀರ್ಘ‌ ಹದಿನೈದು ದಿನಗಳಿಗೂ ಹೆಚ್ಚು ಕಾಲ ಶೂಟಿಂಗ್‌ ನಿಲ್ಲಿಸುವ ಸಂದರ್ಭ ಒದಗಿ ಬಂದಿರಲಿಲ್ಲ. ಈಗ ಅದೂ ಎದುರಾಗಿ, ದಿನಗೂಲಿ ನೌಕರರ ಹೊಟ್ಟೆಗೇ ಸಂಚಕಾರ ಬಂದೊದಗಿದೆ. ಆದರೂ ಇದು ಅನಿವಾರ್ಯ. ಇಡೀ ಜಗತ್ತಿಗೆ ಆಗಿದ್ದು, ಇಲ್ಲೂ ಆಗಿದೆಯಷ್ಟೇ ಎನ್ನುತ್ತಲೇ ಪಾಲಿಗೆ ಬಂದಷ್ಟೇ ಸಮಸ್ಯೆ ಅಂತ ಸುಮ್ಮನಾಗಬೇಕಿದೆ.

ಕೊರೊನಾಗೆ ಪರಿಹಾರ ಸಿಗುತ್ತೋ ಇಲ್ಲವೋ ಗೊತ್ತಿಲ್ಲ. ಆದರೆ, ಚಿತ್ರರಂಗದಲ್ಲಿ ದುಡಿಯುವ ದಿನಗೂಲಿ ನೌಕರರ ಹಿತರಕ್ಷಣೆಗೆ ಕ್ರಮ ಕೈಗೊಳ್ಳಲು ಮನಸ್ಸುಗಳು ಮುಂದಾಗಬೇಕಿದೆ. ಈ ಹಿಂದೆ ಡಾ.ರಾಜಕುಮಾರ್‌ ಅಪಹರಣ ವೇಳೆ ಸ್ವಯಂ ಪ್ರೇರಿತವಾಗಿ ಚಿತ್ರೀಕರಣ ಬಂದ್‌ ಮಾಡಿದ್ದಾಗ, ಒಕ್ಕೂಟದ ಮೂಲಕ ನೌಕರರಿಗೆ ದಿನಸಿ ವಿತರಿಸಲಾಗಿತ್ತು. ಈಗಲೂ ಅಂಥದ್ದೊಂದು ಕೆಲಸಕ್ಕೆ ಒಕ್ಕೂಟ ಮುಂದಾಗುತ್ತಿದೆ ಎಂಬುದೇ ಖುಷಿಯ ವಿಷಯ. ಈ ಕುರಿತು ಮಾತನಾಡುವ ಒಕ್ಕೂಟ ಅಧ್ಯಕ್ಷ ಅಶೋಕ್‌, “ಇಂತಹ ಪರಿಸ್ಥಿತಿ ಇದೇ ಮೊದಲು. ಹಾಗಾಗಿ ದಿನಗೂಲಿ ನೌಕರರ ಕುಟುಂಬ ನಿರ್ವಹಣೆಗೆ ಒಕ್ಕೂಟ ಅಗತ್ಯ ಕ್ರಮ ಕೈಗೊಳ್ಳಲಿದೆ. ತುರ್ತು ಸಭೆ ಕರೆದು, ಕಾರ್ಮಿಕರಿಗೆ ದಿನಸಿ ವಿತರಣೆ ಸೇರಿದಂತೆ ಸಾಲದ ರೂಪದಲ್ಲಿ ಇಂತಿಷ್ಟು ಹಣವನ್ನು ಆಯಾ ಸಂಘಗಳ ಮೂಲಕ ಕೊಡಿಸುವ ಕೆಲಸ ಮಾಡಲಿದ್ದೇವೆ. ಚಿತ್ರೀಕರಣ ಶುರುವಾದ ಬಳಿಕ ಕೆಲಸ ಮಾಡಿ ಆ ಹಣವನ್ನು ಹಿಂದಿರುಗಿಸುವಂತೆ ವ್ಯವಸ್ಥೆ ಮಾಡುವ ಕುರಿತು ಯೋಚಿಸಲಾಗಿದೆ. ಒಕ್ಕೂಟದಲ್ಲಿ 3500 ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಒಬ್ಬರಿಗೆ ದಿನಕ್ಕೆ 400 ರುಪಾಯಿ ಕೂಲಿ ಸಿಗುತ್ತಿದೆ. ಇಷ್ಟು ಹಣದಿಂದ ಅವರ ಕುಟುಂಬ ನಿರ್ವಹಣೆ ಅಸಾಧ್ಯ. ಅಂತಹದರಲ್ಲಿ ಹೀಗೆ ಶೂಟಿಂಗ್‌ ನಿಂತರೆ, ಅವರ ಪರಿಸ್ಥಿತಿ ಏನಾಗಬೇಡ? ಹಿಂದೆ ಸಿಸಿಐ (ಕಾಂಪಿಟೇಷನ್‌ ಕಮಿಷನ್‌ ಆಫ್ ಇಂಡಿಯಾ) ಬಂದ ಮೇಲೆ ಕೆಲಸಗಳೇ ಕಮ್ಮಿಯಾಗಿವೆ. ಒಂದೂವರೆ ವರ್ಷ ಕೆಲಸ ಕಮ್ಮಿ ಇತ್ತು. ಇಂದು ಕಾರ್ಮಿಕರ ಪರಿಸ್ಥಿತಿ ಹೇಗಿದೆಯಂದರೆ, ಇಂದು ದುಡಿದರೆ ಮಾತ್ರ ಊಟ. ಇಲ್ಲವೆಂದರೆ ಇಲ್ಲ. ಅದರಲ್ಲೂ ಸಿನಿಮಾದಲ್ಲಿ ಅವರಿಗೆ ಕೆಲಸ ಸಿಗೋದು ತಿಂಗಳಿಗೆ ಹತ್ತು ದಿನವೋ ಅಥವಾ ಹದಿನೈದು ದಿನ ಮಾತ್ರ. ಕಾರ್ಮಿಕರ ನಿವೃತ್ತಿ ಜೀವನವಂತೂ ಘೋರವಾಗಿದೆ. ಔಷಧಿಗೂ ಕಾಸಿಲ್ಲದೆ ಪರದಾಡುತ್ತಿದ್ದಾರೆ. 3 ಅಥವಾ 4 ಸಾವಿರ ಮನೆ ಬಾಡಿಗೆ ಕಟ್ಟೋಕು ಒದ್ದಾಡುತ್ತಿದ್ದಾರೆ. ಈ ಹೊಡೆತದಿಂದ ನಿಜಕ್ಕೂ ದಿನಗೂಲಿ ಕಾರ್ಮಿಕರ ಬದುಕು ಹೀನಾಯವಾಗುತ್ತಿದೆ. ಸದ್ಯಕ್ಕೆ ಚೇತರಿಕೆ ಕಾಣೋಕೆ ಮೂರು ತಿಂಗಳಾದರೂ ಬೇಕು. ಕೊರೊನಾ ನಿಯಂತ್ರಣವಾದ ಮೇಲೆ ಚಿತ್ರೀಕರಣ ಶುರುವಾಗಬೇಕು, ಕಾರ್ಮಿಕರು ಕೆಲಸಕ್ಕೆ ಹೋಗಬೇಕು ನಂತರ ಸಮಸ್ಯೆ ಬಗೆಹರಿಸಿಕೊಳ್ಳಬೇಕು.

ಆಗೆಲ್ಲಾ ಬಂದ್‌ ಮಾಡಿದ ಸಂದರ್ಭದಲ್ಲಿ ಮಾನವೀಯ ಸ್ಪಂದನೆ ಇತ್ತು. ಈಗ ಮಾನವ ಸಂಕಷ್ಟ ಜಾಸ್ತಿಯಾಗಿದೆ’ ಎಂದು ಹೇಳುವ ಅಶೋಕ್‌, “ಚಿತ್ರೋದ್ಯಮವನ್ನೇ ನಂಬಿ ಬದುಕುತ್ತಿರುವ ಸಾವಿರಾರು ಕುಟುಂಬಗಳಿವೆ. ಈ ಅನಿವಾರ್ಯ ಪರಿಸ್ಥಿತಿಯಿಂದ ಅವರ ಬದುಕು ನಿರ್ವಹಣೆ ಕಷ್ಟವಾಗಿದೆ. ಸರ್ಕಾರ ಹಾಗು ಕಾರ್ಮಿಕ ಸಚಿವರನ್ನು ಭೇಟಿ ಮಾಡಿ ಮನದಟ್ಟು ಮಾಡುವ ಯೋಚನೆ ಇದೆ. ಅವರ ಕಷ್ಟವನ್ನು ನಾನು ಹತ್ತಿರದಿಂದ ನೋಡಿದ್ದೇನೆ. ನೋಡುತ್ತಿದ್ದೇನೆ. ಆದರೆ, ನಾನು ಅಸಹಾಯಕ. ಹಾಗಾಗಿ ನಾನೇ ಕಲಾವಿದರನ್ನು ಭೇಟಿ ಮಾಡಿ ಸಹಾಯ ಕೇಳ್ತೀನಿ. ಕಲಾವಿದರು ಎಂದಿಗೂ ಕಾರ್ಮಿಕರ ಕೈ ಬಿಟ್ಟಿಲ್ಲ. ಇಂತಹ ಸಂಕಷ್ಟ ಸಮಯದಲ್ಲಿ ಎಲ್ಲರೂ ಒಂದಾಗಬೇಕಿದೆ’ ಎಂಬುದು ಅಶೋಕ್‌ ಮಾತು.

ಈಗಾ­ಗಲೇ ಆಲ್‌ ಇಂಡಿಯಾ ಫಿಲಂ ಫೆಡರೇಶನ್‌ (ಎ.ಐ.ಎಫ್.ಎಫ್) ಮಾರ್ಚ್‌ 31ರವರೆಗೆ ಚಿತ್ರೀಕರಣ ನಡೆಸದಂತೆ ತೀರ್ಮಾನ ಕೈಗೊಂಡಿರುವುದರಿಂದ, ಈ ತಿಂಗಳ ಕೊನೆಯವರೆಗೆ ಚಿತ್ರೀಕರಣಕ್ಕೆ ಬ್ರೇಕ್‌ ಬಿದ್ದಿದೆ. ಇದಷ್ಟೇ ಅಲ್ಲ, ಪೋಸ್ಟ್‌ ಪ್ರೊಡಕ್ಷನ್‌ ಕೆಲಸಕ್ಕೂ ಕುತ್ತು ಬಂದಿದೆ. ಡಬ್ಬಿಂಗ್‌, ರೀ-ರೆಕಾರ್ಡಿಂಗ್‌, ಎಡಿಟಿಂಗ್‌, ಸಿ.ಜಿ, ಕಲರಿಂಗ್‌, ಡಿ.ಐ ಮತ್ತಿತರ ಕೆಲಸಗಳಿಗೂ ಅಗತ್ಯ ತಂತ್ರಜ್ಞರು ಬರದಂತಾಗಿದೆ. ಹೀಗಾಗಿ ಚಿತ್ರೋದ್ಯಮವನ್ನೇ ನಂಬಿಕೊಂಡಿರುವ ಸಾವಿರಾರು ಕಲಾವಿದರು, ತಂತ್ರಜ್ಞರು, ನಿರ್ಮಾಪಕರು, ನಿರ್ದೇಶಕರು, ವಿತರಕರು, ಪ್ರದರ್ಶಕರು ದಿಕ್ಕು ತೋಚದಂತಾಗಿದ್ದಾರೆ. ದಿನಕ್ಕೆ ಏನಿಲ್ಲವೆಂದರೂ 40 ರಿಂದ 50 ಸಿನಿಮಾಗಳ ಚಿತ್ರೀಕರಣ ನಡೆಯುತ್ತಿತ್ತು. ಆದರೆ, ಆ ಸಂಖ್ಯೆ ಈಗ ಬಹುತೇಕ ಕುಸಿದಿದೆ. ನೂರಾರು ರುಪಾಯಿ ಕೂಲಿ ಪಡೆಯೋ ಕಾರ್ಮಿಕರಂತೂ ಕಂಗಾಲಾಗಿದ್ದಾರೆ. ಇನ್ನು, ಕನ್ನಡ ಚಿತ್ರರಂಗದಲ್ಲಿ ಇನ್ನೂ ಒಂದು ಒಕ್ಕೂಟವಿದೆ. ಆ ಒಕ್ಕೂಟದಲ್ಲೂ ಸುಮಾರು 2300 ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಅಲ್ಲೂ ಸಹ ಇದೇ ಪಾಡಾಗಿದೆ. ಪರ್ಯಾಯ ವ್ಯವಸ್ಥೆಗೆ ಆ ಒಕ್ಕೂಟ ಸದ್ಯಕ್ಕೆ ಸಾಲದ ರೂಪದಲ್ಲಿ 2500 ರುಪಾಯಿ ವಿತರಿಸಲು ಮುಂದಾಗಿದೆ. ಈ ಪರಿಸ್ಥಿತಿಯಿಂದಾಗಿ ಕಾರ್ಮಿಕರು ಕೆಲಸವಿಲ್ಲದೆ, ನೂರಾರು ರುಪಾಯಿಗೆ ಸಾಲದ ಮೊರೆ ಹೋಗುವಂತಹ ಪರಿಸ್ಥಿತಿ ನಿರ್ಮಾಣ­ವಾಗಿದೆ. ಈ ಎಲ್ಲಾ ಸಮಸ್ಯೆಗಳಿಂದ ಚಿತ್ರರಂಗ ಹೊರಬರಬೇಕಾದರೆ, ಕನಿಷ್ಟ ಮೂರು ತಿಂಗಳಾದರೂ ಬೇಕೆಂಬುದು ಸಿನಿಮಾ ಮಂದಿಯ ಮಾತು.

Advertisement

ಅದೇನೆ ಇರಲಿ, ಸ್ಟಾರ್‌ ನಟರು, ನಿರ್ಮಾಪಕರು ಈ ಪರಿಸ್ಥಿತಿಯನ್ನು ಅರಿತು, ದಿನಗೂಲಿ ನೌಕರರ ಸಮಸ್ಯೆಗೆ ಸ್ಪಂದಿಸುವಂತಾದರೆ, ಅವಧಿ ಬಳಿಕ ಆದಷ್ಟು ಬೇಗ ಚಿತ್ರೀಕರಣ ಶುರು ಮಾಡಿದರೆ ಚಿತ್ರರಂಗ ಬೇಗ ಚೇತರಿಸಿಕೊಳ್ಳಬಹುದೇನೋ?

ವಿಜಯ್‌ ಭರಮಸಾಗರ

Advertisement

Udayavani is now on Telegram. Click here to join our channel and stay updated with the latest news.

Next