Advertisement

ಅಬುಧಾಬಿಯಿಂದ ಬಂದವರಿಗೆ ಕೋವಿಡ್ ; ಕೇರಳಕ್ಕೆ ವಾಪಸಾದವರಲ್ಲಿ ಸೋಂಕು

11:54 PM May 11, 2020 | Hari Prasad |

ಮುಂಬಯಿ/ಕೊಚ್ಚಿ/ಹೊಸದಿಲ್ಲಿ: ಏರ್‌ ಇಂಡಿಯಾದ ವಿಶೇಷ ವಿಮಾನಗಳಲ್ಲಿ ಗುರುವಾರ ಅಬುಧಾಬಿ ಮತ್ತು ದುಬಾಯಿಯಿಂದ ಕೇರಳಕ್ಕೆ ಮರಳಿದ್ದ 363 ಭಾರತೀಯರ ಪೈಕಿ ಮೂವರಿಗೆ ಸೋಂಕು ದೃಢಪಟ್ಟಿದೆ.

Advertisement

ಗುರುವಾರ ಕೇರಳಕ್ಕೆ ಬಂದಿಳಿದವರ ಪೈಕಿ ಇಬ್ಬರಿಗೆ ಶನಿವಾರ ಸೋಂಕು ದೃಢಪಟ್ಟಿತ್ತು. ರವಿವಾರ ಮತ್ತೆ ಮೂವರು ಸೋಂಕಿತರು ಪತ್ತೆಯಾಗಿರುವುದು ಈಗಾಗಲೇ ವೈರಸ್‌ ಹೊಡೆತಕ್ಕೆ ಸಿಲುಕಿ ನಲುಗಿರುವ ಕೇರಳ ರಾಜ್ಯ ಸರಕಾರದ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.

ಈ ನಡುವೆ ವಿವಿಧ ದೇಶಗಳಿಂದ ಮುಂಬೈಗೆ ಬಂದಿರುವ 572 ಭಾರತೀಯರನ್ನು ವಿಮಾನ ನಿಲ್ದಾಣ ಸಮೀಪದ ಹೋಟೆಲ್‌ಗ‌ಳಲ್ಲಿ ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ.

ದುಬಾಯಿ ಮತ್ತು ಅಬುಧಾಬಿಯಿಂದ ಹೊರಡುವ ವಲಸಿಗರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸದೆಯೇ ಕಳುಹಿಸಿಕೊಡಲಾಗುತ್ತಿದೆ. ಇದು ತುಂಬಾ ಅಪಾಯಕಾರಿ ಬೆಳವಣಿಗೆ ಎಂದು ಕೇಂದ್ರ ಸರಕಾರ ಆತಂಕ ವ್ಯಕ್ತಪಡಿಸಿದೆ.

ಯು.ಕೆ.ಯಲ್ಲಿ ಇದ್ದ 239 ಭಾರತೀಯರನ್ನು ಹೊತ್ತುತಂದ ಏರ್‌ ಇಂಡಿಯಾ ವಿಮಾನ, ಸಿಂಗಾಪುರದಿಂದ 243 ಮತ್ತು ಫಿಲಿಪ್ಪೀನ್ಸ್‌ ರಾಜಧಾನಿ ಮನಿಲಾದಿಂದ 241 ಭಾರತೀಯರನ್ನು ಕರೆತಂದಿರುವ ಎರಡು ವಿಮಾನಗಳು ಸಹ ಮುಂಬಯಿಗೆ ಮರಳಿವೆ.

Advertisement

ಈ ನಡುವೆ ಅಮೆರಿಕದಲ್ಲಿರುವ ಭಾರತೀಯರನ್ನು ಹೊತ್ತ ಎರಡು ವಿಮಾನಗಳು ನ್ಯೂ ಜೆರ್ಸಿಯಿಂದ ಮುಂಬಯಿ ಮತ್ತು ಅಹ್ಮದಾಬಾದ್‌ಗೆ ಹೊರಟಿವೆ.

ಬೆಂಗಳೂರಿಗೆ ವಿಮಾನ: ಯುನೈಟೆಡ್‌ ಕಿಂಗ್‌ಡಂನಲ್ಲಿದ್ದ ವಿದ್ಯಾರ್ಥಿಗಳು, ಪ್ರವಾಸಿಗರು ಹಾಗೂ ಭಾರತೀಯ ಪಾಸ್‌ಪೋರ್ಟ್‌ ಹೊಂದಿರುವ ಇತರರು ಸೇರಿ 323 ಭಾರತೀಯರನ್ನು ಒಳಗೊಂಡಿರುವ ಏರ್‌ ಇಂಡಿಯಾದ ಎರಡನೇ ವಿಮಾನ ಹೀಥ್ರೂ ವಿಮಾನ ನಿಲ್ದಾಣದಿಂದ  ಬೆಂಗಳೂರಿನತ್ತ ಹೊರಟಿದೆ. ಮಾ.13 ರಂದು ಆತ್ಮಹತ್ಯೆಗೆ ಶರಣಾಗಿದ್ದ 37 ವರ್ಷದ ಗದಿಗೆಪ್ಪಗೌಡ ಓಂಕಾರ ಗೌಡ ಪಾಟೀಲ್‌ ಎಂಬವರ ಶವವನ್ನು ಕೂಡ ವಿಮಾನದಲ್ಲಿ ಕಳುಹಿಸಿ ಕೊಡಲಾಗಿದೆ.

ಕೊಚ್ಚಿಗೆ ಬಂದ ಐಎನ್‌ಎಸ್‌ ಜಲಾಶ್ವ: ಮಾಲ್ಡೀವ್ಸ್‌ನಲ್ಲಿ ಸಿಲುಕಿದ್ದ 698 ಭಾರತೀಯರು ಐಎನ್‌ಎಸ್‌ ಜಲಾಶ್ವ ಯುದ್ಧನೌಕೆ ಮೂಲಕ ರವಿವಾರ ಬೆಳಗ್ಗೆ 9.30ಕ್ಕೆ ಕೊಚ್ಚಿ ತಲುಪಿದ್ದಾರೆ. ಹಡಗುಕಟ್ಟೆಗೆ ಇಳಿದ ಕೂಡಲೇ ಪ್ರಯಾಣಿಕ ರೊಬ್ಬರು ನಾವು ಸುರಕ್ಷಿತರಾಗಿದ್ದೇವೆ ಎಂದು ಉದ್ಗರಿಸಿದರು.

595 ಪುರುಷರು, 103 ಮಹಿಳೆಯರು ಸೇರಿ ಒಟ್ಟು 698 ಪ್ರಯಾಣಿಕರ ಪೈಕಿ 10 ವರ್ಷದೊಳಗಿನ 14 ಮಕ್ಕಳು, 19 ಗರ್ಭಿಣಿಯರಿದ್ದರು. ಇವರಲ್ಲಿ ಹೆಚ್ಚಿನ ಸಂಖ್ಯೆಯ ಪ್ರಯಾಣಿಕರು ಕೇರಳ ಮತ್ತು ತಮಿಳು ನಾಡು ಮೂಲದವರು. ಉಳಿದಂತೆ ಇತರ 18 ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳ ಜನರೂ ಭಾರತ ತಲುಪಿದರು.

Advertisement

Udayavani is now on Telegram. Click here to join our channel and stay updated with the latest news.

Next