ಕೋಲಾರ: ಕೋವಿಡ್ 19 ವೈರಸ್ ಹಿನ್ನೆಲೆಯಲ್ಲಿ ವಿಶ್ವವೇ ಬೆಚ್ಚಿಬೀಳುತ್ತಿದ್ದರೂ, ಏಷ್ಯಾದ 2ನೇ ಅತಿದೊಡ್ಡ ಮಾರುಕಟ್ಟೆ ಕೋಲಾರದ ಎಪಿಎಂಸಿಯಲ್ಲಿ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸದೇ ಇರುವುದು ಸಾಮಾನ್ಯವಾಗಿತ್ತು. ಇದರಿಂದ
ಎಚ್ಚೆತ್ತ ಅಧ್ಯಕ್ಷ ವಡಗೂರು ನಾಗರಾಜ್ ಶನಿವಾರ ಬೆಳಗ್ಗೆ ಲಾಠಿ ರುಚಿ ತೋರಿಸುವ ಮೂಲಕ ಮಾಸ್ಕ್ ಗಳನ್ನು ಧರಿಸುವಂತೆ ಎಚ್ಚರಿಕೆ ನೀಡಿದರು.
ಕೋವಿಡ್ 19 ವೈರಸ್ ಹರಡದಂತೆ ಅನೇಕ ಸಲಹೆ, ಸೂಚನೆಗಳನ್ನು ನೀಡಿದ್ದರೂ ಅದು ಪಾಲನೆಯಾಗಲೇ ಇಲ್ಲ. ಎಲ್ಲ ನಿಯಮಗಳನ್ನು ಗಾಳಿಗೆ ತೂರಿದ್ದ ಹಮಾಲಿಗಳು ಎಂದಿನಂತೆ ತಮ್ಮ ಕೆಲಸ ಕಾರ್ಯಗಳನ್ನು ಮುಂದುವರಿಸಿದ್ದರು. ಗುರುವಾರ ಸಂಜೆ ಜಿಲ್ಲಾಡಳಿತ ಭವನ ದಲ್ಲಿ ನಡೆದಿದ್ದ ಸಭೆಯಲ್ಲಿಯೂ ಈ ವಿಚಾರವನ್ನು ಪ್ರಸ್ತಾಪಿಸಿದ್ದ ಎಪಿಎಂಸಿ ಅಧ್ಯಕ್ಷ ವಡಗೂರು ಡಿ.ಎಲ್.ನಾಗರಾಜ್, ಮಾಸ್ಕ್ ಗಳನ್ನು ಹಾಕಿಕೊಳ್ಳುವಂತೆ ನಾವು ಎಷ್ಟು ಹೇಳಿದರೂ ಹಮಾಲಿಗಳು ನಮ್ಮ ಮಾತು ಕೇಳುತ್ತಿಲ್ಲ. ಪೊಲೀಸರು ಬಂದು ಲಾಠಿ ಚಾರ್ಜ್ ಆದರೂ ಮಾಡಿದರೆ ಅನುಕೂಲ ವಾಗುತ್ತದೆ ಎಂದು ತಿಳಿಸಿದರು.
ಶುಕ್ರವಾರ ಬೆಳಗ್ಗೆಯೂ ಹಮಾಲಿಗಳು, ತರಕಾರಿ ತಂದಿದ್ದ ಟೆಂಪೋ ಚಾಲಕರು ಸೇರಿದಂತೆ ಬಹುತೇಕ ಮಂದಿ ಮಾಸ್ಕ್ ಗಳನ್ನು ಹಾಕಿಕೊಂಡಿರಲಿಲ್ಲ. ಇದರಿಂದ ಆಕ್ರೋಶಗೊಂಡ ಅಧ್ಯಕ್ಷ ವಡಗೂರು ನಾಗರಾಜ್, ಸ್ವತಃ ತಾವೇ ಲಾಠಿ ಹಿಡಿದು ಮಾರುಕಟ್ಟೆಯ ಒಳಗ್ಗೆ ನುಗ್ಗಿದರು.
ಮಾಸ್ಕ್ ಹಾಕಿಕೊಳ್ಳದೆ ಓಡಾಡುತ್ತಿದ್ದವರಿಗೆ ಲಾಠಿ ಏಟು ಕೊಟ್ಟು ಮಾಸ್ಕ್ ಹಾಕಿಕೊಳ್ಳುವಂತೆ ಸೂಚಿಸಿದರು. ಈ ವೇಳೆ ಕೆಲವರ ಬನಿಯನ್‌ಗಳನ್ನು ತೆಗೆಯಿಸಿ, ಮಾಸ್ಕ್ನಂತೆ ಕಟ್ಟಿಸಿದರು. ಸುಮಾರು 1 ಗಂಟೆಗೂ ಹೆಚ್ಚು ಕಾಲ ಮಾರುಕಟ್ಟೆಯಲ್ಲಿ ಅಧ್ಯಕ್ಷರು ಲಾಠಿ ಹಿಡಿದು ಓಡಾಡಿ ಜಾಗೃತಿ ಮೂಡಿಸಿದರು.