ಮಂಗಳೂರು: ಜಿಲ್ಲೆಯ ವಿಟ್ಲ ಪೊಲೀಸ್ ಠಾಣೆಯ ಪೇದೆಯೋರ್ವರಿಗೆ ಸೋಂಕು ದೃಢವಾಗಿದ್ದು, ಜಿಲ್ಲೆಯ ಒಟ್ಟು ಸೋಂಕು ಪ್ರಕರಣಗಳು 58ಕ್ಕೆ ಏರಿಕೆಯಾಗಿದೆ.
ಕರೋಪಾಡಿ ಯುವಕ ಪರಿಚಿತರ ಕಾರಲ್ಲಿ ದೇರಳಕಟ್ಟೆ ಆಸ್ಪತ್ರೆಗೆ ಆಗಮಿಸಿ, ಅಲ್ಲಿಂದ ಆ್ಯಂಬುಲೆನ್ಸ್ ನಲ್ಲಿ ವಿಟ್ಲ ಕ್ವಾರಂಟೈನ್ ಕೇಂದ್ರಕ್ಕಾಗಮಿಸಿದ್ದರು. ಆದರೆ ಕೇಂದ್ರ ಬೀಗ ಹಾಕಿದ್ದರಿಂದ ಅವರು ವಿಟ್ಲ ಠಾಣೆಗೆ ತೆರಳಿ ಪೊಲೀಸರ ಸಹಾಯದೊಂದಿಗೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕ್ವಾರಂಟೈನ್ ಗೊಳಗಾಗಿದ್ದರು. ಬಳಿಕ ಕರೋಪಾಡಿ ಯುವಕನಿಗೆ ಕೋವಿಡ್-19 ಪಾಸಿಟಿವ್ ಆಗಿತ್ತು. ಸದ್ಯ ಪೊಲೀಸರ ಸ್ವಾಬ್ ಟೆಸ್ಟ್ ವೇಳೆ ಒರ್ವ ಪೊಲೀಸ್ ಪೇದೆಯಲ್ಲಿ ಸೋಂಕು ಪಾಸಿಟಿವ್ ಪತ್ತೆಯಾಗಿದೆ.
ಜಿಲ್ಲೆಯಲ್ಲಿ ಇದುವರೆಗೆ 57 ಸೋಂಕು ಪ್ರಕರಣಗಳಿದ್ದು, ಇಂದಿನ ಹೊಸ ಪ್ರಕರಣ ಕಾರಣ ಜಿಲ್ಲೆಯ ಒಟ್ಟು ಸೋಂಕಿತರ ಸಂಖ್ಯೆ 58 ಕ್ಕೆ ಏರಿಕೆಯಾಗಿದೆ.
ಕರಾವಳಿ ಜಿಲ್ಲೆಯಲ್ಲಿ ಇಂದು ಒಟ್ಟು 21 ಪ್ರಕರಣಗಳು ದೃಢವಾಗಿದೆ. ಉಡುಪಿಯಲ್ಲಿ 18, ಉತ್ತರ ಕನ್ನಡದಲ್ಲಿ ಎರಡು ಮತ್ತು ದಕ್ಷಿಣ ಕನ್ನಡದಲ್ಲಿ ಒಂದು ಪ್ರಕರಣ ಪತ್ತೆಯಾಗಿದೆ.
ರಾಜ್ಯದಲ್ಲಿ 1959 ಇದ್ದ ಸೋಂಕಿನ ಸಂಖ್ಯೆ ಇಂದಿನ 97 ಹೊಸ ಪ್ರಕರಣಗಳ ಕಾರಣದಿಂದ 2056ಕ್ಕೆ ಏರಿಕೆಯಾಗಿದೆ. ಇದುವರೆಗೆ ರಾಜ್ಯದಲ್ಲಿ634 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಒಟ್ಟು 42 ಜನರು ಸೋಂಕಿನ ಕಾರಣದಿಂದ ಸಾವನ್ನಪ್ಪಿದ್ದಾರೆ. ಇಬ್ಬರು ಸೋಂಕಿತರು ಕೋವಿಡ್ ಅಲ್ಲದ ಕಾರಣದಿಂದ ಮರಣಹೊಂದಿದ್ದಾರೆ.