ಉಡುಪಿ: ಲಾಕ್ ಡೌನ್ ಕಾರಣದಿಂದ ಚೆಕ್ ಪೋಸ್ಟ್ ಗಳಲ್ಲಿ ಕಾರ್ಯನಿರ್ವಹಿಸಿದ್ದ ಉಡುಪಿ ಜಿಲ್ಲೆಯ ಕಾರ್ಕಳ ಮತ್ತು ಅಜೆಕಾರಿನ ತಲಾ ಓರ್ವ ಪೊಲೀಸರಿಗೆ ಕೋವಿಡ್-19 ಸೋಂಕು ದೃಢವಾಗಿದ್ದು, ಎರಡೂ ಕಡೆಯ ಒಟ್ಟು ಪೊಲೀಸ್ ಠಾಣೆಗಳನ್ನು ಸೀಲ್ ಡೌನ್ ಮಾಡುವ ಸಾಧ್ಯತೆಯಿದೆ ಎನ್ನಲಾಗಿದೆ.
ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯ ಪೇದೆ ಮತ್ತು ಅಜೆಕಾರು ಠಾಣೆಯ ಎಎಸ್ ಐ ಗೆ ಸೋಂಕು ದೃಢಪಟ್ಟಿದೆ. ಇವರು ಚೆಕ್ ಪೋಸ್ಟ್ ಗಳಲ್ಲಿ, ಹೈವೇ ಪೆಟ್ರೋಲ್ ಗಳಲ್ಲಿ ಕಾರ್ಯ ನಿರ್ವಹಿಸಿದ್ದರು ಎನ್ನಲಾಗಿದೆ.
ಕಾರ್ಕಳದ ಕಾನ್ ಸ್ಟೇಬಲ್ ಅವರ ಪತ್ನಿ ಎಪ್ರಿಲ್ ತಿಂಗಳಲ್ಲಿ ಬಂಟ್ವಾಳ ಆಸ್ಪತ್ರೆಯಲ್ಲಿ ದಾಖಲಾಗಿದ್ದರು.ಈ ಪೇದೆ ಸಚ್ಚೇರಿಪೇಟೆ ಚೆಕ್ ಪೋಸ್ಟ್ ನಲ್ಲಿ ಅವರು ಕಾರ್ಯನಿರ್ವಹಿಸಿದ್ದರು ಎನ್ನಲಾಗಿದೆ.
ಪ್ರಾಥಮಿಕ ಸಂಪರ್ಕಕ್ಕೆ ಬಂದ ಎಲ್ಲಾ ಪೊಲೀಸ್ ಸಿಬ್ಬಂದಿಯನ್ನು ಪರೀಕ್ಷೆ ನಡೆಸಿ ಕ್ವಾರಂಟೈನ್ ಗೆ ವ್ಯವಸ್ಥೆ ಮಾಡಲಾಗುತ್ತಿದೆ.
ಈ ಬಗ್ಗೆ ಉದಯವಾಣಿಗೆ ಮಾಹಿತಿ ನೀಡಿದ ಎಸ್ ಪಿ ವಿಷ್ಣುವರ್ಧನ್, ಪ್ರಾಥಮಿಕ ಸಂಪರ್ಕಕ್ಕೆ ಬಂದ ಎಲ್ಲಾ ಪೊಲೀಸರನ್ನು ವೈದ್ಯಕೀಯ ಪರೀಕ್ಷೆ ಮಾಡಲಾಗುವದು. ಪೊಲೀಸ್ ಠಾಣೆ ಸೀಲ್ ಡೌನ್ ಮಾಡುವ ಬಗ್ಗೆ ಜಿಲ್ಲಾಧಿಕಾರಿ ಮತ್ತು ಆರೋಗ್ಯ ಅಧಿಕಾರಿಯವರು ನಿರ್ಧರಿಸುತ್ತಾರೆ ಎಂದಿದ್ದಾರೆ.
ಜನರನ್ನು ಕಾಯುವ ಆರಕ್ಷಕರಿಗೆ ಕೋವಿಡ್-19 ಸೋಂಕು ಕಾಣಿಸಿಕೊಂಡಿರುವ ಕಾರಣ ಜಿಲ್ಲೆಯ ಜನರು ಆತಂಕಕ್ಕೆ ಒಳಗಾಗಿದ್ದಾರೆ.