ಕಲಬುರಗಿ: ಜಿಲ್ಲೆಯಲ್ಲಿ ಶನಿವಾರ ಒಂದೇ ದಿನ ಎಂಟು ಜನರಿಗೆ ಕೋವಿಡ್-19 ಸೋಂಕು ದೃಢಪಟ್ಟಿದೆ.
ಇದರೊಂದಿಗೆ ದೇಶದಲ್ಲಿಯೇ ಕೋವಿಡ್ ಸಂಬಂಧಿ ಮೊದಲ ಸಾವು ದಾಖಲಾಗಿದ್ದ ಜಿಲ್ಲೆಯಲ್ಲಿ ಇದೀಗ ಕೋವಿಡ್ ಸೋಂಕು ಪೀಡಿತರ ಒಟ್ಟು 94ಕ್ಕೆ ಏರಿಕೆಯಾಗಿದೆ.
ಕೋವಿಡ್ ಸೋಂಕಿತ 35 ವರ್ಷದ ವ್ಯಕ್ತಿಯಿಂದಲೇ (ಪಿ-848) ಸಂಪರ್ಕದಿಂದಲೇ ಮೂವರು ಬಾಲಕಿಯರು ಸೇರಿ ಆರು ಜನರಿಗೆ ಈ ಸೋಂಕು ಹರಡಿದೆ.
33 ವರ್ಷದ ಮಹಿಳೆ (ಪಿ-1080), 15 ವರ್ಷದ ಬಾಲಕಿ (ಪಿ-1081), 14 ವರ್ಷದ ಬಾಲಕಿ (ಪಿ-1082), 55 ವರ್ಷದ ಪುರುಷ (ಪಿ-1083), 60 ವರ್ಷದ ವೃದ್ಧ (ಪಿ-1086) ಹಾಗೂ 10 ವರ್ಷದ ಬಾಲಕಿ (ಪಿ-1087) ಸೇರಿದಂತೆ ಒಟ್ಟು ಆರು ಜನರಿಗೆ ಸೋಂಕು ಖಚಿತವಾಗಿದೆ.
ಸೋಂಕು ದೃಢಪಡುವ ಮುನ್ನ ಪಿ-848ನಿಗೆ ಚಿಕಿತ್ಸೆ ನೀಡಿದ್ದ ಖಾಸಗಿ ವೈದ್ಯ ಹಾಗೂ ಓರ್ವ 30 ವರ್ಷದ ಮಹಿಳೆಗೆ ಸೋಂಕು ವ್ಯಾಪಿಸಿತ್ತು. ಇದೀಗ ಆರು ಜನ ಕುಟುಂಬ ಸದಸ್ಯರಿಗೂ ಈ ಸೋಂಕು ಕಾಣಿಸಿಕೊಂಡಿರುವುದು ಜಿಲ್ಲೆಯ ಜನರಲ್ಲಿ ಕೋವಿಡ್ ಭೀತಿ ಹೆಚ್ಚಲು ಕಾರಣವಾಗಿದೆ.
ಕಂಟೈನ್ಮೆಂಟ್ ಪ್ರದೇಶದ ಸಂಪರ್ಕದಿಂದ ಮೇ 11ರಂದು ಮೃತಪಟ್ಟ 60 ವರ್ಷದ ವೃದ್ಧನ (ಪಿ-927) ಸಂಪರ್ಕದಿಂದಲೂ 50 ವರ್ಷದ ಮಹಿಳೆ (ಪಿ-1085)ಗೆ ಸೋಂಕು ಕಾಣಿಸಿಕೊಂಡಿದೆ.
ಮತ್ತೊಂದು ಪ್ರಕರಣದಲ್ಲಿ ಮುಂಬೈನಿಂದ ಮರಳಿದ 30 ವರ್ಷದ ಮಹಿಳೆಗೆ (ಪಿ-1084) ಸೋಂಕು ಕಾಣಿಸಿಕೊಂಡಿದೆ. ಚಿತ್ತಾಪುರ ತಾಲೂಕಿನ ಈ ಮಹಿಳೆ ಮೇ 11ರಂದು ಶ್ರಮಿಕ್ ರೈಲು ಮೂಲಕ ಜಿಲ್ಲೆಗೆ ಆಗಮಿಸಿದ್ದರು.