Advertisement

ಹೆಚ್ಚುತ್ತಿದೆ ಕೋವಿಡ್ 19 ಸೋಂಕು ಪ್ರಕರಣ ಬೇಜವಾಬ್ದಾರಿಯ ಪರಮಾವಧಿ

02:02 AM Jul 31, 2020 | Hari Prasad |

ಭಾರತದಲ್ಲಿ ಕೋವಿಡ್‌-19ನ ಹಾವಳಿ ತಗ್ಗುವ ಸೂಚನೆಯೇ ಸಿಗುತ್ತಿಲ್ಲ.

Advertisement

ದಿನಗಳೆದಂತೆ ಪ್ರಕರಣಗಳ ಸಂಖ್ಯೆ ವಿಪರೀತ ಏರುತ್ತಿದೆ.

ಈಗ ದೇಶದಲ್ಲಿ 24 ಗಂಟೆ ಅವಧಿಯಲ್ಲಿ 52 ಸಾವಿರಕ್ಕೂ ಅಧಿಕ ಪ್ರಕರಣಗಳು ಪತ್ತೆಯಾಗುತ್ತಿವೆ. ಜುಲೈ 23ರಿಂದಂತೂ ನಿತ್ಯ ಪ್ರಕರಣಗಳ ಸಂಖ್ಯೆ 45 ಸಾವಿರಕ್ಕೂ ಅಧಿಕ ದಾಖಲಾಗುತ್ತಲೇ ಬಂದಿದೆ.

ನಿತ್ಯವೂ ಇಷ್ಟೊಂದು ಪ್ರಕರಣಗಳು ಪತ್ತೆಯಾಗುತ್ತಿವೆ ಎಂದರೆ, ಇನ್ನೂ ಪರೀಕ್ಷೆಗೊಳಪಡದ ಸೋಂಕಿತರ ಸಂಖ್ಯೆ ಅಪಾರವಾಗಿದೆ ಎಂದೇ ಅರ್ಥ.

ಈಗಾಗಲೇ ಒಟ್ಟು ಸೋಂಕಿತರಲ್ಲಿ 64 ಪ್ರತಿಶತ ಜನ, ಅಂದರೆ, 10 ಲಕ್ಷಕ್ಕೂ ಅಧಿಕ ಮಂದಿ ಗುಣಮುಖರಾಗಿದ್ದಾರೆ ಎನ್ನುವುದೇನೋ ಸರಿ. ಆದರೆ, ನಿತ್ಯ ಸೋಂಕಿತರ ಸಂಖ್ಯೆಯಲ್ಲಿ ಇಳಿಕೆಯಾಗದಿದ್ದರೆ, ಸಮಸ್ಯೆ ಜಟಿಲಗೊಳ್ಳುತ್ತಲೇ ಹೋಗುತ್ತದೆ ಎನ್ನುವುದನ್ನು ಮರೆಯುವಂತಿಲ್ಲ. ಆದರೆ, ಸದ್ಯದ ಸ್ಥಿತಿಯನ್ನು ನೋಡಿದಾಗ, ಪರಿಸ್ಥಿತಿ ತಹಬಂದಿಗೆ ಬರುವ ಸಾಧ್ಯತೆಗಳಂತೂ ದೂರದಲ್ಲೂ ಕಾಣಿಸುತ್ತಿಲ್ಲ.

Advertisement

ರಾಜ್ಯದ ವಿಷಯವನ್ನೇ ನೋಡುವುದಾದರೆ, ಕರ್ನಾಟಕವೀಗ ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲಿ ದೇಶದಲ್ಲಿ ಎರಡನೇ ಸ್ಥಾನದಲ್ಲಿದೆ. ಬೆಂಗಳೂರು ನಗರವೊಂದರಲ್ಲೇ ಗುರುವಾರದ ವೇಳೆಗೆ 36 ಸಾವಿರಕ್ಕೂ ಅಧಿಕ ಸಕ್ರಿಯ ಪ್ರಕರಣಗಳು ದಾಖಲಾಗಿವೆ. ಪರಿಸ್ಥಿತಿ ಹೀಗೆ ಏಕಾಏಕಿ ಬಿಗಡಾಯಿಸಿರುವಾಗಲೇ, ರೋಗದ ಕುರಿತ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಜನರಲ್ಲಿ ಅಸಾಧಾರಣ ಅಸಡ್ಡೆ ಎದ್ದು ಕಾಣಲಾರಂಭಿಸಿದೆ.

ಬೆಂಗಳೂರೆಂದಷ್ಟೇ ಅಲ್ಲ, ಪ್ರತಿ ಊರಿನಲ್ಲೂ ಇಂಥದ್ದೇ ಚಿತ್ರಣವಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳ ಬೇಕು ಎನ್ನುವುದು ನೆಪಮಾತ್ರಕ್ಕೆ, ಮಾಸ್ಕ್ ಧರಿಸುವುದು ಪೊಲೀಸರ ಭಯಕ್ಕೆ ಎಂಬಂತಾಗಿದೆ. ನಿಜ, ಕೋವಿಡ್ 19 ಮಾರಣಾಂತಿಕವಲ್ಲ ಎನ್ನುವುದು ಸತ್ಯವೇ ಆದರೂ, ರಾಜ್ಯದಲ್ಲಿ ಕೋವಿಡ್‌ ಮರಣ ದರ 2 ಪ್ರತಿಶತದಷ್ಟಿದೆಯಾದರೂ, ಹಾಗೆಂದು ಇದಕ್ಕೆ ಅಸಡ್ಡೆಯೇ ಉತ್ತರವಾಗಬಾರದಲ್ಲವೇ? ಮರಣ ದರ ಕಡಿಮೆ ಇದೆ ಎಂದರೂ, ಇದರಿಂದಾಗಿ 2 ಸಾವಿರಕ್ಕೂ ಅಧಿಕ ಜನ ರಾಜ್ಯದಲ್ಲಿ ಈಗಾಗಲೇ ಪ್ರಾಣ ಕಳೆದುಕೊಂಡಿದ್ದಾರೆ. ಪ್ರತಿಯೊಂದು ಜೀವವೂ ಅಮೂಲ್ಯವೇ ಅಲ್ಲವೇ?

ಕೋವಿಡ್‌ ಆರೋಗ್ಯಯುತ ವ್ಯಕ್ತಿಯ ಮೇಲೆ ಅಷ್ಟಾಗಿ ವ್ಯತಿರಿಕ್ತ ಪರಿಣಾಮ ತೋರುವುದಿಲ್ಲ ಎಂದಾಕ್ಷಣ, ಅದರಿಂದ ಬೇರೆಯವರಿಗೆ ಅಪಾಯವೇ ಆಗುವುದಿಲ್ಲ ಎಂದರ್ಥವೇ. ಅನೇಕ ಕುಟುಂಬಗಳಲ್ಲಿ ವಯಸ್ಸಾದವರಿರುತ್ತಾರೆ, ಹೃದ್ರೋಗ, ಶ್ವಾಸಕೋಶ ಸಂಬಂಧಿ ತೊಂದರೆ, ಅಧಿಕ ಶುಗರ್‌ನಂಥ ಸಮಸ್ಯೆಗಳಿಂದ ಬಳಲುವವರು ಇರುತ್ತಾರೆ. ಅಂಥವರ ಕಾಳಜಿ ಮಾಡುವ ಬೃಹತ್‌ ಜವಾಬ್ದಾರಿ ಸಮಾಜದ ಮೇಲಿದೆ.

ನಾಲ್ಕು ಜನರಿರುವ ಕುಟುಂಬದಲ್ಲಿ, ಮೂರು ಜನ ತ್ವರಿತವಾಗಿ ಚೇತರಿಸಿಕೊಂಡು, ಒಬ್ಬರಿಗೆ ರೋಗ ಮಾರಣಾಂತಿಕವಾದರೂ ಅದು ನೋವಿನ ವಿಷಯವಲ್ಲವೇ? ನನಗೇನೂ ಆಗುವುದಿಲ್ಲ ಎಂದು ಅನೇಕರು ನಿರ್ವಿಘ್ನವಾಗಿ ಓಡಾಡುತ್ತಿದ್ದಾರೆ. ಅವರಿಗೆ ಸೋಂಕು ತಗಲಿದರೂ ಏನೂ ಆಗದೇ ಇರಬಹುದು, ಆದರೆ ಅವರಿಂದಾಗಿ ಆರೋಗ್ಯ ಸಮಸ್ಯೆಗಳಿರುವ ಇನ್ನೊಬ್ಬರಿಗೆ ಈ ರೋಗ ಹರಡಿದರೆ?

ನಿರ್ಬಂಧಗಳು ಸಡಿಲವಾಗಿವೆ ಎಂದಾಕ್ಷಣ, ರೋಗದ ಅಪಾಯ ತಗ್ಗಿದೆ ಎಂದರ್ಥವಲ್ಲ. ಎಲ್ಲರೂ ನಿರ್ವಿಘ್ನವಾಗಿ ಅಡ್ಡಾಡುತ್ತಿದ್ದಾರೆ ಎಂದಾಕ್ಷಣ, ಸಾಂಕ್ರಾಮಿಕದ ಅಪಾಯ ದೂರವಾಗಿದೆ ಎಂದರ್ಥವಲ್ಲ. ನಿರ್ಬಂಧ ಸಡಿಲಿಕೆಗಳು ಆರ್ಥಿಕ ಯಂತ್ರಕ್ಕೆ ಮರುಚಾಲನೆ ಕೊಡುವುದಕ್ಕಾಗಿ ತೆಗೆದುಕೊಳ್ಳಲಾದ ಕ್ರಮವಷ್ಟೇ ಎನ್ನುವುದು ನೆನಪಿರಲಿ. ಈಗ ಜಾಗತಿಕ ಹಾಟ್‌ಸ್ಪಾಟ್‌ಗಳಲ್ಲಿ ಭಾರತ ಮೂರನೇ ಸ್ಥಾನದಲ್ಲಿದೆ. ರೋಗದ ಕುರಿತು ಅಸಡ್ಡೆ ಹೀಗೆಯೇ ಮುಂದುವರಿದರೆ, ಮುಂದಿನ ದಿನಗಳಲ್ಲಿ ಪಶ್ಚಾತ್ತಾಪ ಪಡಬೇಕಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next