ಬೆಂಗಳೂರು: ನಗರದ ಪೊಲೀಸ್ ಸಿಬ್ಬಂದಿಗೆ ಕೋವಿಡ್ 19 ಕಂಟಕವಾಗಿ ಪರಿಣಮಿಸಿದ್ದು ಶುಕ್ರವಾರವೂ ಇಬ್ಬರು ಮುಖ್ಯ ಪೇದೆಗಳಲ್ಲಿ ಕೋವಿಡ್ 19 ಸೋಂಕು ದೃಢಪಟ್ಟಿದೆ. ಇದರೊಂದಿಗೆ ನಗರ ವಿಭಾಗದಲ್ಲಿ 38 ಮಂದಿ ಸಿಬ್ಬಂದಿಗೆ ಸೋಂಕು ದೃಢಪಟ್ಟಂತಾಗಿದೆ. ಕಬ್ಬನ್ ಪಾರ್ಕ್ ಠಾಣೆಯ 32 ವರ್ಷದ ಮುಖ್ಯ ಪೇದೆ, ಅಶೋಕ ನಗರ ಸಂಚಾರ ಠಾಣೆ 40 ವರ್ಷ ವಯೋಮಾನದ ಮುಖ್ಯ ಪೇದೆಗೆ ಸೋಂಕು ದೃಢಪಟ್ಟಿದೆ.
ಕಬ್ಬನ್‌ಪಾರ್ಕ್ ಠಾಣೆ ಮುಖ್ಯ ಪೇದೆಗೆ 3 ದಿನಗಳ ಹಿಂದೆ ಕೋವಿಡ್ 19 ಪರೀಕ್ಷೆ ನಡೆಸಿದ್ದು ಶುಕ್ರವಾರ ವರದಿಯಲ್ಲಿ ಪಾಸಿಟಿವ್ ಬಂದಿದೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಪ್ರಾಥಮಿಕ ಸಂಪರ್ಕದಲ್ಲಿ 7 ಜನರಿದ್ದು ಅವರನ್ನು ಕ್ವಾರಂಟೈನ್ ಮಾಡಲು ಕ್ರಮ ವಹಿಸಲಾಗಿದೆ. ಶನಿವಾರ ಠಾಣೆಯನ್ನು ಸೀಲ್ ಡೌನ್ ಮಾಡಲಾಗುತ್ತದೆ.
ಅಶೋಕನಗರ ಸಂಚಾರ ಠಾಣೆ ಪೇದೆಯನ್ನು ಆಸ್ಪತ್ರೆಗೆ ದಾಖಲಿಸಿದ್ದು, ಅವರ ಸಂಪರ್ಕದಲ್ಲಿದ್ದರನ್ನು ಕ್ವಾರಂಟೈನ್ ಮಾಡಲಾಗುತ್ತದೆ. ಸೋಂಕಿತ ಪೇದೆ ಕೆಲದಿನ ರಜೆಯಲ್ಲಿದ್ದರು ಎಂದು ಗೊತ್ತಾಗಿದೆ. ಹೀಗಾಗಿ ಅವರ ಪ್ರಾಥಮಿಕ ಸಂಪರ್ಕದ ಮಾಹಿತಿ ಕಲೆ ಹಾಕುವುದು ಸೇರಿ ಮುಂದಿನ ಕ್ರಮಗಳನ್ನು ಪಾಲಿಕೆ ಕೈಗೊಳ್ಳಲಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
ಧೈರ್ಯ ಕಳೆದುಕೊಳ್ಳಬೇಡಿ: ಭಾಸ್ಕರ್‌ರಾವ್!: ಪೊಲೀಸ್ ಸಿಬ್ಬಂದಿ ಆದಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡು ಕಾರ್ಯ ನಿರ್ವಹಿಸಬೇಕು. ಧೈರ್ಯ ಕಳೆದುಕೊಳ್ಳಬಾರದು. ಸರ್ಕಾರ ಪೊಲೀಸರ ಬೆಂಗಾವಲಿಗಿದೆ. ಸೋಂಕಿತ ಸಿಬ್ಬಂದಿ, ಕ್ವಾರಂಟೈನ್‌ನಲ್ಲಿರುವ ಸಿಬ್ಬಂದಿಗೆ ಉತ್ತಮ ಸೌಲಭ್ಯ ಕಲ್ಪಿಸಲಾಗುತ್ತಿದೆ ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್‌ರಾವ್ ತಿಳಿಸಿದ್ದಾರೆ.
ಕೋವಿಡ್ ನಿಯಂತ್ರಣದಲ್ಲಿ ತೊಡಗಿದ ಸಿಬ್ಬಂದಿಗೆ 50 ಲಕ್ಷ ರೂ. ವಿಮೆ ಸೌಲಭ್ಯ ಒದಗಿಸಲು ಕೇಂದ್ರ ಸರ್ಕಾರ ಭರವಸೆ ನೀಡಿದೆ. ಅದನ್ನು ಆಧರಿಸಿ ಎಲ್ಲಾ ಸಿಬ್ಬಂದಿಗೂ ವಿಮೆ ಸೌಲಭ್ಯ ದೊರಕಿಸುವ ಪ್ರಯತ್ನ ಮಾಡಲಾಗುತ್ತಿದೆ. ಈ ಸಂಬಂಧ ಸರ್ಕಾರಕ್ಕೆ ಪತ್ರ ಬರೆದಿದ್ದೇವೆಂದರು.