ಮಂಗಳೂರು:ಕೋವಿಡ್-19 ಬಾಧೆ ಹಿನ್ನೆಲೆಯಲ್ಲಿ ಮಾಸ್ಕ್ ಧರಿಸುವುದನ್ನು ಪ್ರೇರೇಪಿಸುವ ನಿಟ್ಟಿನಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ 300ಕ್ಕೂ ಹೆಚ್ಚು ಪೆಟ್ರೋಲ್ ಬಂಕ್‌ಗಳಲ್ಲಿ “ನೋ ಮಾಸ್ಕ್ ನೋ ಪ್ಯುಯೆಲ್’ ಅಭಿಯಾನ ಆರಂಭವಾಗಿದೆ. ಅದರಂತೆ ಮಾಸ್ಕ್ ಧರಿಸಿ ಬಂದವರಿಗಷ್ಟೇ ಪೆಟ್ರೋಲ್, ಡೀಸೆಲ್ ಸಿಗಲಿದೆ.
ಕೋವಿಡ್-19 ಆತಂಕ ದಿನದಿಂದ ದಿನಕ್ಕೆ ಹೆಚ್ಚು ತ್ತಿದ್ದರೂ ಕೆಲವರು ಈಗಲೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಧರಿಸುವುದಕ್ಕೆ ಅಸಡ್ಡೆ ತೋರುತ್ತಿದ್ದಾರೆ. ಅಂತಹವರಲ್ಲಿ ಜಾಗೃತಿ ಮೂಡಿಸುವುದು ಇದರ ಹಿಂದಿನ ಉದ್ದೇಶ. ಅಖೀಲ ಭಾರತ ಪೆಟ್ರೋಲ್ ವರ್ತಕರ ಸಂಘ, ಕರ್ನಾಟಕ ಪೆಟ್ರೋಲ್ ವರ್ತಕರ ಸಂಘ ಮತ್ತು ದ.ಕ. ಹಾಗೂ ಉಡುಪಿ ಜಿಲ್ಲಾ ಪೆಟ್ರೋಲ್ ವರ್ತಕರ ಸಂಘ ಜಂಟಿಯಾಗಿ “ನೋ ಮಾಸ್ಕ್ ನೋ ಪ್ಯುಯೆಲ್’ ಅಭಿಯಾನ ಆಯೋಜಿಸಿವೆ.
ಉಭಯ ಜಿಲ್ಲೆಗಳಲ್ಲಿ ಸುಮಾರು 3,500ಕ್ಕೂ ಹೆಚ್ಚು ಸಿಬಂದಿ ಪೆಟ್ರೋಲ್ ಬಂಕ್‌ಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಮಾಸ್ಕ್ ಮುಂತಾದ ಸುರಕ್ಷಾ ಸೌಲಭ್ಯಗಳನ್ನು ಕಲ್ಪಿಸಲಾಗಿದ್ದರೂ ಎಲ್ಲೆಲ್ಲಿಂದಲೋ ಬರುವ ಹಲವು ಗ್ರಾಹಕರು ಮಾಸ್ಕ್ ಧರಿಸದೇ ಇರುವುದರಿಂದ ಸಿಬಂದಿ ಭಯದಿಂದಲೇ ಕೆಲಸ ನಿರ್ವಹಿಸಬೇಕಾಗುತ್ತದೆ. ಆದ್ದರಿಂದ ಗ್ರಾಹಕರು ಇನ್ನು ಮುಂದೆ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡು ಇಂಧನ ಪಡೆಯಬಹುದು.
ಮಾರಾಟ ಕುಸಿತ
ಲಾಕ್‌ಡೌನ್‌ನಿಂದ ಸರಾಸರಿ ಶೇ. 70ರಷ್ಟು ಡೀಸೆಲ್ ಮತ್ತು ಶೇ. 40ರಷ್ಟು ಪೆಟ್ರೋಲ್ ಮಾರಾಟ ಕುಸಿತಗೊಂಡಿದೆ ಎಂದು ವರ್ತಕರ ಸಂಘದ ಪ್ರಮುಖರು ಹೇಳುತ್ತಾರೆ.
ಮಾಸ್ಕ್ ಧರಿಸುವುದಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ “ನೋ ಮಾಸ್ಕ್ ನೋ ಪ್ಯುಯೆಲ್’ ಅಭಿಯಾನ ಆರಂಭಿಸಿದ್ದೇವೆ. ಬಂಕ್ ಸಿಬಂದಿಯ ಯೋಗಕ್ಷೇಮವೂ ನಮಗೆ ಅಗತ್ಯ. ಮಾಸ್ಕ್ ದಾರಿ ಗ್ರಾಹಕರಿಗಷ್ಟೇ ಇಂಧನ ಸಿಗಲಿದೆ; ಧರಿಸದೆ ಬಂದವರನ್ನು ವಾಪಸ್ ಕಳುಹಿಸಲಾಗುತ್ತದೆ.
– ಪಿ. ವಾಮನ ಪೈ, ಅಧ್ಯಕ್ಷರು, ದ.ಕ. ಮತ್ತು ಉಡುಪಿ ಜಿಲ್ಲಾ ಪೆಟ್ರೋಲಿಯಂ ವರ್ತಕರ ಸಂಘ