ಲಕ್ನೋ:ದೇಶದಲ್ಲಿ ಕೋವಿಡ್ ಸೋಂಕು ಪ್ರಕರಣ ಸ್ಫೋಟಗೊಂಡಿದ್ದು, ಏತನ್ಮಧ್ಯೆ ಉತ್ತರಪ್ರದೇಶ ಸರಕಾರ ಕೋವಿಡ್ ವೈರಸ್ ಅನ್ನು ನಿಗ್ರಹಿಸಲು ಮುಂದಾಗಿದ್ದು, ರಾಜ್ಯಾದ್ಯಂತ ಕೋವಿಡ್ ಸೋಂಕಿತರಿಗೆ ರೆಮ್ಡಿಸಿವಿರ್ ಚುಚ್ಚುಮದ್ದನ್ನು ಉಚಿತವಾಗಿ ನೀಡಲು ನಿರ್ಧರಿಸಿದೆ.
ಇದನ್ನೂ ಓದಿ:ಐಪಿಎಲ್ ನಲ್ಲಿ ಆಡುತ್ತಿರುವ ತನ್ನ ದೇಶದ ಆಟಗಾರರಿಗೆ ಶಾಕ್ ನೀಡಿದ ಆಸೀಸ್ ಸರ್ಕಾರ!
ರಾಜ್ಯದ ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾಗಿರುವ ಕೋವಿಡ್ 19 ರೋಗಿಗಳಿಗೆ ಉಚಿತವಾಗಿ ರೆಮ್ಡಿಸಿವಿರ್ ಇಂಜೆಕ್ಷನ್ ಅನ್ನು ನೀಡುವುದಾಗಿ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಂಗಳವಾರ(ಏಪ್ರಿಲ್ 27) ತಿಳಿಸಿದ್ದಾರೆ.
ಸರಕಾರಿ ಸ್ವಾಮಿತ್ವದ ಆಸ್ಪತ್ರೆಗಳಲ್ಲಿ ರೆಮ್ಡಿಸಿವಿರ್ ಇಂಜೆಕ್ಷನ್ ನೀಡಲು ವ್ಯವಸ್ಥೆ ಕಲ್ಪಿಸುವುದಾಗಿ ಉತ್ತರಪ್ರದೇಶ ಸರಕಾರ ತಿಳಿಸಿದ್ದು, ಖಾಸಗಿ ಆಸ್ಪತ್ರೆಗಳು ರೆಮ್ಡಿಸಿವಿರ್ ಅನ್ನು ಕಂಪನಿ ಮತ್ತು ಮಾರುಕಟ್ಟೆಯಿಂದ ಖರೀದಿಸಲಿದೆ ಎಂದು ತಿಳಿಸಿದೆ.
ಒಂದು ವೇಳೆ ರೆಮ್ಡಿಸಿವಿರ್ ಚುಚ್ಚುಮದ್ದು ಖಾಸಗಿ ಆಸ್ಪತ್ರೆಗಳಲ್ಲಿ ಲಭ್ಯವಿಲ್ಲದಿದ್ದರೆ, ರೋಗಿ ಬದುಕಲು ತುರ್ತು ಅಗತ್ಯವಿರುವ ರೆಮ್ಡಿಸಿವಿರ್ ಚುಚ್ಚುಮದ್ದನ್ನು ಡಿಸ್ಟ್ರಿಕ್ಟ್ ಮ್ಯಾಜಿಸ್ಟ್ರೇಟ್ ಮತ್ತು ಮುಖ್ಯ ಆರೋಗ್ಯಾಧಿಕಾರಿ ಪೂರೈಕೆ ಮಾಡಬೇಕು ಎಂದು ಸರಕಾರ ಸೂಚನೆ ನೀಡಿರುವುದಾಗಿ ವರದಿ ತಿಳಿಸಿದೆ.