Advertisement

ದೇಶಗಳ ಆರ್ಥಿಕತೆಯನ್ನು ಹಿಂಡಿಹಾಕಿದ ಕೋವಿಡ್ 19

01:52 AM Sep 08, 2020 | Hari Prasad |

ಕೋವಿಡ್ 19 ಇಡೀ ಜಗತ್ತಿನ ವಿತ್ತ ವ್ಯವಸ್ಥೆಗೆ ಪೆಟ್ಟು ನೀಡಿದೆ. ಬಹುತೇಕ ದೇಶಗಳಲ್ಲಿ ಆರ್ಥಿಕ ಹಿಂಜರಿತ ಉಂಟಾಗಿದೆ.

Advertisement

ಜಗತ್ತಿನ ಬೃಹತ್‌ ಆರ್ಥಿಕತೆಗಳೆನಿಸಿಕೊಂಡ ರಾಷ್ಟ್ರಗಳೂ ಪರಿಸ್ಥಿತಿಯನ್ನು ನಿಭಾಯಿಸಲಾಗದೇ ಪರದಾಡುತ್ತಿವೆ.

ಭಾರತ ಸೇರಿದಂತೆ ಅನೇಕ ರಾಷ್ಟ್ರಗಳ ಜಿಡಿಪಿ ನೆಲ ಕಚ್ಚಿದೆ. ಈ ಹಿನ್ನೆಲೆಯಲ್ಲಿ ಜಗತ್ತಿನ ಪ್ರಮುಖ ದೇಶಗಳ ಆರ್ಥಿಕ ಸ್ಥಿತಿಗತಿ ಹೇಗಿದೆ, ಒಟ್ಟಾರೆ ದೇಶೀಯ ಉತ್ಪನ್ನದಲ್ಲಿ ಆದ ಏರುಪೇರು ಹೇಗಿದೆ ಎನ್ನುವ ಮಾಹಿತಿ ಇಲ್ಲಿದೆ.

ಆರ್ಥಿಕ ಹಿಂಜರಿತ ಎಂದರೇನು?

ಸಾಂಪ್ರದಾಯಿಕ ಲೆಕ್ಕಾಚಾರದಲ್ಲಿ ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ), ನಿರ್ದಿಷ್ಟ ಅವಧಿಯಲ್ಲಿ ತೀವ್ರ ಕುಸಿತ ಕಂಡರೆ ಅದನ್ನು ಆರ್ಥಿಕ ಹಿಂಜರಿತ ಎನ್ನಲಾಗುತ್ತದೆ. ಜಾಗತಿಕ ಲೆಕ್ಕಾಚಾರದಲ್ಲಿ, ಕೆಲವು ಕಂಪೆನಿಗಳು ಉತ್ತಮ ಎನ್ನುವಂತಹ ಸ್ಥಿತಿಯನ್ನೇ ಹೊಂದಿದ್ದರೂ, ಸತತ ಎರಡು ತ್ತೈಮಾಸಿಕಾವಧಿಯಲ್ಲಿ ಜಿಡಿಪಿ ಕುಸಿದರೆ ಅದನ್ನು ಹಿಂಜರಿತ ಎಂದು ನಿರ್ಧರಿಸಲಾಗುತ್ತದೆ.

Advertisement

ಅಮೆರಿಕದಲ್ಲೂ ಪರದಾಟ!
ಜಗತ್ತಿನ ಅತಿ ಬಲಿಷ್ಠ ರಾಷ್ಟ್ರ, ದೊಡ್ಡಣ್ಣ ಎಂದು ಕರೆಸಿಕೊಳ್ಳುವ ಅಮೆರಿಕಕ್ಕೂ ಕೋವಿಡ್ 19 ವೈರಸ್‌ನ ಹೊಡೆತವನ್ನು ತಾಳಿಕೊಳ್ಳಲು ಸಾಧ್ಯವಾಗಿಲ್ಲ. ರಾಷ್ಟ್ರೀಯ ಆರ್ಥಿಕ ಸಂಶೋಧನ ಮಂಡಳಿ ತಿಂಗಳುಗಳ ಕಾಲ ನಡೆಸಿದ ಅಧ್ಯಯನದ ಅನಂತರ ಕೊನೆಗೂ ದೇಶದಲ್ಲಿ ಹಿಂಜರಿತ ಶುರುವಾಗಿದೆ ಎಂದು ಜೂನ್‌ 8ರಂದು ಘೋಷಿಸಿತು. ಕೋವಿಡ್‌ ನಿಯಂತ್ರಣ ತಡೆಯಲ್ಲಿನ ವೈಫ‌ಲ್ಯ, ಜಿಡಿಪಿ ಕುಸಿತದ ವಿಚಾರವನ್ನೇ ಈಗ ಟ್ರಂಪ್‌ ಎದುರಾಳಿಗಳು ಚುನಾವಣ ಅಸ್ತ್ರವಾಗಿಸಿಕೊಂಡಿದ್ದಾರೆ.

ಇಂಗ್ಲೆಂಡ್‌ ಹೀನಾಯ ಸ್ಥಿತಿ
ಕೋವಿಡ್ 19 ಪರಿಣಾಮದಿಂದ ಹೀನಾಯ ಆರ್ಥಿಕ ಸ್ಥಿತಿಗೆ ತಲುಪಿದ ರಾಷ್ಟ್ರಗಳಲ್ಲಿ ಯುನೈಟೆಡ್‌ ಕಿಂಗ್‌ಡಮ್‌ ಕೂಡಾ ಒಂದು. ಮೇ ತಿಂಗಳಲ್ಲಿ ಬ್ಯಾಂಕ್‌ ಆಫ್ ಇಂಗ್ಲೆಂಡ್‌, “ಕಳೆದ 300 ವರ್ಷಗಳಲ್ಲೇ ಅತಿ ದೊಡ್ಡ ಆರ್ಥಿಕ ಬಿಕ್ಕಟ್ಟಿನತ್ತ ಯುನೈಟೆಡ್‌ ಕಿಂಗ್‌ಡಮ್‌ ಸಾಗುತ್ತಿದೆ’ ಎಂದು ಎಚ್ಚರಿಸಿತ್ತು.

ಚೀನದಲ್ಲಿ ಹಿಂಜರಿಕೆ ಇಲ್ಲ!
ಕೋವಿಡ್ 19 ತೀವ್ರತೆಯ ಸತ್ಯವನ್ನು ಮುಚ್ಚಿಟ್ಟು ಇಡೀ ಜಗತ್ತನ್ನು ಅಪಾಯಕ್ಕೆ ತಳ್ಳಿರುವ ಚೀನ, ಇದೀಗ ತನ್ನ ದೇಶದಲ್ಲಿ ಜಿಡಿಪಿ ಏರಿಕೆಯಾಗಿದೆಯೆಂದು ಹೇಳುತ್ತಿದೆ. ಅಂದರೆ 2020-21ರ ಮೊದಲ ತ್ತೈಮಾಸಿಕದಲ್ಲಿ ತಮ್ಮ ಜಿಡಿಪಿ ಶೇ.3.2ರಷ್ಟು ತಲುಪಿದೆ ಎಂಬುದು ಜಿನ್‌ ಪಿಂಗ್‌ ಸರಕಾರದ ವಾದ. ಆದರೆ ಜಿಡಿಪಿ ವಿಚಾರದಲ್ಲಿ ಚೀನ ಸತ್ಯ ಹೇಳುತ್ತಿದೆ ಎನ್ನಲಾಗದು.

ತೀವ್ರ ಕುಸಿತ ಕಂಡ ಬ್ರೆಜಿಲ್‌
ಜಗತ್ತಿನಲ್ಲೇ ಗರಿಷ್ಠ ಪ್ರಮಾಣದ ಕೋವಿಡ್ 19 ಬಾಧಿತ ದೇಶಗಳಲ್ಲಿ 3ನೇ ಸ್ಥಾನದಲ್ಲಿದೆ ಬ್ರೆಜಿಲ್‌. ಈಗ ಅಲ್ಲಿನ ಅರ್ಥಿಕ ಪರಿಸ್ಥಿತಿ ಉಲ್ಬಣಿಸಿದೆ. ಬ್ರೆಜಿಲ್‌ ಸರಕಾರ ಬಡವರ ಖಾತೆಗೆ ಪ್ರತೀ ತಿಂಗಳೂ ಹಣ ವರ್ಗಾವಣೆ ಮಾಡುತ್ತಿದ್ದು, ಇದಕ್ಕಾಗಿ 47 ಶತಕೋಟಿ ಡಾಲರ್‌ ವ್ಯಯಿಸಿದೆ.

ಭಾರತ ಕುಸಿದಿಲ್ಲ, ವಸ್ತುಸ್ಥಿತಿ?
ಭಾರತ ಕಳೆದ ವರ್ಷದ ಕೊನೆಯ ತ್ತೈಮಾಸಿಕ ದಲ್ಲಿ (ಶೇ -16.5) ಪರವಾಗಿಲ್ಲ ಎನ್ನುವ ಸ್ಥಿತಿಯಲ್ಲಿತ್ತು. ಆದರೆ ಈ ವರ್ಷದ ಮೊದಲ ಅವಧಿಯಲ್ಲಿ ಶೇ.23.9ರಷ್ಟು ಜಿಡಿಪಿ ಕುಸಿತ ದಾಖಲಿಸಿದೆ. ಮಾನದಂಡದ ಪ್ರಕಾರ ಸತತ ಎರಡು ತ್ತೈಮಾಸಿಕ ಜಿಡಿಪಿ ಕುಸಿದಿದ್ದರೆ, ಅದು ಆರ್ಥಿಕ ಕುಸಿತ. ಹಾಗೆ ನೋಡಿದರೆ, ಭಾರತ ಸತತ ಎರಡು ಬಾರಿ ಕುಸಿದಿಲ್ಲ. ಆದರೆ ಎಪ್ರಿಲ್‌, ಮೇ, ಜೂನ್‌ನಲ್ಲಿ ಸಂಭವಿಸಿದ ಕುಸಿತ ಐತಿಹಾಸಿಕವಾಗಿದೆ. 1996ರಿಂದ ಭಾರತ ಜಿಡಿಪಿ ಪ್ರಕಟಿಸಲು ಆರಂಭಿಸಿದ ಅನಂತರ, ಈ ಪ್ರಮಾಣದ ಕುಸಿತ ಇದೇ ಮೊದಲು. ತಿಂಗಳುಗಳ ಕಾಲ ದೇಶಾದ್ಯಂತ ಜಾರಿಯಲ್ಲಿದ್ದ ಕಟ್ಟುನಿಟ್ಟಿನ ಲಾಕ್‌ಡೌನ್‌ನಿಂದಾಗಿ ಆರ್ಥಿಕ ಚಟುವಟಿಕೆಗಳು ನಿಂತಿದ್ದರ ಪರಿಣಾಮ ಜಿಡಿಪಿ ಮೇಲೆ ಕಾಣಿಸಿಕೊಂಡಿದೆ, ಈಗ ನಿರ್ಬಂಧ ಸಡಿಲಿಕೆಯಾಗಿರುವುದರಿಂದ ಪರಿಸ್ಥಿತಿ ಮುಂದೆ ಸರಿಯಾಗಲಿದೆ ಎಂದು ತಜ್ಞರು ಆಶಾಭಾವನೆ ವ್ಯಕ್ತಪಡಿಸುತ್ತಾರೆ.


ಜಪಾನ್‌ಗೆ ಏಟು
ತೀವ್ರ ಆರ್ಥಿಕ ಹೊಡೆತಕ್ಕೆ ಒಳಗಾಗಿರುವ ರಾಷ್ಟ್ರ ಗಳ ಪೈಕಿ ಜಪಾನ್‌ ಕೂಡ ಇದೆ. ಈಗಾಗಲೇ ಮುಂದೂಡಲ್ಪಟ್ಟಿರುವ ಒಲಿಂಪಿಕ್ಸ್‌ ಮುಂದಿನ ವರ್ಷ ನಡೆಯದಿದ್ದರೆ ಆರ್ಥಿಕ ಸ್ಥಿತಿ ಮತ್ತಷ್ಟು ಹದಗೆಡಲಿದೆ.

ರಷ್ಯಾಕ್ಕೆ ಸಮಸ್ಯೆಯಾಗಿಲ್ಲವಂತೆ
ರಷ್ಯಾದ ಜಿಡಿಪಿ ಕುಸಿತದ ಪ್ರಮಾಣವನ್ನು ಪ್ರಾರಂಭದಲ್ಲಿ ತಜ್ಞರು ದೊಡ್ಡ ಪ್ರಮಾಣದಲ್ಲೇ ಊಹಿಸಿದ್ದರಾದರೂ ಆ ಪ್ರಮಾಣದಲ್ಲೇನು ಕುಸಿತವಾಗಿಲ್ಲ. 2020-21ರ ಮೊದಲ ತ್ತೈಮಾಸಿಕ ಸಂಭವಿಸಿದ ಕುಸಿತ ಶೇ.8.5. ನಿರುದ್ಯೋಗ ಪ್ರಮಾಣ ಹೆಚ್ಚಳವಾಗಿದೆ ಎನ್ನಲಾಗುತ್ತದಾದರೂ, ಪುಟಿನ್‌ ಸರಕಾರ ಇದನ್ನು ಅಲ್ಲಗಳೆಯುತ್ತದೆ.

ಜರ್ಮನಿಗೆ ದಶಕದ ಹೊಡೆತ
ಹೆಚ್ಚುಕಡಿಮೆ ಒಂದು ದಶಕದ ಜರ್ಮನಿಯ ಬೆಳವಣಿಗೆ ಕೋವಿಡ್ 19 ಏಟಿಗೆ ತೊಳೆದುಕೊಂಡು ಹೋಗಿದೆ ಎಂದು ಆ ದೇಶದ ಅಂಕಿಸಂಖ್ಯೆ ತಜ್ಞರೇ ಹೇಳುತ್ತಾರೆ. ಎಪ್ರಿಲ್‌-ಮೇ ಅವಧಿಯಲ್ಲಿ ಅದು ಅನುಭವಿಸಿದ ಶೇ.11.7ರಷ್ಟು ಜಿಡಿಪಿ ಕುಸಿತ, ಆ ದೇಶ 1970ರಿಂದ ಜಿಡಿಪಿ ಲೆಕ್ಕ ಹಿಡಿಯಲು ಆರಂಭಿಸಿದ ಅನಂತರ ಸಂಭವಿಸಿದ ಕಡು ಕುಸಿತವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next