ರೋಮ್: ಕೋವಿಡ್ 19 ಮಹಾಮಾರಿಗೆ ಇಟಲಿ ತತ್ತರಿಸಿ ಹೋಗಿದ್ದು, ಮಾರಣಾಂತಿಕ ಕೋವಿಡ್ 19 ವೈರಸ್ ಸೋಂಕು ಪೀಡಿತರಿಗೆ ಚಿಕಿತ್ಸೆ ನೀಡಿದ ಸುಮಾರು ನೂರು ಮಂದಿ ವೈದ್ಯರು ಇಟಲಿಯ ವೈದ್ಯರ ಅಸೋಸಿಯೇಶನ್ ತಿಳಿಸಿರುವುದಾಗಿ ಏಜೆನ್ಸಿ ಫ್ರಾನ್ಸ್ ಪ್ರೆಸ್ (ಎಎಫ್ ಪಿ) ವರದಿ ಮಾಡಿದೆ.
ಕೋವಿಡ್ 19 ಸೋಂಕಿಗೆ ಸುಮಾರು 100 ಮಂದಿ ವೈದ್ಯರು ಸಾವನ್ನಪ್ಪಿದ್ದಾರೆ. ಇದೊಂದು ದುರದೃಷ್ಟಕರ ಘಟನೆ ಎಂದು ಅಸೋಸಿಯೇಶನ್ ವಕ್ತಾರ ಪ್ರತಿಕ್ರಿಯೆ ನೀಡಿರುವುದಾಗಿ ಎಎಫ್ ಪಿ ವಿವರಿಸಿದೆ.
ಇಟಲಿಯಲ್ಲಿ ಕೋವಿಡ್ 19 ಸೋಂಕು ಮರಣಮೃದಂಗ ಮುಂದುವರಿಸಿದ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ವೈದ್ಯರ ಸಂಖ್ಯೆ ಕಡಿಮೆ ಇದ್ದ ಪರಿಣಾಮ ನಿವೃತ್ತ ವೈದ್ಯರು ಕೂಡಾ ರೋಗಿಗಳ ಸೇವೆಗೆ ಮುಂದಾಗಿದ್ದರು. ಹೀಗೆ ನಿವೃತ್ತ ಹಾಗೂ ಹಾಲಿ ಸೇರಿದಂತೆ ನೂರು ಮಂದಿ ವೈದ್ಯರು ಮಹಾಮಾರಿ ಸೋಂಕಿಗೆ ಸಾವನ್ನಪ್ಪಿದಂತಾಗಿದೆ ಎಂದು ವರದಿ ತಿಳಿಸಿದೆ.
ಚೀನಾದ ಬಳಿಕ ಇಟಲಿ ಅತೀ ಹೆಚ್ಚಿನ ಸೋಂಕು ಪೀಡಿತರು ಮತ್ತು ಸಾವಿನ ಸಂಖ್ಯೆಯನ್ನು ಹೊಂದಿತ್ತು. ಇದೀಗ ಆ ಸಾಲಿಗೆ ಅಮೆರಿಕ ಸೇರ್ಪಡೆಯಾಗುತ್ತಿದೆ. ಇಟಲಿಯಲ್ಲಿ ಕೋವಿಡ್ 19 ವೈರಸ್ ಗೆ 18 ಸಾವಿರ ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿ ಹೇಳಿದೆ.
ಇಟಲಿಯ ಮಾಧ್ಯಮಗಳ ವರದಿ ಪ್ರಕಾರ, ಕೋವಿಡ್ 19 ವೈರಸ್ ಗೆ ಅಂದಾಜು 30 ನರ್ಸ್ ಗಳು ಮತ್ತು ನರ್ಸಿಂಗ್ ಅಸಿಸ್ಟೆಂಟ್ ಸಾವನ್ನಪ್ಪಿರುವುದಾಗಿ ತಿಳಿಸಿದೆ. ನಾವು ನಮ್ಮ ವೈದ್ಯರು ಮತ್ತು ಹೆಲ್ತ್ ವರ್ಕರ್ಸ್ ಅನ್ನು ಯಾವುದೇ ರಕ್ಷಣಾ ಮುನ್ನೆಚ್ಚರಿಕೆ ಇಲ್ಲದೆ ಸೇವೆಗೆ ಕಳುಹಿಸಿದ್ದೇವು. ಇದು ಸೋಂಕಿನ ವಿರುದ್ಧದ ಅಸಹಜ ಹೋರಾಟವಾಗಿತ್ತು ಎಂದು ವೈದ್ಯ ಅಸೋಸಿಯೇಶನ್ ತಿಳಿಸಿದೆ.