Advertisement

ಜಗದಗಲ ನಿಲ್ಲದ ಕೋವಿಡ್ ಹಾವಳಿ… ; ರಷ್ಯಾದತ್ತ ಜಗದ ಚಿತ್ತ

02:19 AM Jun 09, 2020 | Hari Prasad |

ಕೋವಿಡ್ ಹಾವಳಿ ನಿಲ್ಲುವ ಸೂಚನೆ ಕಾಣಿಸುತ್ತಿಲ್ಲ. ಈಗಾಗಲೇ ಚೇತರಿಸಿಕೊಂಡಿದ್ದ ಅನೇಕ ರಾಷ್ಟ್ರಗಳೀಗ ಎರಡನೇ ಅಲೆಯನ್ನು ಎದುರಿಸಲಾರಂಭಿಸಿವೆ.

Advertisement

ಮತ್ತೊಂದೆಡೆ ಕೆಲವು ರಾಷ್ಟ್ರಗಳು ರೋಗ ಹರಡುವಿಕೆ ಹತ್ತಿಕ್ಕುವಲ್ಲಿ ಹಾಗೂ ಮರಣ ಪ್ರಮಾಣ ನಿಯಂತ್ರಣದಲ್ಲಿ ಗಮನಾರ್ಹ ಹೆಜ್ಜೆ ಇಡುತ್ತಿವೆ.

ವಿವಿಧ ದೇಶಗಳಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಿದಾಗ ಅದರಲ್ಲಿ ನಮಗೆ ಪಾಠಗಳೂ ಕಾಣಿಸಬಹುದು.

ರಷ್ಯಾದತ್ತ ಜಗದ ಚಿತ್ತ
ಜಗತ್ತಿನಾದ್ಯಂತ ಕೋವಿಡ್ ಪ್ರಕರಣಗಳ ಸಂಖ್ಯೆ 71 ಲಕ್ಷ ದಾಟಿದ್ದರೆ, ಈಗಾಗಲೇ 4 ಲಕ್ಷಕ್ಕೂ ಅಧಿಕ ಜನ ಮೃತಪಟ್ಟಿದ್ದಾರೆ. ಅತಿದೊಡ್ಡ ಹಾಟ್‌ಸ್ಪಾಟ್‌ ಆಗಿರುವ ಅಮೆರಿಕವೊಂದರಲ್ಲೇ ಸೋಂಕಿತರ ಸಂಖ್ಯೆ 20 ಲಕ್ಷ ದಾಟಿದೆ. ತದನಂತರ ಬ್ರೆಜಿಲ್‌ ಇದ್ದು, ಅಲ್ಲೂ ಸೋಂಕಿತರ ಸಂಖ್ಯೆ 7 ಲಕ್ಷ ಸಮೀಪಿಸುತ್ತಿದೆ.

ಆದರೆ, ಜಗತ್ತಿನ ದೃಷ್ಟಿಯೀಗ ಅಚ್ಚರಿಯಿಂದ ಹರಿಯುತ್ತಿರುವುದು ಹಾಟ್‌ಸ್ಪಾಟ್‌ಗಳಲ್ಲಿ ಮೂರನೇ ಸ್ಥಾನದಲ್ಲಿರುವ ರಷ್ಯಾದತ್ತ. ಏಕೆಂದರೆ, ಆ ರಾಷ್ಟ್ರದಲ್ಲಿ ಸೋಂಕಿತರ ಸಂಖ್ಯೆ ಸೋಮವಾರದ ವೇಳೆಗೆ 4 ಲಕ್ಷ 76 ಸಾವಿರದ ಗಡಿ ದಾಟಿದ್ದರೂ ಮೃತರ ಸಂಖ್ಯೆ ಮಾತ್ರ 6 ಸಾವಿರದ ಸನಿಹವಿದೆಯಷ್ಟೇ.

Advertisement

ರಷ್ಯಾಗಿಂತಲೂ ಅತ್ಯಂತ ಕಡಿಮೆ ಸೋಂಕು ಹೊಂದಿರುವ ಅನೇಕ ರಾಷ್ಟ್ರಗಳಲ್ಲಿ ಮರಣ ಪ್ರಮಾಣ ಬೆಚ್ಚಿಬೀಳಿಸುವಂತಿದೆ. ಉದಾಹರಣೆಗೆ, ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ 21ನೇ ಸ್ಥಾನದಲ್ಲಿರುವ ಬೆಲ್ಜಿಯಂನಲ್ಲಿ ಸೋಂಕಿತರ ಸಂಖ್ಯೆ 59 ಸಾವಿರ ಇದ್ದರೆ, ಅಲ್ಲಿ ಮೃತಪಟ್ಟವರ ಸಂಖ್ಯೆ ಸೋಮವಾರದ ವೇಳೆಗೆ 9,600 ದಾಟಿದೆ. ಭಾರತದಲ್ಲಿ ಮರಣ ದರ 2.8ರಷ್ಟಿದೆಯಾದರೂ, ನಮ್ಮಲ್ಲಿ ಮೃತರ ಸಂಖ್ಯೆ 7 ಸಾವಿರಕ್ಕೂ ಅಧಿಕ. ಹೀಗಾಗಿಯೇ, ಅದು ಹೇಗೆ ರಷ್ಯಾದಲ್ಲಿ ಮರಣ ಪ್ರಮಾಣ ನಿಯಂತ್ರಣದಲ್ಲಿದೆ ಎನ್ನುವ ಬಗ್ಗೆ ಚರ್ಚೆಗಳು ಆರಂಭವಾಗಿವೆ.

ಕಡಿಮೆ ಮರಣ ಪ್ರಮಾಣ, ನಾನಾ ಕಾರಣ
ಭೂ ವ್ಯಾಪ್ತಿಯ ದೃಷ್ಟಿಯಲ್ಲಿ ನೋಡಿದರೆ ಜಗತ್ತಿನ ಅತಿದೊಡ್ಡ ರಾಷ್ಟ್ರ ರಷ್ಯಾ. 14.5 ಕೋಟಿ ಜನಸಂಖ್ಯೆಯಿರುವ ಈ ರಾಷ್ಟ್ರವು ಗಾತ್ರದಲ್ಲಿ ಅಮೆರಿಕ ಹಾಗೂ ಚೀನಕ್ಕಿಂತ ಅಜಮಾಸು ಎರಡು ಪಟ್ಟು ದೊಡ್ಡದು, ಯುರೋಪ್‌ಗಿಂತ 2.5 ಪಟ್ಟು ಹಾಗೂ ಭಾರತಕ್ಕಿಂತ 5 ಪಟ್ಟು ದೊಡ್ಡದು. ಜರ್ಮನಿ ಹಾಗೂ ಜಪಾನ್‌ಗಿಂತ 45 ಪಟ್ಟು ಗಾತ್ರದಲ್ಲಿ ದೊಡ್ಡದಿದೆ ರಷ್ಯಾ! ಈ ಕಾರಣದಿಂದಾಗಿಯೇ, ಆ ದೇಶದಲ್ಲಿ ಜನದಟ್ಟಣೆ ಕಡಿಮೆಯಿದೆ. ಆದರೆ, ಇದಕ್ಕೂ ಮರಣ ಪ್ರಮಾಣಕ್ಕೂ ಸಂಬಂಧ ಕಲ್ಪಿಸಲು ಸಾಧ್ಯವಿಲ್ಲ ಎನ್ನುವುದು ಪರಿಣತರ ವಾದ. ರಷ್ಯಾದಲ್ಲಿ ಮರಣ ಪ್ರಮಾಣ ಕಡಿಮೆ ಇರುವುದಕ್ಕೆ ಇರಬಹುದಾದ ಕಾರಣಗಳಿವು…

1. ಹೆಚ್ಚು ಟೆಸ್ಟಿಂಗ್‌
ಅತಿ ಹೆಚ್ಚು ಕೋವಿಡ್ ಪತ್ತೆ ಟೆಸ್ಟಿಂಗ್‌ಗಳನ್ನು ನಡೆಸಿದ ರಾಷ್ಟ್ರಗಳಲ್ಲಿ ರಷ್ಯಾ ಎರಡನೇ ಸ್ಥಾನದಲ್ಲಿದೆ. ಈವರೆಗೆ ಪುಟಿನ್‌ರ ರಾಷ್ಟ್ರವು ಒಂದು ಕೋಟಿ 30 ಲಕ್ಷ ಜನರನ್ನು ಪರೀಕ್ಷಿಸಿದೆ. ತ್ವರಿತ ಹಾಗೂ ವ್ಯಾಪಕ ಟೆಸ್ಟಿಂಗ್‌ನಿಂದಾಗಿ ರೋಗವು ಆರಂಭಿಕ ಹಂತದಲ್ಲಿರುವವರಿಗೆಲ್ಲ ಸಕಾಲಕ್ಕೆ ಚಿಕಿತ್ಸೆ ದೊರೆಯುವಂತಾಗಿದ್ದೇ ಮರಣ ಪ್ರಮಾಣ ಹೆಚ್ಚಾಗದಿರಲು ಕಾರಣ ಎನ್ನುವ ವಾದವಿದೆ. ಅನೇಕ ದೇಶಗಳಲ್ಲಿ ರೋಗ ಉಲ್ಬಣಿಸಿದಾಗಲೇ, ರೋಗಿಯ ಪತ್ತೆಯಾಗುತ್ತಿದೆ!

2. ಹಿರಿಯ ನಾಗರಿಕರು ಕಡಿಮೆ
65ಕ್ಕೂ ಅಧಿಕ ವಯೋಮಾನದವರ ಸಂಖ್ಯೆ ರಷ್ಯಾದಲ್ಲಿ ಕೇವಲ 14.6 ಪ್ರತಿಶತದಷ್ಟಿದೆ. ಈ ಪ್ರಮಾಣ ಇಟಲಿಯಲ್ಲಿ 24 ಪ್ರತಿಶತ ಹಾಗೂ ಸ್ಪೇನ್‌ನಲ್ಲಿ 21.2 ಪ್ರತಿಶತದಷ್ಟಿದೆ. ಇಟಲಿಯ ಒಟ್ಟು ಸೋಂಕಿತರಲ್ಲಿ 40 ಪ್ರತಿಶತದಷ್ಟು ಜನ 70ಕ್ಕಿಂತಲೂ ಅಧಿಕ ವಯೋಮಾನದವರೇ ಇದ್ದಾರೆ. ಇನ್ನು ಇಟಲಿಯಲ್ಲಿ ಮೃತಪಟ್ಟವರಲ್ಲಿ 75 ಪ್ರತಿಶತದಷ್ಟು ಜನ ಹಿರಿಯ ನಾಗರಿಕರು.

3. ಅಂಕಿಅಂಶಗಳನ್ನು ಮುಚ್ಚಿಡಲಾಗುತ್ತಿದೆಯೇ?
ಪಾಶ್ಚಾತ್ಯ ಮಾಧ್ಯಮಗಳು, ಅದರಲ್ಲೂ ಮುಖ್ಯವಾಗಿ ಬ್ರಿಟನ್‌ ಹಾಗೂ ಅಮೆರಿಕನ್‌ ಮಾಧ್ಯಮಗಳು, “ರಷ್ಯಾ ಕೋವಿಡ್ ನಿಂದಾಗಿ ಮೃತಪಟ್ಟವರ ನಿಜವಾದ ಅಂಕಿಸಂಖ್ಯೆಯನ್ನು ಮುಚ್ಚಿಡುತ್ತಿದೆ” ಎಂದು ಆರೋಪಿಸುತ್ತಿವೆ. ಆದರೆ, ರಷ್ಯನ್‌ ಸರಕಾರ ಮಾತ್ರ ಈ ವಾದವನ್ನು ಅಲ್ಲಗಳೆಯುತ್ತದೆ. “ಅಮೆರಿಕ ಹಾಗೂ ಬ್ರಿಟನ್‌ ಮಾಧ್ಯಮಗಳಿಗೆ ತಮ್ಮ ಆಡಳಿತಗಳ  ವೈಫ‌ಲ್ಯವನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ. ಹೀಗಾಗಿ, ಅವು ರಷ್ಯಾದ ಪರಿಶ್ರಮದಲ್ಲಿ ಹುಳುಕು ಹುಡುಕಿ ಸಮಾಧಾನಪಟ್ಟುಕೊಳ್ಳುತ್ತವೆ” ಎನ್ನುತ್ತಾರೆ ರಷ್ಯಾದ ಆರೋಗ್ಯ ಸಚಿವ ಮಿಖೈಲ್‌ ಮುರಷ್ಕೋ.

ಇಲ್ಲಿ ಹೇಳಲೇಬೇಕಾದ್ದೆಂದರೆ, ಮಾರ್ಚ್‌ 19ರಂದು ರಷ್ಯಾದಲ್ಲಿ ಕೋವಿಡ್ ನಿಂದ ಮೊದಲ ಸಾವು ದಾಖಲಾಯಿತು. ಆದರೆ, ಕೆಲವು ಸಮಯದಲ್ಲಿ ವೈದ್ಯರು, ಸೋಂಕಿತ ವೃದ್ಧೆಯು ಬ್ಲಡ್‌ ಕ್ಲಾಟ್‌ನಿಂದ ಮೃತಪಟ್ಟಿದ್ದಾಳೆ, ಆಕೆಯ ಸಾವಿಗೂ ಕೋವಿಡ್ ಗೂ ಸಂಬಂಧವಿಲ್ಲ ಎಂದು ಹೇಳಿ, ಕೋವಿಡ್‌-19 ಅಧಿಕೃತ ಮರಣ ಪಟ್ಟಿಯಿಂದ ಆಕೆಯ ಹೆಸರನ್ನು ಕೈಬಿಟ್ಟಿದ್ದರು.

ಸೋಂಕಿತರೂ ಹೆಚ್ಚು, ಚೇತರಿಕೆಯೂ ಅಧಿಕ
ಕಳೆದ ಕೆಲವು ದಿನಗಳಿಂದ ಭಾರತದಲ್ಲಿ ಕೋವಿಡ್ ನಿಂದ ಚೇತರಿಸಿಕೊಂಡವರ ಸಂಖ್ಯೆಯಲ್ಲಿ ಏರಿಕೆ ಕಾಣುತ್ತಿದ್ದು, ಈಗ ದೇಶದ ರಿಕವರಿ ರೇಟ್‌ 48.2 ಪ್ರತಿಶತಕ್ಕೆ ಏರಿದೆ. ಆದರೂ, ಹಲವು ಸವಾಲುಗಳು ದೇಶದ ಮುಂದಿವೆ. ಜೂನ್‌ ಮೊದಲನೇ ದಿನದಿಂದ ಜೂನ್‌ 7ರವರೆಗಿನ ಅಂಕಿಸಂಖ್ಯೆಯನ್ನು ನೋಡಿದರೆ, ಪ್ರತಿದಿನ ಸರಾಸರಿ 9212 ಪ್ರಕರಣಗಳು ದೇಶದಲ್ಲಿ ಪತ್ತೆಯಾಗಿವೆ. ಪ್ರಕರಣಗಳು ಇದೇ ವೇಗದಲ್ಲೇ ಮುಂದುವರಿದರೆ, ದೇಶದ ಆರೋಗ್ಯ ವ್ಯವಸ್ಥೆಯ ಮೇಲೆ ಅತೀವ ಒತ್ತಡ ಬೀಳುವುದು ನಿಸ್ಸಂಶಯ ಎಂದು ಕೆಲವು ತಜ್ಞರು ಎಚ್ಚರಿಸುತ್ತಿದ್ದಾರೆ.

ಹೇಗಿದೆ ಭಾರತದ ಸ್ಥಿತಿ?
ದೇಶದ ಜನಸಂಖ್ಯೆಯನ್ನು ಪರಿಗಣಿಸಿದರೆ, ಇಲ್ಲಿಯವರೆಗೂ ರೋಗ ನಿಯಂತ್ರಣದಲ್ಲಿ ದೇಶದ ಪ್ರಯತ್ನ ಉತ್ತಮವಾಗಿದೆ ಎನ್ನುವುದು ಇನ್ನೊಂದು ಅಭಿಪ್ರಾಯ. ಉದಾಹರಣೆಗೆ, ನೀತಿ ಆಯೋಗದ ಪ್ರಮುಖ ಸದಸ್ಯ, ಆರೋಗ್ಯ ಸಲಹೆಕಾರ ಅಲೋಕ್‌ ಕುಮಾರ್‌ ಅವರು, ಯಾವುದೇ ಮಾನದಂಡದಿಂದ ನೋಡಿದರೂ ದೇಶದಲ್ಲಿ ಕೋವಿಡ್‌-19 ಪರಿಣಾಮ ಅಷ್ಟು ಗಂಭೀರವಾಗಿಲ್ಲ ಎನ್ನುತ್ತಾರೆ.

“ದೇಶದ ಪ್ರತಿ ಹತ್ತು ಲಕ್ಷ ಜನಸಂಖ್ಯೆಯಲ್ಲಿ ಸೋಂಕಿತರ ಸಂಖ್ಯೆಯು ನಮ್ಮಲ್ಲಿ 151 ಇದ್ದು, ಅಮೆರಿಕ ಹಾಗೂ ಸ್ಪೇನ್‌ನಲ್ಲಿ 5000ದಷ್ಟಿದೆ” ಎನ್ನುವ ಅಲೋಕ್‌ ಕುಮಾರ್‌, “ಭಾರತದಲ್ಲಿ ಮರಣ ದರವೂ ಕಡಿಮೆಯಿದ್ದು (2.8 ಪ್ರತಿಶತ), ಅನ್ಯ ರಾಷ್ಟ್ರಗಳಿಗೆ ಹೋಲಿಸಿದರೆ ಇದು ಅತ್ಯಂತ ಕಡಿಮೆ” ಎನ್ನುತ್ತಾರೆ.

ಕೋವಿಡ್‌-19 ಮೃತ್ಯು ದರವು ಜರ್ಮನಿಯಲ್ಲಿ 5 ಪ್ರತಿಶತವಿದ್ದರೆ, ಫ್ರಾನ್ಸ್‌ನಲ್ಲಿ 19 ಪ್ರತಿಶತ, ಅಮೆರಿಕದಲ್ಲಿ 6 ಪ್ರತಿಶತವಿದೆ. ಇನ್ನೊಂದೆಡೆ, ಅದು ಇಟಲಿ ಹಾಗೂ ಯುಕೆಯಲ್ಲಿ 14 ಪ್ರತಿಶತದಷ್ಟಿದೆ.

Advertisement

Udayavani is now on Telegram. Click here to join our channel and stay updated with the latest news.

Next