ಬೀದರ: ಕೋವಿಡ್ 19 ವೈರಸ್ ಜಿಲ್ಲೆಯಲ್ಲಿ ಹರಡದಂತೆ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ತೀವ್ರ ರೀತಿಯಲ್ಲಿ ಕೈಗೊಳ್ಳಬೇಕು ಎಂದು ಉಸ್ತುವಾರಿ ಸಚಿವ ಪ್ರಭು ಚವ್ಹಾಣ ಜಿಲ್ಲಾಡಳಿತಕ್ಕೆ ಸೂಚಿಸಿದರು.
ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ನಗರದಲ್ಲಿ ಕಡ್ಡಾಯ ಫಾಗಿಂಗ್ ಮೂಲಕ ಮತ್ತು ಬ್ಲಿಚಿಂಗ್ ಪೌಡರ್ ಹಾಕುವ ಮೂಲಕ ನಗರದ ಸ್ವತ್ಛತೆಗೆ ಮತ್ತು ಕುಡಿಯುವ ನೀರಿನ ಶುಚಿತ್ವಕ್ಕೆ ಒತ್ತು ಕೊಡಬೇಕು ಎಂದು ಪೌರಾಯುಕ್ತರಿಗೆ ನಿರ್ದೇಶನ ನೀಡಿದರು. ಚೆಕ್‌ಪೋಸ್ಟ್ ಬಳಿ ಇರುವ ಎಲ್ಲಾ ಸಿಬ್ಬಂದಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ವ್ಯವಸ್ಥೆ ಮಾಡಬೇಕು ಎಂದರು.
ಜಿಲ್ಲೆಗೆ ವಿದೇಶದಿಂದ 570 ಜನರು ಬಂದಿದ್ದು, ಈ ಪೈಕಿ 317 ಜನರು 14 ದಿನಗಳ ಹೋಮ್‌ಕ್ವಾರಂಟೈನ್ ಅವಧಿ ಮುಗಿಸಿದ್ದು, ಉಳಿದವರು ಕ್ವಾರಂಟೈನದಲ್ಲಿದ್ದಾರೆ. ಕ್ವಾರಂಟೈನ್‌ಗೆ ಸಹಕರಿಸದ ಇಬ್ಬರ ಮೇಲೆ ಪ್ರಕರಣ ದಾಖಲಿಸಲಾಗಿದೆ. ಪ್ರತಿ ಗ್ರಾಪಂಗಳಲ್ಲಿ ಟಾಸ್ಕ್ಫೋರ್ಸ್ ರಚನೆ ಮಾಡಿದ್ದು, ಗ್ರಾಮ ಸಹಾಯಕರು, ಆಶಾ ಕಾರ್ಯಕರ್ತೆಯರು ಗ್ರಾಮಗಳಿಗೆ ಆಗಮಿಸುವ ಎಲ್ಲರ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ. ಅಲ್ಲಲ್ಲಿ ಹೋಮ್ ಕ್ವಾರಂಟೈನದಲ್ಲಿರುವ ವ್ಯಕ್ತಿಗಳಿಗೆ ದಿನಕ್ಕೆ ಮೂರು ಸಾರಿ ತಪಾಸಣೆ ಮಾಡಿ ಮಾಹಿತಿ ಪಡೆಯಲಾಗುತ್ತಿದೆ ಎಂದು ಡಿಸಿ ತಿಳಿಸಿದರು.
ಬ್ರಿಮ್ಸ್ ನಿರ್ದೇಶಕ ಡಾ.ಶಿವಕುಮಾರ ಮಾತನಾಡಿ, ಕೋವಿಡ್ 19 ಶಂಕಿತ ವ್ಯಕ್ತಿಗಳಿಗೆ ಚಿಕಿತ್ಸೆ ಹಿನ್ನೆಲೆಯಲ್ಲಿ ಅಗತ್ಯ ಸಂಖ್ಯೆಯಲ್ಲಿ ಬೆಡ್‌ಗಳು ಇರುವ ಐಸೋಲೇಶನ್ ವಾರ್ಡ್ ವ್ಯವಸ್ಥೆ ಮಾಡಲಾಗಿದೆ. 8 ಅಂಬುಲೆನ್ಸ್ ಪಡೆದುಕೊಳ್ಳಲಾಗಿದೆ. ಹಳೆಯ ಆಸ್ಪತ್ರೆಯಲ್ಲಿ 40 ಐಸಿಯು ಬೆಡ್ ವ್ಯವಸ್ಥೆ ಮಾಡಲಾಗಿದೆ ಎಂದರು.
ಎಂಎಲ್‌ಸಿ ರಘುನಾಥ್‌ರಾವ್ ಮಲ್ಕಾಪೂರೆ, ಸಿಇಒ ಗ್ಯಾನೇಂದ್ರಕುಮಾರ ಗಂಗವಾರ, ಎಸ್‌ಪಿ ಡಿ.ಎಲ್ ನಾಗೇಶ್, ಅಪರ ಜಿಲ್ಲಾಧಿಕಾರಿ ರುದ್ರೇಶ ಗಾಳಿ, ಡಾ.ರತಿಕಾಂತ ಸ್ವಾಮಿ ಇನ್ನಿತರ ಅಧಿಕಾರಿಗಳು ಇದ್ದರು.
ಸಭೆ ಬಳಿಕ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ನಗರದ ಬ್ರಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಕೊರೊನಾ ಚಿಕಿತ್ಸೆಗೆ ಬ್ರಿಮ್ಸ್‌ಆಸ್ಪತ್ರೆಯಲ್ಲಿ ಮಾಡಲಾದ ಕ್ರಮಗಳ ಬಗ್ಗೆ ವೈದ್ಯಾಧಿಕಾರಿಗಳಿಂದ ಮಾಹಿತಿ ಪಡೆದರು.