ಮಂಗಳೂರು: ವಿದೇಶದಿಂದ ಬಂದವರನ್ನು ಕ್ವಾರಂಟೈನ್ ಮಾಡಲು ಜಿಲ್ಲಾಡಳಿತ ನಿಗದಿಪಡಿಸಿದ್ದ ನಗರದ ಕೊಡಿಯಾಲ್‌ಗುತ್ತು ಪರಿಸರದ ಹಾಸ್ಟೆಲ್ ಬಳಿ ಜನರು ಜಮಾಯಿಸಿ ವಿರೋಧ ವ್ಯಕ್ತಪಡಿಸಿರುವ ಘಟನೆ ಮಂಗಳವಾರ ನಡೆದಿದೆ.
ಕೊರೊನಾದಿಂದ ಮೃತಪಟ್ಟಿದ್ದ ಮಹಿಳೆಯ ಶವಸಂಸ್ಕಾರಕ್ಕೆ ವಿರೋಧ ವ್ಯಕ್ತಪಡಿಸಿದ್ದ ಪ್ರಕರಣದ ಬಳಿಕ ಮಾನ ವೀಯತೆಯನ್ನೇ ಮರೆತ ವರ್ತನೆ ಯನ್ನು ಮತ್ತೆ ತೋರಿದ್ದಾರೆ.
ಕೋವಿಡ್ ನಿಂದ ದುಬಾೖಯಲ್ಲಿ ಸಂಕಷ್ಟಕ್ಕೊಳಗಾಗಿದ್ದ 176 ಮಂದಿ ಕರಾವಳಿಗರನ್ನು ಮಂಗಳವಾರ ರಾತ್ರಿ ವಿಮಾನದಲ್ಲಿ ಕರೆತರಲಾಗಿದೆ. ಅವರೆಲ್ಲರಿಗೂ 14 ದಿನಗಳ ಕ್ವಾರಂಟೈನ್ ಕಡ್ಡಾಯವಾಗಿದ್ದು, ಅದಕ್ಕಾಗಿ ಜಿಲ್ಲಾಡಳಿತವು ನಗರದ ಕೆಲವು ಹೊಟೇಲ್ ಮತ್ತು ಹಾಸ್ಟೆಲ್‌ಗಳನ್ನು ಕಾದಿರಿಸಿತ್ತು.
ಮುಂದಿನ ದಿನಗಳಲ್ಲಿ ವಿದೇಶದಿಂದ ಬರುವ ಜಿಲ್ಲೆಯ ಜನರ ಕ್ವಾರಂಟೈನ್‌ಗಾಗಿ ಈ ಹಾಸ್ಟೆಲನ್ನು ಕೂಡ ಗುರುತಿಸಲಾಗಿತ್ತು.
ಆ ವಿಚಾರ ಗೊತ್ತಾಗುತ್ತಿದ್ದಂತೆ ಸನಿಹದ ಎರಡು ಫ್ಲಾಟ್‌ಗಳ ನಿವಾಸಿಗಳು, ಸ್ಥಳೀಯರು ಅಲ್ಲದೆ ಪಕ್ಕದ ಕೊಡಿಯಾಲಬೈಲ್‌ನವರೂ ಒಳಗೊಂಡಂತೆ 500ಕ್ಕೂ ಹೆಚ್ಚು ಮಂದಿ ಮಂಗಳವಾರ ಸಂಜೆ ಜಮಾಯಿಸಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಕೊನೆಗೆ ಶಾಸಕ ಡಿ. ವೇದವ್ಯಾಸ ಕಾಮತ್ ಬಂದು ಸ್ಥಳೀಯರಿಗೆ ವಿಷಯ ಮನವರಿಕೆ ಮಾಡಬೇಕಾಯಿತು.