ಡಬ್ಲಿನ್: ಲಾಕ್‌ಡೌನ್ ಸಡಿಲಿಕೆಯಾದ ಬಳಿಕ ಅಯರ್‌ಲ್ಯಾಂಡ್ ಮತ್ತು ಉತ್ತರ ಅಯರ್‌ಲ್ಯಾಂಡಿನಲ್ಲಿ ನೂರಾರು ಮಾಂಸದಂಗಡಿ ಮತ್ತು ಮಾಂಸ ಸಂಸ್ಕರಣಾ ಘಟಕಗಳನ್ನು ತೆರೆಯಲಾಗಿದೆ. ಆದರೆ ಇವುಗಳ ನೌಕರರು ಯಾವುದೇ ಕ್ಷಣದಲ್ಲಿ ಕೋವಿಡ್ ವೈರಸ್‌ಗೆ ತುತ್ತಾಗುವ ಭೀತಿಯಲ್ಲೇ ಕೆಲಸ ಮಾಡುವ ಸ್ಥಿತಿಯಿದೆ.
ಮಾಂಸದಂಗಡಿಗಳಲ್ಲಿ ಸಾಮಾಜಿಕ ಅಂತರ ಪಾಲನೆಯಾಗುತ್ತಿಲ್ಲ. ಇಷ್ಟು ಮಾತ್ರವಲ್ಲದೆ ನೌಕರರಿಗೆ ಮಾಲಕರು ಮಾಸ್ಕ್, ಗ್ಲೌಸ್, ಪಿಪಿಇ ಉಡುಗೆ ಇತ್ಯಾದಿ ಸುರಕ್ಷಾ ಸಾಧನಗಳನ್ನು ಒದಗಿಸುತ್ತಿಲ್ಲ. ನೌಕರರು ಬೇಕಿದ್ದರೆ ಅವರೇ ಖರೀದಿಸಬೇಕು. ಈ ದಯನೀಯ ಪರಿಸ್ಥಿತಿಯಲ್ಲಿ ಅವರು ಕೆಲಸ ಮಾಡುತ್ತಿದ್ದಾರೆ ಎಂದು ದ ಗಾರ್ಡಿಯನ್ ವರದಿ ಮಾಡಿದೆ.
ಎಲ್ಲಿಯಾದರೂ ಪ್ರಾಣಿಗಳಿಂದ ಸೋಂಕು ಹರಡುವುದಾಗಿದ್ದರೆ ಮಾಲಕರು ಅಂಗಡಿಗಳನ್ನು ಮುಚ್ಚುತ್ತಿದ್ದರು. ಆದರೆ ಸೋಂಕು ಮನುಷ್ಯರಿಂದ ಹರಡುವ ಕಾರಣ ಮಾಲಕರಿಗೆ ನೌಕರರ ಆರೋಗ್ಯದ ಬಗ್ಗೆ ಚಿಂತೆಯಿಲ್ಲ ಎನ್ನುತ್ತಾರೆ ದಶಕಗಳಿಂದ ಮಾಂಸ ಸಂಸ್ಕರಣಾ ಘಟಕದಲ್ಲಿ ದುಡಿಯುತ್ತಿರುವ ಮಾರ್ಕೊ ಎಂಬ ನೌಕರ.
ಮಾಂಸದಂಗಡಿ ಮತ್ತು ಸಂಸ್ಕರಣಾ ಘಟಕಗಳ ನೌಕರರೆಲ್ಲ ಕಡಿಮೆ ಸಂಬಳಕ್ಕೆ ದುಡಿಯುತ್ತಿರುವ ಬಡವರು. ಬಹುತೇಕ ರೊಮೇನಿಯ ಮುಂತಾದ ದೇಶಗಳಿಂದ ಬಂದವರು. ಸ್ವಂತ ದುಡ್ಡಿನಲ್ಲಿ ಪಿಪಿಇ ಕಿಟ್‌ಗಳನ್ನು ಖರೀದಿಸುವಷ್ಟು ಸಾಮರ್ಥ್ಯ ಅವರಲ್ಲಿ ಇಲ್ಲ.
ಮಾಂಸದಂಗಡಿಗಳು ಮತ್ತು ಸಂಸ್ಕರಣಾ ಘಟಕಗಳು ಸಾಮಾನ್ಯವಾಗಿ ಕೊಳಕು ಪ್ರದೇಶಗಳಾಗಿರುತ್ತವೆ. ಇಂಥಹ ಕಡೆ ಕೋವಿಡ್ ವೈರಸ್ ಮಾತ್ರವಲ್ಲದೆ ಇತರ ರೋಗರುಜಿನಗಳು ಬರುವ ಸಾಧ್ಯತೆಯೂ ಹೆಚ್ಚು ಇರುತ್ತದೆ. ಆದರೆ ನೌಕರರು ಯಾವುದೇ ಸುರಕ್ಷಾ ವಿಧಾನಗಳಿಲ್ಲದೆ ಇಲ್ಲಿ ದುಡಿಯುತ್ತಿರುತ್ತಾರೆ.
ಅಯರ್‌ಲ್ಯಾಂಡ್ ಮಾತ್ರವಲ್ಲ ಜಗತ್ತಿನಾದ್ಯಂತ ಕೋವಿಡ್ ವೈರಸ್ ಮಾಂಸ ಸಂಸ್ಕರಣಾ ಘಟಕಗಳು ಮತ್ತು ಇನ್ನಿತರ ಆಹಾರ ಸಂಸ್ಕರಣಾ ಘಟಕಗಳ ಮೇಲೆ ವ್ಯತಿರಿಕ್ತ ಪರಿಣಾಮಗಳನ್ನು ಬೀರಿದೆ. ಅನೇಕ ಘಟಕಗಳು ನೌಕರರ ಕೊರತೆಯಿಂದ ಮುಚ್ಚಿವೆ. ಅಯರ್‌ಲ್ಯಾಂಡ್‌ವೊಂದರಲ್ಲೇ ಮಾಂಸ ಘಟಕಗಳ 571 ನೌಕರರು ಕೋವಿಡ್ ಸೋಂಕಿಗೊಳಗಾಗಿದ್ದಾರೆ. ಉತ್ತರ ಅಯರ್‌ಲ್ಯಾಂಡಿನಲ್ಲೂ ಸೋಂಕಿತರು ಬಹಳ ಸಂಖ್ಯೆಯಲ್ಲಿದ್ದು ಕಳೆದ ವಾರ ಓರ್ವ ನೌಕರ ವೈರಸ್‌ಗೆ ಬಲಿಯಾಗಿದ್ದಾನೆ.