ಬೆಳಗಾವಿ: ವರ್ಷದಲ್ಲಿ ಅತಿ ಹೆಚ್ಚು ಮದುವೆ ಮುಹೂರ್ತ ಇರುವ ತಿಂಗಳಲ್ಲೇ ಕೋವಿಡ್ 19 ಮಹಾಮಾರಿ ಬಂದು ಅಪ್ಪಳಿಸಿದ್ದು, ಮದುವೆಗಳನ್ನೇ ನಂಬಿಕೊಂಡು ಬದುಕುವ ಬ್ಯಾಂಡ್, ಬ್ಯಾಂಜೋ, ಮಂಗಳವಾದ್ಯ ಕಲಾವಿದರ ತುತ್ತಿನ ಚೀಲವನ್ನೇ ಲಾಕ್‌ಡೌನ್ ಕಸಿದುಕೊಂಡು ಬಿಟ್ಟಿದೆ.
ಏಪ್ರೀಲ್, ಮೇ, ಜೂನ್ ತಿಂಗಳಲ್ಲಿಯೇ ಅತಿ ಹೆಚ್ಚು ಮದುವೆ, ಮುಂಜಿ, ಧಾರ್ಮಿಕ ಕಾರ್ಯಕ್ರಮಗಳ ಮುಹೂರ್ತಗಳು ಇರುತ್ತವೆ. ಆದರೆ ಈ ತಿಂಗಳಲ್ಲಿಯೇ ಮಹಾಮಾರಿ ಕೋವಿಡ್ 19 ದಿಂದಾಗಿ ಇಡೀ ದೇಶಾದ್ಯಂತ ಲಾಕ್ ಡೌನ್ ವಿಧಿ ಸಲಾಗಿದೆ. ಹೀಗಾಗಿ ಮದುವೆಗಳಿಗೆ ಅಗತ್ಯವಾಗಿ ಬೇಕಾಗುವ ಮಂಗಳವಾದ್ಯ, ಬ್ಯಾಂಡ್, ಬ್ಯಾಂಜೋ ಕಲಾವಿದರಿಗೆ ಭಾರೀ ಸಂಕಷ್ಟ ಎದುರಾಗಿದೆ.
ಲಾಕ್‌ಡೌನ್‌ದಿಂದಾಗಿ ಸಭೆ, ವಿವಾಹ, ಧಾರ್ಮಿಕ ಸಮಾರಂಭಗಳನ್ನು ಬಂದ್ ಮಾಡಲಾಗಿದೆ. ಎಲ್ಲ ಮದುವೆ, ಮುಂಜಿ ಸಮಾರಂಭಗಳನ್ನು ಮುಂದೂಡಲಾಗಿದೆ. ಮದುವೆ ಮೆರವಣಿಗೆ, ವಿವಾಹ ಕಾರ್ಯಕ್ರಮಕ್ಕೆ ಜರೂರಾಗಿ ಬೇಕಾಗುವ ಮಂಗಳವಾದ್ಯಗಳಿಗೂ ಬ್ರೇಕ್ ಬಿದ್ದಿದೆ. ರಾಜ್ಯದಲ್ಲಿ 550-600 ಬ್ಯಾಂಡ್ ಕಂಪನಿಗಳಿದ್ದು, ಸಾವಿರಾರು ಮಂಗಳವಾದ್ಯಗಳ ತಂಡಗಳು ಇವೆ. ಮದುವೆ ಸಮಾರಂಭಗಳನ್ನೇ ನಂಬಿರುವ ಈ ಕಲಾವಿದರಿಗೆ ಕಷ್ಟವಾಗಿದೆ, ವರ್ಷದಲ್ಲಿ ನಾಲ್ಕೈದು ತಿಂಗಳುಗಳ ಕಾಲ ಮದುವೆ ಸಮಾರಂಭಗಳು ನಡೆಯುತ್ತವೆ. ಒಂದು ಬ್ಯಾಂಡ್ ಕಂಪನಿಯಲ್ಲಿ ಕಲಾವಿದರು, ಕಾರ್ಮಿಕರು ಸೇರಿದಂತೆ ಸುಮಾರು 20ರಿಂದ 25 ಜನ ದುಡಿಯುತ್ತಿರುತ್ತಾರೆ. ರಾಜ್ಯದಲ್ಲಿ ಇಂಥ ಸಾವಿರಾರು ಕಾರ್ಮಿಕರ ಉದ್ಯೋಗವನ್ನೇ ಲಾಕ್ ಡೌನ್ ಕಸಿದುಕೊಂಡಿದೆ.
ಈ ಕಲಾವಿದರನ್ನು ಹಾಗೂ ಕಾರ್ಮಿಕರನ್ನು ನಂಬಿಕೊಂಡಿರುವ ಇವರ ಕುಟುಂಬಸ್ಥರ ಸ್ಥಿತಿಯೂ ಶೋಚನೀಯವಾಗಿದೆ. ಬ್ಯಾಂಡ್ ಕಂಪನಿಗಳಲ್ಲಿ ಇದ್ದುಕೊಂಡು ಆಲ್ಪಸ್ವಲ್ಪ ಬರುವ ಸಂಬಳದಲ್ಲಿಯೇ ಬದುಕು ಸಾಗಿಸುತ್ತಾರೆ. ಬ್ಯಾಂಡ್ ಕಂಪನಿ ಮಾಲೀಕರು, ಕಲಾವಿದರು ಹಾಗೂ ಕಾರ್ಮಿಕರು ದುಡಿಮೆ ಇಲ್ಲದೇ ಸಮಸ್ಯೆ ಅನುಭವಿಸುತ್ತಿದ್ದಾರೆ. ಜೂನ್ ತಿಂಗಳಿಂದ ಮಳೆಗಾಲ ಶುರುವಾದರೆ ಮದುವೆಗಳು ನಡೆಯುವುದಿಲ್ಲ. ಮತ್ತೆ ಒಂದು ವರ್ಷ ಕಾಯಬೇಕಾಗುತ್ತದೆ ಎನ್ನುತ್ತಾರೆ ಬ್ಯಾಂಡ್ ಮಾಲೀಕರು.
ಬ್ಯಾಂಡ್ ಬಾರಿಸುವ ಸೀಜನ್ ಮುಗಿದಾಗ ಕಲಾವಿದರು ಬೀದಿ ಬೀದಿಗಳಲ್ಲಿ ಸಣ್ಣಪುಟ್ಟ ವ್ಯಾಪಾರ ಮಾಡುವುದು, ಕೆಲವರು ಪೊರಕೆ ತಯಾರಿಸುವ ಕಾರ್ಯದಲ್ಲಿ ತೊಡಗುತ್ತಾರೆ. ಮೊದಲೇ ಬಡತನದಲ್ಲಿ ಜೀವನ ಸಾಗಿಸುತ್ತಿರುವ ಈ ಜನರು ಮನೆಯಲ್ಲಿ ಯಾವುದಾದರೂ ಕಾಂರ್ಯಕ್ರಮ ನಡೆಸಲು ಕೈಗಡ ಪಡೆದುಕೊಳ್ಳುತ್ತಾರೆ. ಈ ಸಾಲ ತುಂಬಲು ಮತ್ತೆ ವರ್ಷಪೂರ್ತಿ ದುಡಿಯಬೇಕಾಗುತ್ತದೆ. ಇಂಥ ಬಡತನದಲ್ಲಿರುವ ಈ ಕಲಾವಿದರಿಗೆ ಸರ್ಕಾರ ಪರಿಹಾರ ನೀಡಿ ನೆರವಿಗೆ ನಿಲ್ಲಬೇಕು ಎಂದು ಬ್ಯಾಂಡ್ ಮಾಲೀಕ ಸುಭಾಷ ಭಜಂತ್ರಿ ಹೇಳುತ್ತಾರೆ.
ಮದವಿ ಫಂಕ್ಷನ್‌ಗೋಳ ಬಂದ್ ಆಗಿ ನಮ್ಮ ಜೀವನಾ ಮೂರಾಬಟ್ಟೆ ಆಗೈತಿ. ಕೆಲಸ ಇದ್ರ ನಮ್ಮ ಹೊಟ್ಟಿ ತುಂಬತೆ„ತಿ. ವರ್ಸದಾಗಿನ ಉದ್ಯೋಗ ಈ ಕೋವಿಡ್ 19 ರೋಗ ಬಂದ ಕಸಕೊಂಡ ಬಿಟೈತಿ. ಮುಹೂರ್ತಗೋಳ ಮುಗದು ಅಂದ್ರ ಮುಂದಿನ ವರ್ಸಕ್ಕ ನಮ್ಮಕೆಲಸಾ. ತುತ್ತ ಅನ್ನಕ್ಕ ಕಷ್ಟಾ ಪಡೋಂಗ ಆಗೈತಿ. ಹಿಂಗಾದ್ರ ಬದಕೋದ ಹೆಂಗ? –
ದುರ್ಗಪ್ಪ ಭಜಂತ್ರಿ, ಬ್ಯಾಂಡ್ ಕಲಾವಿದರು
ವರ್ಷದಲ್ಲಿ ವಿವಾಹ ಮುಹೂರ್ತಗಳು ಇದೇ ತಿಂಗಳಲ್ಲಿಯೇ ಅತಿ ಹೆಚ್ಚು ಇರುತ್ತವೆ. ಆದರೆ ಈಗ ಲಾಕ್‌ಡೌನ್‌ದಿಂದಾಗಿ ಈ ವರ್ಷದ ಉದ್ಯೋಗವೇ ಇಲ್ಲ. ಸಾವಿರಾರು ಕಲಾವಿದರು ಹಾಗೂ ಮಾಲೀಕರು ಸಂಕಷ್ಟದಲ್ಲಿ ಬದುಕುತ್ತಿದ್ದಾರೆ. ಹೀಗಾಗಿ ಸರ್ಕಾರ ನಮ್ಮ ನೆರವಿಗೆ ನಿಂತು ಸಹಾಯ ಮಾಡಬೇಕು. –
ಪರಶುರಾಮ ಭಜಂತ್ರಿ, ಬ್ಯಾಂಡ್ ಮಾಲೀಕರು
–ಭೈರೋಬಾ ಕಾಂಬಳೆ