Advertisement

ಕೋವಿಡ್ ಸೃಷ್ಟಿಸಿರುವ ಮಾನಸಿಕ ಸಮಸ್ಯೆಗಳು ಮತ್ತು ತತ್ಸಂಬಂಧಿ ಆಪ್ತ ಸಲಹೆ

04:19 PM May 15, 2020 | Hari Prasad |

ಅನಪೇಕ್ಷಿತವಾಗಿ ಮಾನವ ಜನಾಂಗದ ಮೇಲೆ ಎರಗಿರುವ ಈ ಕೋವಿಡ್ ಮಹಾಮಾರಿಯಿಂದಾಗಿ ಜನಸಾಮಾನ್ಯರ ಬದುಕು ಮೂರಾಬಟ್ಟೆಯಾಗಿದೆ. ಸರಿಯಾದ ಕೆಲಸ ಕಾರ್ಯಗಳಿಲ್ಲ, ಕೈಯಲ್ಲಿ ಹಣವಿಲ್ಲ, ಭವಿಷ್ಯದ ಭದ್ರತೆಯಿಲ್ಲ, ಮುಂದೇನೋ ಎಂಬುದು ತಿಳಿದಿಲ್ಲ… ಹೀಗೆ ಎಲ್ಲಾ ‘ಇಲ್ಲ’ಗಳು ಒಮ್ಮಲೇ ಬಂದೆರೆಗಿದಾಗ ಮನುಷ್ಯ ದೃತಿಗೆಡುವುದು ಸಹಜ. ಮತ್ತು ಇದು ಹಲವಾರು ಮಾನಸಿಕ ಸಮಸ್ಯೆಗಳಿಗೆ ಕಾರಣವಾಗುವ ಸಾಧ್ಯತೆಗಳೂ ಇವೆ. ಆದರೆ ಇವುಗಳನ್ನೆಲ್ಲಾ ಎದುರಿಸಿಕೊಂಡೇ ಭವಿಷ್ಯದ ಬದುಕನ್ನು ರೂಪಿಸಿಕೊಳ್ಳಬೇಕೆಂಬ ಆಪ್ತ ಸಲಹೆಯನ್ನು ಈ ಲೇಖನದ ಮೂಲಕ ನೀಡಿದ್ದಾರೆ ಮಣಿಪಾಲ KMCಯಲ್ಲಿ ಮಾನಸಿಕ ಚಿಕಿತ್ಸಾ ವಿಭಾಗದಲ್ಲಿ ಸಹಾಯಕ ಪ್ರಾದ್ಯಾಪಕಿಯಾಗಿರುವ ಡಾ. ಶ್ವೇತಾ ಟಿ.ಎಸ್. ಅವರು

Advertisement

ಕೋವಿಡ್‌ 19 ವೈರಸ್‌ ಎಲ್ಲಾ ಜನಸಾಮಾನ್ಯರನ್ನು ಕಾಡುತ್ತಿರುವ ಒಂದು ಗಂಭೀರ ಸ್ವರೂಪದ ಆರೋಗ್ಯ ಸಮಸ್ಯೆಯಾಗಿ ರೂಪುಗೊಂಡಿದೆ. ಈ ಸಮಸ್ಯೆ ಬರೀ ಭಾರತ ದೇಶಕ್ಕೆ ಅಥವಾ ನಮ್ಮ ರಾಜ್ಯ ಜಿಲ್ಲೆಗಳಿಗೆ ಮಾತ್ರ ಸೀಮಿತವಾಗಿಲ್ಲ. ಈ ಒಂದು ದೊಡ್ಡ ಆರೋಗ್ಯದ ಸಮಸ್ಯೆ ವಿಶ್ವವನ್ನೇ ಕಾಡುತ್ತಿರುವ ಬಿಡಿಸಲಾಗದ ಯಕ್ಷ ಪ್ರಶ್ನೆಯಾಗಿ ಪರಿಣಮಿಸಿದೆ.

ಈಗಾಗಲೇ ನಮಗೆಲ್ಲಾ ತಿಳಿದಿರುವಂತೆ ಈ ವೈರಾಣು ಡಿಸೆಂಬರ್‌ 2019ರಲ್ಲಿ ಚೀನಾದ ವುಹಾನ್‌ ಪಟ್ಟಣದ, ಹುಬೈನಲ್ಲಿ ಕಂಡು ಬಂದಿದ್ದು ನಂತರದ ದಿನಗಳಲ್ಲಿ ಇದರ ಅಬ್ಬರ ಕಾಲ ಕ್ರಮೇಣ ರಾಜ್ಯ, ದೇಶಗಳನ್ನು ಮೀರಿ ಪ್ರಪಂಚವನ್ನೇ ವ್ಯಾಪಿಸಿಕೊಂಡು ಬಿಟ್ಟಿರುವ ಮಹಾಮಾರಿ ಎಂದರೆ ತಪ್ಪಾಗಲಾರದು.

ಈ ರೋಗದ ಲಕ್ಷಣಗಳಾದ ಒಣಕೆಮ್ಮು, ಜ್ವರ, ಉಸಿರಾಟದ ಸಮಸ್ಯೆ ಹಾಗೂ ನಿತ್ರಾಣಗಳಿಂದ ಕೂಡಿದ್ದು ಈ ವೈರಸ್‌ಗೆ ತುತ್ತಾಗಿರುವ ವ್ಯಕ್ತಿಯ ಸಂಪರ್ಕಕ್ಕೆ ಬಂದವರಿಗೆಲ್ಲಾ ಸರಾಸರಿ ಶೇಕಡ 15% ರಷ್ಟು ಅವರಿಗೂ ವ್ಯಾಪಿಸಿಕೊಳ್ಳುವ ಶಕ್ತಿಯನ್ನು ಒಳಗೊಂಡಿದೆ. ಇದನ್ನು ತಿಳಿದವರು World War II (ಎರಡನೇ ವಿಶ್ವಯುದ್ಧ ನಂತರದಲ್ಲಿ ಇದೇ ಮೊದಲ ಬಾರಿಗೆ ಇಷ್ಟು ಸಮಸ್ಯೆಯನ್ನು ಇಡೀ ಪ್ರಪಂಚವೇ ಎದುರುಸುತ್ತಿರುವ ದೊಡ್ಡ ಸಮಸ್ಯೆ ಎಂದಿದ್ದಾರೆ.)

ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ ಶೇಖಡ 30% ರಾಷ್ಟ್ರಗಳು ಕೋಡ್‌ 19 ಎದುರಿಸಲು ಅಥವಾ ಹಿಮ್ಮೆಟಿಸಲು ಸಿದ್ಧವಾಗಿಲ್ಲ. ಈಗ ತಿಳಿದಿರುವ ಮಟ್ಟಿಗೆ ಇದಕ್ಕೆ ಸರಿಯಾದ ಯಾವುದೇ ಚಿಕಿತ್ಸೆ ಪೂರ್ತಿ ಪ್ರಮಾಣದಲ್ಲಿ ವ್ಯಕ್ತಿಗಳ ಮೇಲೆ ಪ್ರಯೋಗ ಮಾಡಲು ಸಿದ್ಧಲ್ಲ. ಅದರೆ ಸದ್ಯಕ್ಕೆ ತಿಳಿದಿರುವುದೇನೆಂದರೆ ಸಾಮಾಜಿಕ ಹಾಗೂ ದೈಹಿಕ ಅಂತರ ಕಾಯ್ದುಕೊಳ್ಳುವುದರಿಂದ ಈ ಸಮಸ್ಯೆಯಿಂದ ಸ್ವಲ್ಪ ಮಟ್ಟಿಗೆ ದೂರವಿರಬಹುದು.

Advertisement

ಹಾಗಾಗಿ ಭಾರತ ದೇಶಗಳಂತ ಹೆಚ್ಚಿನ ಜನಸಂದಣಿ ಇರುವ ದೇಶಗಳಲ್ಲಿ ಇಂತಹ ಸಮಸ್ಯೆ ಅತೀ ವೇಗದಲ್ಲಿ ವ್ಯಾಪಿಸುವ ಮೂಲಕ ಸಾವುಗಳನ್ನು ಹೆಚ್ಚಿಸುವ ಮಾರಕ ರೋಗ ಎಂದರೆ ತಪ್ಪಾಗಲಾರದು.

ಈ ನಿಟ್ಟಿನಲ್ಲಿ ನಮ್ಮ ಭಾರತದ ಮುಂದಿರುವ ದೊಡ್ಡ ಪ್ರಶ್ನೆಯನ್ನು ಎದುರಿಸಲು ನಮ್ಮ ಪ್ರಧಾನಿ ನರೇಂದ್ರ ಮೋದಿಯವರು National Lockdown ಜಾರಿಗೆ ತಂದಿದ್ದಾರೆ. ಈ ಇಡೀ ದೇಶವನ್ನು ಈ ರೀತಿಯಾಗಿ ಲಾಕ್‌ಡೌನ್‌ಗೆ ಒಳಪಡಿಸಿ ಜನರನ್ನು ಸಾವಿನ ಅಂಚಿನಿಂದ ರಕ್ಷಿಸಲು ಹರಸಾಹಸ ಮಾಡುತ್ತಿದ್ದಾರೆ.

ಈ ಸಮಸ್ಯೆಯನ್ನು ದೂರ ಮಾಡಲು ವಿಜ್ಞಾನಿಗಳು, ತಜ್ಞ ವೈದ್ಯ ಸಮೂಹ‌, ಕ್ಲಿನಿಕಲ್‌ ಸೈಕಾಲಾಜಿಸ್ಟ್‌, ಸಾಮಾಜಿಕ ಕಾರ್ಯಕರ್ತರು, ನರ್ಸ್‌ಗಳು ಹಾಗೂ ಪೊಲೀಸ್ ವ್ಯವಸ್ಥೆ‌, ನಮ್ಮ ಸರಕಾರಗಳು ಹಾಗೂ ಮಾಧ್ಯಮದವರು ಹಗಲಿರುಳೆನ್ನದೆ ಶ್ರಮಿಸುತ್ತಿದ್ದಾರೆ. ಈ ಒಂದು ಸಂದರ್ಭದಲ್ಲಿ ನಮಗೆ ತಿಳಿಯದಿರುವ ಅದೆಷ್ಟೋ ಸಮಸ್ಯೆಗಳು ಕೂಡ ಇದರ ಮುಂದಿದೆ

ಅದೇನೆಂದರೆ ಈ ಲಾಕ್‌ಡೌನ್‌ಗೆ ಯಾರೂ ಮಾನಸಿಕವಾಗಿ ಹಾಗೂ ಆರ್ಥಿಕವಾಗಿ ಸಿದ್ಧರಾಗಿಲ್ಲದೇ ಇದ್ದಿದ್ದು. ಇದಕ್ಕೆ ಕಾರಣ ರಾಷ್ಟ್ರವ್ಯಾಪಿ ಲಾಕ್ ಡೌನ್ ನಿರ್ಧಾರವನ್ನು ರಾತ್ರೋರಾತ್ರಿ ತೆಗೆದುಕೊಳ್ಳಬೇಕಾಗಿ ಬಂದಿದ್ದು. ಈ ವಿಚಾರವಾಗಿ ಎಲ್ಲಾ ರೀತಿಯ ಸಂಪರ್ಕ ಸೇವೆಗೆ ಕಡಿವಾಣ ಹಾಕಿ ಯಾರು ಅವರ ಮನೆ ಬಿಟ್ಟು ಹೊರ ಹೋಗದ ಹಾಗೆ, ಮನೋರಂಜನೆಯ ಮೂಲಗಳಾದ ಮಲ್ಟಿಪ್ಲೆಕ್ಸ್ ಗಳು, ಮಾಲ್‌ಗ‌ಳು, ಕ್ಲಬ್‌ಗಳು ಹಾಗೂ ಬಾರ್‌ಗಳನ್ನು ಮಾತ್ರವಲ್ಲದೇ ಎಲ್ಲಾ ರೀತಿಯ ಆರ್ಥಿಕ, ಧಾರ್ಮಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಚಟುವಟಿಕೆಗಳಿಗೆ ಬ್ರೇಕ್ ಹಾಕಬೇಕಾಯಿತು.

ಎಲ್ಲರಿಗೂ ಗೊತ್ತಿರುವಂತೆ ಮನುಷ್ಯ ಸಂಘಜೀವಿ. ಈ ರೀತಿ ಕಣ್ಣಿಗೆ ಕಾಣದ ವೈರಸ್ ಒಂದರ ಕಾರಣದಿಂದ ಏಕಾಏಕಿ ಎಲ್ಲಾ ಕಾರ್ಯಚಟುವಟಿಕೆಗಳನ್ನು ಸ್ಥಗಿತಗೊಳಿಸಬೇಕಾಗಿ ಬಂದಂತಹ ಸಂದರ್ಭದಲ್ಲಿ ಕೆಲವರು ಒಂಟಿಯಾಗಿಯೇ ತಮ್ಮ ಮನೆಗಳಲ್ಲಿ, ಹಾಸ್ಟೆಲ್‌ಗ‌ಳಲ್ಲಿ, ರೂಮ್‌ನಲ್ಲಿ ಕಳೆಯುವಂತಾಗಿದೆ. ಇವರೆಲ್ಲಾ ತಮ್ಮ ತಂದೆ-ತಾಯಿ, ಕುಟುಂಬದವರಿಂದ ದೂರವಾಗಿ ಕಂಗೆಟ್ಟಿದ್ದಾರೆ.

ಹಾಗೇ ದಿನಗೂಲಿ ಕೆಲಸಗಾರರು ಮುಂದಿನ ಜೀವನ ಹೇಗೋ ಏನೋ ತಿಳಿಯದಾಗಿದ್ದಾರೆ. ಪ್ರೈವೈಟ್‌ ಕಂಪನಿಯಲ್ಲಿ ನೌಕರಿ ಮಾಡುವವರು ತಮ್ಮ ಕೆಲಸ ಕಳೆದುಕೊಳ್ಳುತ್ತಿದ್ದಾರೆ ಹಾಗೂ ಮುಂಬರುವ ದಿನಗಳಲ್ಲಿ ಕೆಲಸ ದೊರಕ್ಕುತ್ತದೆಯೋ ಇಲ್ಲವೋ ಎಂಬ ಚಿಂತೆಯಲ್ಲಿದ್ದಾರೆ. ಇನ್ನೊಂದಷ್ಟು ಜನರಿಗೆ ಸರಿಯಾದ ಸಮಯಕ್ಕೆ ವೈದ್ಯರಲ್ಲಿ ಹೋಗಲಾರದೆ ತೊಂದರೆ ಅನುಭವಿಸುವಂತಾಗಿತ್ತು. ಇದಕ್ಕಿಂತಲೂ ಹೆಚ್ಚಾಗಿ ಪ್ರತೀದಿನ ಕುಡಿತವನ್ನು ನೆಚ್ಚಿಕೊಂಡಿದ್ದವರು, ಮದ್ಯ ಸಿಗದೇ ಒಂದಷ್ಟು withdrawal symptomsನಿಂದ ಬಳಲುವಂತಾಗಿತ್ತು.

ಹೀಗೆ ಈ ಅನಿರೀಕ್ಷಿತ ಮತ್ತು ಅನಪೇಕ್ಷಿತ ಲಾಕ್ ಡೌನ್ ಎಂಬುದು ಕೆಲವರನ್ನು ಒಂಟಿತನದ ಕೂಪಕ್ಕೆ ತಳ್ಳಿದರೆ ಇನ್ನು ಕೆಲವರನ್ನು ನಿರುದ್ಯೋಗದ ಸಮಸ್ಯೆಗೆ ಒಡ್ಡಿದೆ. ಮತ್ತೆ ಕೆಲವರಿಗೆ ಆರೋಗ್ಯ ಹಾಗೂ ಹಣಕಾಸಿನ ಸಮಸ್ಯೆಗಳನ್ನು ತಂದೊಡ್ಡಿರುವುದಂತೂ ಸುಳ್ಳಲ್ಲ.

ಈ ಲಾಕ್‌ಡೌನ್‌ನಿಂದ ದಿನ ಪೂರ್ತಿ ಮನೆಯಲ್ಲಿ ಕಳೆಯುವ ಕೆಲವು ದಂಪತಿಗಳಲ್ಲಿ ಕಲಹ ಹಾಗೂ ಕೆಲವೊಂದಿಷ್ಟು ಹೆಣ್ಣು ಮಕ್ಕಳು ದೈಕ ಹಾಗೂ ಮಾನಸಿಕ ದೌರ್ಜನ್ಯಗಳಂತಹ ಪ್ರಕರಣಗಳು ದೇಶದ ವಿವಿಧ ಭಾಗಗಳಲ್ಲಿ ನಡೆಯುತ್ತಿರುವುದು ವರದಿಯಾಗುತ್ತಲೇ ಇದೆ.

ಈ ಲಾಕ್‌ಡೌನ್‌ನಿಂದ ಮುಂಬರುವ ದಿನಗಳಲ್ಲಿ ಜನರು ಖಿನ್ನತೆಗೆ, ಒತ್ತಡಕ್ಕೆ ಒಳಗಾಗುವುದಲ್ಲದೇ ಮಾನಸಿಕವಾಗಿ ಕೂಡ ಕುಗ್ಗಬಹುದು. ನಿರುದ್ಯೋಗಗಳಿಂದ ಬಹಳಷ್ಟು ಜನ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಉದ್ಭವಿಸಿದರೂ ಆಶ್ಚರ್ಯವಿಲ್ಲ.

ಇನ್ನೂ ಈ ಮಾರಕ ರೋಗಕ್ಕೆ ತಮ್ಮ ಪ್ರೀತಿ ಪಾತ್ರರನ್ನು ಕಳೆದುಕೊಂಡ ಕುಟುಂಬದ ಸದಸ್ಯರುಗಳು ಕೊನೆಗಳಿಗೆಯಲ್ಲಿ ಭೇಟಿಯಾಗಲು ಆಗದೇ, ಅಂತಿಮ ವಿಧಿವಿಧಾನಗಳನ್ನು ಶಾಸ್ತ್ರೋಕ್ತವಾಗಿ ಮಾಡಲಾಗದೇ Guilt (ಅಪರಾಧಿ ಮನೋಭಾವ) ಅವರನ್ನು ಅಸಹಾಯಕತೆಗೆ ಒಳಗಾಗಿಸುತ್ತದೆ.

ಈ ಕೊನೆ ಕ್ಷಣಗಳಲ್ಲಿ ತಮ್ಮವರಿಗೆ ಸರಿಯಾದ ಆರೈಕೆ ಮಾಡಲಾಗದೆ ತಾವು ಸರಿಯಾಗಿ ಚಿಕಿತ್ಸೆ ಸೂಕ್ತ ಸಮಯದಲ್ಲಿ ಕೊಡಿಸಿದ್ದೇವೋ ಇಲ್ಲವೋ ಎನ್ನುವ ಪ್ರಶ್ನೆಗಳು ಅವರನ್ನು ಕಾಡುವುದಲ್ಲದೇ, ಮುಂದೆ ಇವರನ್ನು Post Traumatic Stress Disorder (ಆಘಾತದ ನಂತರದ ಒತ್ತಡದಿಂದಾಗುವ ಅಸ್ವಸ್ಥತೆ), Dipression (ಖಿನ್ನತೆ) Stress (ಒತ್ತಡ) Suicide (ಆತ್ಮಹತ್ಯೆ) ಇವುಗಳಿಗೆ ದೂಡುವಲ್ಲಿ ಕಾರಣವಾಗುವ ಸಾಧ್ಯತೆಗಳು ಹಲವಾರು.

ಹಾಗಾಗಿ, ಕೋವಿಡೋತ್ತರ ಮಾನಸಿಕ ಸಮಸ್ಯೆಗಳನ್ನು ಎದುರಿಸಲು ನಾವೆಲ್ಲಾ ಮಾನಸಿಕವಾಗಿ ಸಿದ್ಧರಾಗಬೇಕಿದೆ. ನಿಮ್ಮಲ್ಲಿ ಅಥವಾ ನಿಮ್ಮ ಬಳಗದವರಲ್ಲಿ ಈ ರೀತಿಯ ಸಮಸ್ಯೆಗಳು ಕಂಡುಬಂದಲ್ಲಿ ತಕ್ಷಣವೇ ನಿಮ್ಮ ಆಪ್ತ ಸಮಾಲೋಚಕರನ್ನು ಸಂಪರ್ಕಿಸುವ ವ್ಯವಸ್ಥೆ ಮಾಡಿ. ಹಾಗೂ ಇನ್ನೂ ಅವಶ್ಯಕತೆ ಕಂಡು ಬಂದಲ್ಲಿ ಮನೋರೋಗ ಚಿಕಿತ್ಸಾ ವಿಭಾಗಗಳಿಗೆ ಭೇಟಿ ಕೊಡಲು ಹಿಂಜರಿಯದಿರಿ.

ಕಣ್ಣಿಗೆ ಕಾಣದ ಈ ವೈರಾಣು ವಿರುದ್ಧದ ಈ ಹೋರಾಟದಲ್ಲಿ ನಾವೆಲ್ಲಾ ಒಂದಾಗಿ ಶ್ರಮಿಸೋಣ


– ಡಾ| ಶ್ವೇತ ಟಿ.ಎಸ್‌., ಸಹಾಯಕ ಪ್ರಾಧ್ಯಾಪಕರು, ಕ್ಲಿನಿಕಲ್‌ ಸೈಕಾಲಜಿ ವಿಭಾಗ, ಕೆ.ಎಂ.ಸಿ. ಮಣಿಪಾಲ.

Advertisement

Udayavani is now on Telegram. Click here to join our channel and stay updated with the latest news.

Next