Advertisement

ಕೋವಿಡ್ 19 ತಡೆಗೆ ಮಾದರಿ ಯೋಧರು

01:57 PM Apr 18, 2020 | Suhan S |

ತೇರದಾಳ: ಕ್ರೂರಿ ಕೋವಿಡ್ 19 ಭೀತಿ ಹಿನ್ನೆಲೆಯಲ್ಲಿ ತಹಶೀಲ್ದಾರ್‌ ಪ್ರಶಾಂತ ಚನಗೊಂಡ, ಪಿಎಸ್‌ಐ ವಿಜಯ್‌ ಕಾಂಬಳೆ ಅವರೊಂದಿಗೆ ದೇಶದ ವಿವಿಧೆಡೆ ಸೇವೆಯಲ್ಲಿದ್ದು ರಜೆಗೆ ಬಂದಿರುವ ಸೈನಿಕರು ನಗರದಲ್ಲಿ ಕೋವಿಡ್ 19 ವೈರಸ್‌ ತಡೆಗಟ್ಟುವ ಪ್ರಯತ್ನದಲ್ಲಿ ಪಾಲ್ಗೊಂಡು ಗಮನ ಸೆಳೆದಿದ್ದಾರೆ.

Advertisement

ನಗರದ ಸುಮಾರು ಇನ್ನೂರಕ್ಕು ಹೆಚ್ಚು ಯುವಕರು ಭಾರತೀಯ ಸೈನ್ಯದ ವಿವಿಧ ಹುದ್ದೆಯಲ್ಲಿದ್ದಾರೆ. ಅವರಲ್ಲಿ ಹನುಮಂತ ಜಂಗನವರ(ಬಿಹಾರ), ಸುನೀಲ ಹನಗಂಡಿ(ಪುಣೆ), ನಾಗೇಶ ತಮದಡ್ಡಿ(ಜಮ್ಮು), ಸಿದ್ದು ತೇರದಾಳ(ಛತ್ತಿಸಘಡ), ಕಿರಣಕುಮಾರ ಕಾಗವಾಡ(ಆಸ್ಸಾಂ), ಮಹೇಶ ಬೆಂಡವಾಡ (ಛತ್ತಿಸಘಡ), ಪ್ರಕಾಶ ಹಟ್ಟೆನ್ನವರ (ಅರುಣಾಚಲ ಪ್ರದೇಶ) ಮುಂತಾದವರು ಹಗಲಿರುಳು ದೇಶಸೇವೆ, ರಾಷ್ಟ್ರ ರಕ್ಷಣೆ ಮಾಡುತ್ತಿರುವ ಯುವಕರಾಗಿದ್ದಾರೆ. ವಿಶ್ರಾಂತಿಗಾಗಿ ರಜೆಯ ಮೇಲೆ ಬಂದಿರುವ ಇವರು ಕೋವಿಡ್ 19 ದಿಂದ ಇಲ್ಲಿನ ಭಯಾನಕ ಸ್ಥಿತಿಗತಿ ಅರ್ಥೈಸಿಕೊಂಡು, ವಿಶ್ರಾಂತಿ ಬೇಡ, ನಾವು ಸಹ ಕೋವಿಡ್ 19 ಹರಡದಂತೆ ಜಾಗೃತಿ ಮೂಡಿಸಲು ನೆರವಾಗೋಣವೆಂದು ಪೊಲೀಸರೊಂದಿಗೆ ಸೇರಿ ವಿಶೇಷ ಕರ್ತವ್ಯ ಮಾಡುತ್ತಿದ್ದಾರೆ.

ಬೆಳ್ಳಂಬೆಳಗ್ಗೆ ತಹಶೀಲ್ದಾರ್‌ ಫೀಲ್ಡಿಗೆ: ನಸುಕಿನಲ್ಲೆ ಬಂದ ತಹಶೀಲ್ದಾರರು ಅಂಚೆ ಕಚೇರಿ ಬಳಿ ವಾಹನ ಬಿಟ್ಟು ಕಾಲ್ನಡಿಗೆಯಲ್ಲಿ ಐಸಿಐಸಿಐ ಬ್ಯಾಂಕ್‌, ಪಂಚಾಕ್ಷರಿ ಗಲ್ಲಿ, ಸಿದ್ಧೇಶ್ವರ ಗಲ್ಲಿ, ಜವಳಿ ಬಜಾರ್‌, ಇನಾಮ್‌ದಾರ ಗಲ್ಲಿ, ಎಸ್‌ಬಿಐ ವೃತ್ತ, ಕಲ್ಲಟ್ಟಿ ಗಲ್ಲಿ, ಕೋಳೆಕರ ಮಠ, ಪ್ರಭು ದೇವಸ್ಥಾನ, ಕೆವಿಜಿ ಬ್ಯಾಂಕ್‌, ಪರೀಟ ಗಲ್ಲಿ, ಚಾವಡಿ ವೃತ್ತ, ನಾಡಗೌಡರ ಓಣಿ, ಮಗದುಮ್‌ ಗಲ್ಲಿ, ಕುಂಬಾರ ಗಲ್ಲಿ ಹೀಗೆ ಸಂಚರಿಸಿದರು. ಅಲ್ಲಲ್ಲಿ ಕುಳಿತವರನ್ನು ಮನೆಗೆ ಕಳುಹಿಸುವ ಕೆಲಸ ಮಾಡಿದರು. ಕಂದಾಯ ನಿರೀಕ್ಷಕ ಬಸವರಾಜ ತಾಳಿಕೋಟಿ, ಕೆ.ಎಚ್‌. ಸಣ್ಣಟ್ಟಿ, ಆನಂದ ಕೋಲೂರ, ಮಹಾದೇವ ಯಲ್ಲಟ್ಟಿ ಮುಂತಾದವರಿದ್ದರು.

ವಿಶ್ರಾಂತಿ ಮಾಡದೆ ಸಮಾಜದ ಸೇವೆ ಮಾಡುತ್ತಿರುವ ಯುವ ಸೈನಿಕರ ಕಾರ್ಯ ನೋಡಿದವರೆಲ್ಲರೂ ಮೆಚ್ಚಿಕೊಂಡರು. ದೇಶ ರಕ್ಷಣೆ ಮಾಡುವ ಸೈನಿಕರು ರಜೆಯಲ್ಲೂ ಸ್ವಯಂ ಸೇವಕರಾಗಿ ಕಾರ್ಯ ನಿರ್ವಹಿಸಿ ಯುವ ಜನಾಂಗಕ್ಕೆ ಮಾದರಿಯಾಗಿದ್ದಾರೆ. ಅವರಿಗೊಂದು ಸಲಾಂ ಹೇಳಲೆಬೇಕು.

Advertisement

Udayavani is now on Telegram. Click here to join our channel and stay updated with the latest news.

Next